ಕೋಲಾರ: ‘ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಸದ್ಯಕ್ಕೆ ಖಾಲಿ ಇಲ್ಲ. ಬದಲಾವಣೆಗೆ ಪ್ರಶ್ನೆ ಎಲ್ಲಿಂದ ಬರುತ್ತದೆ. ಅವಕಾಶ ಕೊಟ್ಟರೆ ಜಿಲ್ಲೆಯ ಹಿರಿಯ ಶಾಸಕರನ್ನೇ ಮುಖ್ಯಮಂತ್ರಿ ಮಾಡಲಿ’ ಎಂದು ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಐದು ವರ್ಷಗಳ ಅವಧಿ ಪೂರ್ಣಗೊಳಿಸಲಿದ್ದಾರೆ. ಇದರ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯ ಇಲ್ಲ’ ಎಂದರು.
‘ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಅವರು ಇವರು ಹೇಳುವ ಮಾತುಗಳಿಗೆ ಉತ್ತರಿಸುವ ಅವಶ್ಯವಿಲ್ಲ. ನಮ್ಮ ಪಕ್ಷದ ಹೈಕಮಾಂಡ್ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬದಲಾವಣೆ ಬಗ್ಗೆ ಎಲ್ಲೂ ಪ್ರಸ್ತಾಪ ಮಾಡಿಲ್ಲ. ಸರ್ಕಾರದ ಮಟ್ಟದಲ್ಲಿ ಏನಾದರೂ ಚರ್ಚೆ ಮಾಡಿದ್ದಾರಾ ಇಲ್ಲವೇ ಇಲ್ಲ. ವಿರೋಧ ಪಕ್ಷಗಳ ಊಹಾಪೋಹಗಳಿಗೆ ಉತ್ತರಿಸುವ ಅಗತ್ಯವಿಲ್ಲ’ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದಲ್ಲಿ ಕೆಲವರು ಆಸೆ ಪಟ್ಟಿದ್ದಾರೆ ಎಂಬ ಪ್ರಶ್ನೆಗೆ, ‘ಮುಂದಕ್ಕೆ ಏನಾದರೂ ಸಿಗಬಹುದು ಎಂದು ಕೆಲವರು ಈಗಿನಿಂದಲೇ ಕಲ್ಲು ಹಾಕಲು ಹೊರಟಿರಬಹುದು. ಆಸೆಗಾಗಿ ಮಾತಾಡಿದ್ದಾರೆ. ಹಾಗೇನಾದರೂ ಇದ್ದಲ್ಲಿ ಬೆಂಬಲ ಕೊಡಿ ಎಂಬುದಾಗಿ ನನ್ನನ್ನು ಯಾರಾದರೂ ಕೇಳುತ್ತಿದ್ದರು. ಇದುವರೆಗೆ ಅಂತಹ ಪ್ರಸ್ತಾಪ ನಮ್ಮ ಮುಂದೆ ಇಲ್ಲ’ ಎಂದರು.
‘ಉತ್ತರ ಕರ್ನಾಟಕಕ್ಕೆ, ಬೆಳಗಾವಿ ಭಾಗಕ್ಕೆ ಮುಖ್ಯಮಂತ್ರಿ ಬೇಕು ಎನ್ನುತ್ತಾರೆ. ಕೋಲಾರಕ್ಕೂ ಕೊಡಲಿ ಬಿಡಿ ಬೆಂಗಳೂರಿಗೆ ಹತ್ತಿರವಾಗಿದೆ. ಮೊದಲ ಮುಖ್ಯಮಂತ್ರಿ ಕೋಲಾರದಿಂದಲೇ ಆಗಿದ್ದರು. ಕೇಳುವುದರಲ್ಲಿ ತಪ್ಪಿಲ್ಲ’ ಎಂದು ನುಡಿದರು.
‘ಮುಡಾ ಹಗರಣದ ಬಗ್ಗೆ ಕಾಂಗ್ರೆಸ್ ಪಕ್ಷವೇ ತನಿಖೆಗೆ ಒತ್ತಾಯಿಸಿದೆ. ಯಾರೋ ಒಬ್ಬ ವ್ಯಕ್ತಿ ಅರ್ಜಿ ಕೊಟ್ಟ ಮಾತ್ರಕ್ಕೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ ಅಷ್ಟೇ. ಅದಕ್ಕೆ ಮುಖ್ಯಮಂತ್ರಿ ರಾಜೀನಾಮೆ ಕೊಡುವ ಅವಶ್ಯವಿಲ್ಲ’ ಎಂದರು.
2027ಕ್ಕೆ ನೀರು ಬಂದೇ ಬರುತ್ತದೆ
‘ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ 2027ಕ್ಕೆ ಎತ್ತಿನ ಹೊಳೆ ಯೋಜನೆಯಿಂದ ನೀರು ಬರಲಿದೆ. ಈಗಾಗಲೇ ಯೋಜನೆ ಪ್ರಾರಂಭವಾಗಿ ನೀರು ಹರಿಸಲಾಗುತ್ತಿದೆ. ನಮಗೆ 24 ಟಿಎಂಸಿ ಅಡಿ ನೀರು ಬರಲಿದೆ. ಅದರಲ್ಲಿ 9 ಟಿಎಂಸಿ ಅಡಿ ನೀರು ಕೆರೆಗಳಿಗೆ ತುಂಬಿಸಲಾಗುತ್ತದೆ. ಅಲ್ಲಿ ತನಕ ಬೇಸರ ಇದ್ದೇ ಇರುತ್ತದೆ. ಪರಿಸರ ನಾಶದ ಬಗ್ಗೆ ದೂರಗಳು ಇವೆ. ಇದಕ್ಕೆ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ಮಾಡಲಾಗಿದೆ. ಮುಂದೆ ಎಲ್ಲವೂ ಸರಿ ಹೋಗುತ್ತದೆ’ ಎಂದು ಕೊತ್ತೂರು ಮಂಜುನಾಥ್ ಹೇಳಿದರು.
ಸಚಿವ ಸ್ಥಾನ ಸಿ.ಎಂ ಸೇರಿದಂತೆ ಯಾವುದಕ್ಕೂ ನಾನು ಆಕಾಂಕ್ಷಿ ಅಲ್ಲ. ಬಸ್ ಕಾರು ಓಡಿಸು ಎಂದರೆ ಓಡಿಸುತ್ತೇನೆ. ರೈಲು ಓಡಿಸು ಎಂದು ಹೇಳಿದರೆ ಹೇಗೆ? ರೈಲಿನ ಗೇರು ಹಾಕಲು ಬರಲ್ಲ.ಕೊತ್ತೂರು ಮಂಜುನಾಥ್, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.