ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಅಂಗಡಿ ಹರಾಜು ತಾತ್ಕಾಲಿಕ ಸ್ಥಗಿತ

ಕರ್ತವ್ಯ ಲೋಪ: ನಗರಸಭೆ ಪೌರಾಯುಕ್ತೆ ವಿರುದ್ಧ ಜಿಲ್ಲಾಧಿಕಾರಿಗೆ ದೂರು ಸಲ್ಲಿಕೆ
Last Updated 6 ಫೆಬ್ರುವರಿ 2021, 5:05 IST
ಅಕ್ಷರ ಗಾತ್ರ

ಕೆಜಿಎಫ್‌: ಎಂ.ಜಿ.ಮಾರುಕಟ್ಟೆ ಸೇರಿದಂತೆ ನಗರಸಭೆಗೆ ಸೇರಿದ ಎಲ್ಲ ಅಂಗಡಿಗಳ ಇ– ಹರಾಜು ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ನಗರಸಭೆ ಅಧ್ಯಕ್ಷ ವಳ್ಳಲ್‌ ಮುನಿಸ್ವಾಮಿ ಹೇಳಿದ್ದಾರೆ.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಗರಸಭೆಯ ಅಧಿಕಾರಿಗಳು ಇ– ಹರಾಜಿನ ಬಗ್ಗೆ ತಪ್ಪು ಮಾಹಿತಿಗಳನ್ನು ವರ್ತಕರಿಗೆ ನೀಡಿದ್ದಾರೆ. ಇದರಿಂದಾಗಿ ವರ್ತಕರು ಗೊಂದಲಕ್ಕೀಡಾಗಿದ್ದಾರೆ. ತಪ್ಪು ಸರಿಪಡಿಸುವ ತನಕ ಇ– ಹರಾಜು ಮಾಡುವುದಿಲ್ಲ. ಕರ್ತವ್ಯ ಲೋಪವೆಸಗಿದ ನಗರಸಭೆ ಪೌರಾಯುಕ್ತೆಯ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಿದ್ದೇನೆ ಎಂದು ಹೇಳಿದರು.

ಒಂದು ಅಂಗಡಿಗೆ ಎರಡು ನಂಬರ್ ಕೊಡುವುದು, ಅಳತೆಯಲ್ಲಿ ವ್ಯತ್ಯಾಸ ಮಾಡಲಾಗಿದೆ. ಮೊದಲು ನಮೂದು ಮಾಡಿದ್ದ ಅಂಗಡಿ ಸಂಖ್ಯೆಯನ್ನು ನಗರಸಭೆ ಕೌನ್ಸಿಲ್‌ಗೆ ಮಾಹಿತಿ ನೀಡದೆ, ಅಳಿಸಿ, ತಮ್ಮ ಇಷ್ಟಾನುಸಾರ ಮತ್ತೊಂದು ಸಂಖ್ಯೆ ಹಾಕಲಾಗಿದೆ. ಹೀಗೆ ಹಲವಾರು ಲೋಪಗಳನ್ನು ಮಾಡಿರುವ ಪೌರಾಯುಕ್ತೆ ಸರ್ವರ್ ಮರ್ಚೆಂಟ್‌ ವಿರುದ್ಧ ಸಾಕ್ಷಿ ಸಮೇತ ದೂರು ನೀಡಿದ್ದೇನೆ ಎಂದು ತಿಳಿಸಿದರು.

ಇ– ಹರಾಜು ಪ್ರಕ್ರಿಯೆ ಶುರುವಾದ ಸಂದರ್ಭದಿಂದ ಹಲವಾರು ತಪ್ಪುಗಳನ್ನು ವರ್ತಕರು ಎತ್ತಿ ತೋರಿಸುತ್ತಿದ್ದರು. ಶಾಸಕರಿಗೆ ಸಾಕಷ್ಟು ಮಂದಿ ದೂರು ಸಲ್ಲಿಸಿದ್ದರು. ಶಾಸಕಿಯ ಸೂಚನೆ ಮೇರೆಗೆ ಜಿಲ್ಲಾ ಅಭಿವೃದ್ಧಿ ಕೋಶದ ಯೋಜನಾಧಿಕಾರಿ ಅವರನ್ನು ಸ್ಥಳಕ್ಕೆ ಕರೆಸಲಾಗಿತ್ತು. ಅವರಿಗೂ ನಗರಸಭೆ ಮಾಡಿದ ಎಡವಟ್ಟುಗಳನ್ನು ವಿವರಿಸಲಾಯಿತು. ಅವರು ಕೂಡ ಸಿಬ್ಬಂದಿ ಮಾಡಿದ ತಪ್ಪುಗಳನ್ನು ಒಪ್ಪಿಕೊಂಡು ಇ– ಹರಾಜು ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಒಪ್ಪಿದರು ಎಂದು ವಳ್ಳಳ್‌ ಮುನಿಸ್ವಾಮಿ ತಿಳಿಸಿದರು.

ಮಾರುಕಟ್ಟೆಯಲ್ಲಿರುವ ಅಂಗಡಿಗಳನ್ನು ಪುನಃ ಅಳತೆ ಮಾಡುವಂತೆ ಸೂಚಿಸಲಾಗಿದೆ. ನಗರಸಭೆ ಸಿಬ್ಬಂದಿ ಮಾಡಿದ ಪಟ್ಟಿಯನ್ನು ವರ್ತಕರಿಗೆ ತೋರಿಸಲಾಗುವುದು. ಯಾವುದೇ ವ್ಯತ್ಯಾಸವಿದ್ದಲ್ಲಿ ಸರಿಪಡಿಸಲಾಗುವುದು. ನಂತರವೇ ಇ– ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. ಮಾರುಕಟ್ಟೆ ವಿಚಾರದಲ್ಲಿ ರಾಜಕೀಯ ಮಾಡಬಾರದು. ಆದರೆ ಮಾರುಕಟ್ಟೆ ವರ್ತಕರ ಹೆಸರಿನಲ್ಲಿ ಹುಟ್ಟಿಕೊಂಡಿರುವ ಸಂಘಗಳು ರಾಜಕೀಯ ಮಾಡುತ್ತಿವೆ. ಮಾರುಕಟ್ಟೆಯಲ್ಲಿ 10, 20, 30 ಅಂಗಡಿಗಳನ್ನು ಹೊಂದಿರುವವರು ತಮ್ಮ ತಪ್ಪು ಹೊರಗೆ ಬಾರದಂತೆ ತಡೆಯಲು ಬೇರೆಯವರ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಆದರೆ ಬಡವರ ಪರವಾಗಿ ನಗರಸಭೆ ಇದೆ ಎಂದರು.

ಶಾಸಕಿ ಎಂ.ರೂಪಕಲಾ ಸದನದಲ್ಲಿ ಮಾತನಾಡಿದ ನಂತರ, ಸಚಿವರು ಅವರನ್ನು ತಮ್ಮ ಕಚೇರಿಗೆ ಕರೆಸಿಕೊಂಡು ಮಾತನಾಡಿದ್ದಾರೆ. ಸಚಿವರೇ ಖುದ್ದಾಗಿ ನಗರಕ್ಕೆ ಬಂದು ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದ್ದಾರೆ ಎಂದು ಮುನಿಸ್ವಾಮಿ ಹೇಳಿದರು.

ಅಶೋಕನಗರ ರಸ್ತೆ ಒತ್ತುವರಿಯನ್ನು ತೆರವು ಮಾಡದೆ ಇದ್ದಲ್ಲಿ ನಗರಸಭೆ ಜೆಸಿಬಿ ಮೂಲಕ ಅಕ್ರಮ ಕಟ್ಟಡವನ್ನು ತೆರವು ಮಾಡುತ್ತದೆ. ಬಸ್‌ ನಿಲ್ದಾಣದಲ್ಲಿ ದ್ವಿಚಕ್ರ ಮತ್ತು ಕಾರುಗಳನ್ನು ನಿಲ್ಲಿಸುವ ಪರಂಪರೆಗೆ ತಡೆ ಹಾಕಲಾಗುವುದು. ಹುಲ್ಲು ಮಾರುಕಟ್ಟೆ ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು. ಇದರಿಂದಾಗಿ ಕೆಎಸ್ಅರ್‌ಟಿಸಿ ಮತ್ತು ಖಾಸಗಿ ಬಸ್‌ಗಳಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ನಗರಸಭೆ ಉಪಾಧ್ಯಕ್ಷೆ ದೇವಿ, ಸದಸ್ಯರಾದ ಜರ್ಮನ್‌, ಜಿ.ರಮೇಶ್‌, ವೇಣುಗೋಪಾಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT