ಬುಧವಾರ, ಏಪ್ರಿಲ್ 21, 2021
23 °C

ಈಡಿಗರು ಸಮಾಜದ ಮುಖ್ಯವಾಹಿನಿಗೆ ಬನ್ನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಸಮಾಜದಲ್ಲಿ ಕಡಿಮೆ ಸಂಖ್ಯೆಯಲ್ಲಿರುವ ಈಡಿಗರು ರಾಜಕೀಯವಾಗಿ ಅಭಿವೃದ್ಧಿ ಹೊಂದಿದಾಗ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ’ ಎಂದು ಜಿಲ್ಲಾ ಆರ್ಯ ಈಡಿಗ ಸಮುದಾಯದ ಕೌಶಲಾಭಿವೃದ್ಧಿ ಸಂಘದ ಅಧ್ಯಕ್ಷ ನಾರಾಯಣಪ್ಪ ಹೇಳಿದರು.

ಗ್ರಾಮ ಪಂಚಾಯಿತಿಗಳಿಗೆ ಆಯ್ಕೆಯಾಗಿರುವ ಈಡಿಗ ಸಮುದಾಯದ ಸದಸ್ಯರಿಗೆ ಜಿಲ್ಲಾ ಆರ್ಯ ಈಡಿಗ ಸಮುದಾಯದ ಕೌಶಲಾಭಿವೃದ್ಧಿ ಸಂಘವು ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

‘ಜಿಲ್ಲೆಯಲ್ಲಿ ಈಡಿಗರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಇದರಿಂದ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಶೋಷಿತ ಸಮುದಾಯದ ಈಡಿಗರು ಸುಶಿಕ್ಷಿತರಾಗಬೇಕು. ಗ್ರಾ.ಪಂಗಳಿಗೆ ಆಯ್ಕೆಯಾಗಿರುವ ಸಮುದಾಯದವರು ಸಮಾಜವನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

‘ಸಂಘ ರಚನೆಯಾಗಿ 2 ವರ್ಷ ಪೂರೈಸಿದೆ. ಬೃಹತ್ ಕಾರ್ಯಕ್ರಮ ಮಾಡುವ ಮೂಲಕ ಸಮುದಾಯದ ಸಂಘಟನೆಗೆ ಒತ್ತು ನೀಡಬೇಕು. ಇದಕ್ಕೆ ಪ್ರತಿಯೊಬ್ಬರು ಸಹಕಾರ ನೀಡಬೇಕು’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ಕೋರಿದರು.

‘ಹಿರಿಯರ ಆಶಯದಂತೆ ಸಮಾಜದಲ್ಲಿ ಸಮುದಾಯದವರನ್ನು ಗುರುತಿಸಿ ಬಲಿಷ್ಠಗೊಳಿಸಬೇಕು. ಬದಲಾದ ಕಾಲಘಟ್ಟದಲ್ಲಿ ಸಮುದಾಯದವರು ಶಿಕ್ಷಣಕ್ಕೆ ಒತ್ತು ಕೊಡುತ್ತಿದ್ದಾರೆ ಮತ್ತು ಶೋಷಣೆಯಿಂದ ಮುಕ್ತರಾಗುತ್ತಿದ್ದಾರೆ. ಜಾಲಪ್ಪ ಪ್ರತಿಷ್ಠಾನ ರಚನೆ ಮಾಡಲಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಮತ್ತು ವೃತ್ತಿ ಕೌಶಲ ತರಬೇತಿ ನೀಡಲಾಗುತ್ತಿದೆ. ಜತೆಗೆ ಉದ್ಯೋಗಾವಕಾಶ ಕಲ್ಪಿಸಲಾಗುತ್ತಿದೆ. ಸಮುದಾಯದವರು ಇದರ ಪ್ರಯೋಜನ ಪಡೆಯಬೇಕು’ ಎಂದು ಕಿವಿಮಾತು ಹೇಳಿದರು.

ಸಂಘದ ಗೌರವಾಧ್ಯಕ್ಷ ಸೀತಾರಾಮಯ್ಯ, ಸದಸ್ಯರಾದ ಅಮರನಾರಾಯಣ, ನಾರಾಯಣಸ್ವಾಮಿ, ಸುಮನ್, ಬಂಗಾರಪೇಟೆ ತಾಲ್ಲೂಕು ಘಟಕದ ಅಧ್ಯಕ್ಷ ಆದಿನಾರಾಯಣ, ಮುಳಬಾಗಿಲು ತಾಲ್ಲೂಕು ಘಟಕದ ಕಾರ್ಯಾಧ್ಯಕ್ಷ ಶ್ರೀನಿವಾಸ್ ಪಾಲ್ಗೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.