ಸೋಮವಾರ, ಜುಲೈ 4, 2022
22 °C
ಮಾಲೂರು ವಿದ್ಯಾರ್ಥಿನಿ ಕೊಲೆ ಪ್ರಕರಣ– ಆರೋಪಿ ತಪ್ಪೊಪ್ಪಿಗೆ ಹೇಳಿಕೆ

24 ದಿನದಲ್ಲಿ ಆರೋಪಪಟ್ಟಿ ಸಲ್ಲಿಕೆ: ವಿಚಾರಣೆ ಆರಂಭ

ಜೆ.ಆರ್‌.ಗಿರೀಶ್‌ Updated:

ಅಕ್ಷರ ಗಾತ್ರ : | |

ಕೋಲಾರ: ಜಿಲ್ಲೆಯಾದ್ಯಂತ ಆಕ್ರೋಶದ ಕಿಡಿ ಹೊತ್ತಿಸಿದ್ದ ಮಾಲೂರು ವಿದ್ಯಾರ್ಥಿನಿಯ ಕೊಲೆ ಹಾಗೂ ಅತ್ಯಾಚಾರ ಯತ್ನ ಪ್ರಕರಣದ ತನಿಖೆಯನ್ನು ಘಟನೆ ನಡೆದ 24 ದಿನದಲ್ಲಿ ಪೂರ್ಣಗೊಳಿಸಿರುವ ಪೊಲೀಸರು ಇಲ್ಲಿನ ಎರಡನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ.

ಸಂತ್ರಸ್ತ ವಿದ್ಯಾರ್ಥಿನಿಯು ಆ.1ರಂದು ಸಂಜೆ ಶಾಲೆಯಿಂದ ಸ್ನೇಹಿತೆಯ ಜತೆ ಮಾಲೂರು ರೈಲ್ವೆ ಕೆಳ ಸೇತುವೆ ಮಾರ್ಗದ ಕಾಲುದಾರಿಯಲ್ಲಿ ಮನೆಗೆ ನಡೆದು ಹೋಗುತ್ತಿದ್ದಾಗ ಆಕೆಯನ್ನು ಅಡ್ಡಗಟ್ಟಿ ಅತ್ಯಾಚಾರ ಮಾಡಲೆತ್ನಿಸಿದೆ ಎಂದು ಆರೋಪಿ ಟಿ.ಎನ್‌.ಸುರೇಶ್‌ಬಾಬು ತಪ್ಪೊಪ್ಪಿಗೆ ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ಆರೋಪಪಟ್ಟಿಯಲ್ಲಿ ತಿಳಿಸಿದ್ದಾರೆ.

ಸಂತ್ರಸ್ತ ವಿದ್ಯಾರ್ಥಿನಿಯ ಮನೆಯ ಸಮೀಪದ ನಿರ್ಮಾಣ ಹಂತದ ಕಟ್ಟಡದಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಸುರೇಶ್‌ಬಾಬು ಆಕೆಯ ಮೇಲೆ ಅತ್ಯಾಚಾರ ಎಸಗಲು ಸಂಚು ರೂಪಿಸಿದ್ದ. ಘಟನೆ ನಡೆಯುವುದಕ್ಕೂ 1 ತಿಂಗಳು ಮುನ್ನ ಮನೆ ಸಮೀಪವೇ ವಿದ್ಯಾರ್ಥಿನಿಯನ್ನು ಚುಡಾಯಿಸಿದ್ದ. ವಿದ್ಯಾರ್ಥಿನಿ ಈ ಸಂಗತಿಯನ್ನು ತಂದೆಗೆ ತಿಳಿಸಿದ್ದಳು. ನಂತರ ತಂದೆಯು ಸುರೇಶ್‌ಬಾಬುಗೆ ಬುದ್ಧಿಮಾತು ಹೇಳಿ ಪೊಲೀಸರಿಗೆ ದೂರು ಕೊಡುವುದಾಗಿ ಬೆದರಿಸಿದ್ದರು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರತಿನಿತ್ಯ ತಂದೆಯ ಜತೆ ಬೈಕ್‌ನಲ್ಲಿ ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಯು ಶಾಲೆ ಮುಗಿದ ನಂತರ ಸ್ನೇಹಿತೆಯೊಂದಿಗೆ ರೈಲ್ವೆ ಕೆಳ ಸೇತುವೆ ಮಾರ್ಗದ ಕಾಲುದಾರಿಯಲ್ಲಿ ಮನೆಗೆ ನಡೆದು ಬರುತ್ತಿದ್ದಳು. ಈ ಸಂಗತಿ ತಿಳಿದಿದ್ದ ಆರೋಪಿ ಘಟನಾ ದಿನ ಕಾಲುದಾರಿಯಲ್ಲಿ ಕಾದು ಕುಳಿತು ಕೃತ್ಯ ಎಸಗಿದ್ದಾನೆ. ಆರೋಪಿಯು ವಿದ್ಯಾರ್ಥಿನಿಯನ್ನು ಹಿಡಿದು ಎಳೆದಾಡಿದ್ದರಿಂದ ಸ್ನೇಹಿತೆಯು ಗಾಬರಿಬಿದ್ದು ಓಡಿ ಹೋಗಿ ಆಕೆಯ ಪೋಷಕರಿಗೆ ವಿಷಯ ತಿಳಿಸಿದ್ದಳು. ಪೋಷಕರು ಸ್ಥಳಕ್ಕೆ ಬರುವಷ್ಟರಲ್ಲಿ ಸುರೇಶ್‌ಬಾಬು ವಿದ್ಯಾರ್ಥಿನಿಯ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಪರಾರಿಯಾಗಿದ್ದ ಎಂಬ ಅಂಶಗಳು ಆರೋಪಪಟ್ಟಿಯಲ್ಲಿವೆ.

ಗುರುತು ಹಿಡಿದಿದ್ದಾರೆ: ಕಾಲುದಾರಿ ಪಕ್ಕದ ಜಮೀನಿನ ಪೊದೆಯಲ್ಲಿ ವಿದ್ಯಾರ್ಥಿನಿಯ ಶವ ಪತ್ತೆಯಾಗಿತ್ತು. ಆ ಜಮೀನಿನ ಮಾಲೀಕ ನಾರಾಯಣಸ್ವಾಮಿ ಅವರು ಘಟನಾ ಸಂದರ್ಭದಲ್ಲಿ ಕಾಲುದಾರಿ ಮಾರ್ಗವಾಗಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ಆರೋಪಿಯನ್ನು ಕಂಡು ಹಿಡಿದುಕೊಳ್ಳಲು ಯತ್ನಿಸಿದ್ದರು. ಆದರೆ, ಆರೋಪಿಯು ಅವರ ಕೈಗೆ ಸಿಗದೆ ಪರಾರಿಯಾಗಿದ್ದ. ನಾರಾಯಣಸ್ವಾಮಿ ಹಾಗೂ ಸಂತ್ರಸ್ತೆಯ ಸ್ನೇಹಿತೆಯು ಆರೋಪಿಯನ್ನು ಗುರುತು ಹಿಡಿದಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.

ಪೂರಕ ದಾಖಲೆಪತ್ರ: ಆರೋಪಪಟ್ಟಿ ಜತೆಗೆ ಮರಣೋತ್ತರ ಪರೀಕ್ಷೆ ವರದಿ, ಆರೋಪಿಯ ತಪ್ಪೊಪ್ಪಿಗೆ ಹೇಳಿಕೆ, ವಿದ್ಯಾರ್ಥಿನಿಯ ಪೋಷಕರ ಹೇಳಿಕೆ, ಡಿಎನ್‌ಎ ಪರೀಕ್ಷೆ ವರದಿ, ಸಾಕ್ಷಿದಾರರ ಹೇಳಿಕೆ ಪ್ರತಿ, ಸಾಂದರ್ಭಿಕ ಸಾಕ್ಷ್ಯಗಳ ವಿವರ ಹಾಗೂ ಪ್ರಕರಣಕ್ಕೆ ಸಂಬಂಧಪಟ್ಟ ಪೂರಕ ದಾಖಲೆಪತ್ರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ವಕೀಲರ ನೇಮಕ
ವಿದ್ಯಾರ್ಥಿನಿ ಕೊಲೆ ಪ್ರಕರಣವನ್ನು ವಿಶೇಷ ಪ್ರಕರಣವಾಗಿ ಪರಿಗಣಿಸಿರುವ ನ್ಯಾಯಾಧೀಶೆ ಬಿ.ಎಸ್‌.ರೇಖಾ ಅವರು ಶನಿವಾರದಿಂದ ವಿಚಾರಣೆ ಆರಂಭಿಸಿದ್ದಾರೆ. ಮೊದಲ ದಿನ ವಿದ್ಯಾರ್ಥಿನಿಯ ತಂದೆ, ಘಟನೆಯ ಪ್ರತ್ಯಕ್ಷದರ್ಶಿಯಾದ ಸ್ನೇಹಿತೆ ಹಾಗೂ ಶವ ಪತ್ತೆಯಾಗಿದ್ದ ಜಮೀನಿನ ಮಾಲೀಕರ ವಿಚಾರಣೆ ನಡೆಯಿತು. ಆರೋಪಿ ಪರ ವಾದಿಸಲು ಯಾವುದೇ ವಕೀಲರು ಮುಂದೆ ಬಾರದ ಕಾರಣ ನ್ಯಾಯಾಲಯವೇ ವಕೀಲರನ್ನು ನೇಮಿಸಿದೆ.

* 201 ಪುಟಗಳು ಆರೋಪಪಟ್ಟಿ
* 45 ಮಂದಿ ಸಾಕ್ಷಿಗಳ ಹೇಳಿಕೆ
* 4 ತನಿಖಾ ತಂಡಗಳ ರಚನೆ
* 14 ಸಿಬ್ಬಂದಿ ಹಗಲಿರುಳು ಕೆಲಸ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು