ಬುಧವಾರ, ಏಪ್ರಿಲ್ 14, 2021
24 °C
ಕಾರ್ಯಕರ್ತರ ಸಭೆ

ಅನ್ನದಾತರ ರಕ್ಷಣೆಗೆ ಸಂಘಟನೆ ಕಟಿಬದ್ಧ: ಕರಾವೇ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ರೈತರ ಸಮಸ್ಯೆಗಳ ಪರಿಹಾರಕ್ಕೆ ಹಾಗೂ ಅನ್ನದಾತರ ರಕ್ಷಣೆಗೆ ಸಂಘಟನೆ ಕಟಿಬದ್ಧವಾಗಿದೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಹೇಳಿದರು.

ಇಲ್ಲಿ ಮಂಗಳವಾರ ನಡೆದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ‘ಸಂಘಟನೆಯು ನಾಡು, ನುಡಿ, ಜಲ, ಜನಪರ ಹೋರಾಟಕ್ಕಷ್ಟೇ ಸೀಮಿತವಾಗಿಲ್ಲ. ರೈತರ ಸಮಸ್ಯೆಗಳ ಪರಿಹಾರಕ್ಕೆ ಸಂಘಟನೆ ಹೋರಾಟ ನಡೆಸಲಿದೆ’ ಎಂದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದುರಾಡಳಿತದಿಂದ ರೈತರು ಬೀದಿಗೆ ಬಿದ್ದಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ರೈತಪರ ಕಾಳಜಿಯಿಲ್ಲ. ಸರ್ಕಾರಗಳು ರೈತರ ಹಿತ ಕಾಯುವಲ್ಲಿ ವಿಫಲವಾಗಿವೆ. ರೈತರ ಹಿತ ರಕ್ಷಣೆಗಾಗಿ ಸಂಘಟನೆ ವತಿಯಿಂದ ಬೆಂಗಳೂರಿನಲ್ಲಿ ಮಾರ್ಚ್‌ ಅಂತ್ಯಕ್ಕೆ ಬೃಹತ್ ಹೋರಾಟ ನಡೆಸುತ್ತೇವೆ’ ಎಂದು ತಿಳಿಸಿದರು.

‘ದೆಹಲಿಯಲ್ಲಿ ರೈತರು ತಮ್ಮ ಬೇಡಿಕೆಗಳ ಈಡೇರಿಕೆಗೆ ಹಲವು ತಿಂಗಳಿಂದ ಹೋರಾಟ ನಡೆಸುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರ ರೈತರ ಹೋರಾಟವನ್ನು ಗಂಭೀರವಾಗಿ ಪರಿಗಣಿಸದೆ ಚೆಲ್ಲಾಟವಾಡುತ್ತಿದೆ. ದೇಶಕ್ಕೆ ಆಹಾರ ಒದಗಿಸುತ್ತಿರುವ ರೈತರ ಸಮಸ್ಯೆಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಸರ್ಕಾರಕ್ಕೆ ರೈತರ ಬೇಡಿಕೆ ಕೇಳುವಷ್ಟು ಸೌಜನ್ಯವಿಲ್ಲ. ಕಾರ್ಪೊರೇಟ್ ಕಂಪನಿಗಳು ಮತ್ತು ಬಂಡವಾಳಶಾಹಿಗಳ ಕೈಗೊಂಬೆಯಾಗಿರುವ ಸರ್ಕಾರಗಳು ರೈತರನ್ನು ಬೀದಿಪಾಲು ಮಾಡಿವೆ’ ಎಂದು ಗುಡುಗಿದರು.

ವೈದ್ಯಕೀಯ ಕಾಲೇಜು: ‘ಕೋಲಾರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಬೇಕಿದೆ. ಸತತ ಬರಗಾಲ ಎದುರಿಸುತ್ತಿರುವ ಜಿಲ್ಲೆಯಲ್ಲಿ ವಿದ್ಯಾವಂತರಿಗೆ ಕೊರತೆಯಿಲ್ಲ. ರೈತರ ಮಕ್ಕಳು ಸುಶಿಕ್ಷಿತರಾಗಿ ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಸರ್ಕಾರ ಜಿಲ್ಲೆಯಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಾಣ ಮಾಡಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯದಲ್ಲಿ ಕನ್ನಡಪರ ಹೋರಾಟ, ನಾಡು, ನುಡಿ ರಕ್ಷಣೆಗೆ ಹಾಗೂ ಗಡಿ ಸಮಸ್ಯೆ ಸಂಬಂಧ ಸಂಘಟನೆ ನಡೆಸಿದ ಹೋರಾಟಗಳು ಯಶಸ್ವಿಯಾಗಿವೆ. ಕಾರ್ಯಕರ್ತರು ಸಂಘಟನೆಯ ಹೋರಾಟದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ರಾಜ್ಯದ 10 ಜಿಲ್ಲೆಗೆ ಭೇಟಿ ಕೊಟ್ಟು ಸಭೆ ನಡೆಸಿದ್ದೇನೆ. ಸಂಘಟನೆ ಬಲಪಡಿಸಲು ಕಾರ್ಯಕರ್ತರು ಶ್ರಮಿಸಬೇಕು’ ಎಂದು ಕಿವಿಮಾತು ಹೇಳಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ರಾಘವೇಂದ್ರ, ಸದಸ್ಯರಾದ ಲತಾಬಾಯಿ, ಮಂಜುನಾಥ್, ಮುರಳಿ ಪಾಲ್ಗೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು