ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್, ಬಿಜೆಪಿ ಒಂದೇ ನಾಣ್ಯದ ಎರಡು ಮುಖ: ವಿದ್ಯಾರ್ಥಿನಿ ಅಮೂಲ್ಯ

ಪೌರತ್ವ ಕಾಯ್ದೆ ಹೋರಾಟ ಸಮಿತಿ ಸಭೆ
Last Updated 27 ಜನವರಿ 2020, 19:30 IST
ಅಕ್ಷರ ಗಾತ್ರ

ಕೋಲಾರ: ‘ಮುಸ್ಲಿಂ, ಕ್ರೈಸ್ತರ ವಿಚಾರದಲ್ಲಿ ಕಾಂಗ್ರೆಸ್–ಬಿಜೆಪಿ ಒಂದೇ ನಾಣ್ಯದ ಎರಡು ಮುಖ. ಈ ಪಕ್ಷಗಳಿಂದ ಅಲ್ಪಸಂಖ್ಯಾತರಿಗೆ ಅಗಿರುವ ಅನುಕೂಲ ಏನು ಇಲ್ಲ’ ಎಂದು ವಿದ್ಯಾರ್ಥಿನಿ ಅಮೂಲ್ಯ ತಿಳಿಸಿದರು.

ಇಲ್ಲಿನ ಈದ್ಗಾ ಮೈದಾನದಲ್ಲಿ ಪೌರತ್ವ ಕಾಯ್ದೆ ಹೋರಾಟ ಸಮಿತಿಯಿಂದ ಸೋಮವಾರ ಎನ್‌ಆರ್‌ಸಿ, ಸಿಎಎ ವಿರೋಧಿಸಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿ, ‘ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಗ್ಗೋಲೆ ಮಾಡುವ ಪ್ರಯತ್ನ ನಡೆಯುತಿದೆ’ ಎಂದು ದೂರಿದರು.

‘ಭಾರತ ಪ್ರಜಾಪ್ರಭುತ್ವ ದೇಶ. ಇಲ್ಲಿ ಏಕ ಪಕ್ಷೀಯ ಅಧಿಕಾರವನ್ನು ಮೋದಿ, ಅಮಿತ್ ಶಾ ನಡೆಸುತ್ತಿದ್ದಾರೆ. 370 ಕಾಯ್ದೆ ರದ್ದು, ಸಿಎಎ, ಎನ್‌ಆರ್‌ಸಿ ಕಾಯ್ದೆಗಳನ್ನು ತಿದ್ದುಪಡಿಸುವ ಮೂಲಕ ಧರ್ಮ, ಜಾತಿಗಳ ಆಧಾರದ ಮೇಲೆ ವಿಂಗಡಣೆ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲ ದೇಶದಲ್ಲಿ ಅಲ್ಲಿನ ಜನರಿಂದ ಕಿರುಕುಳಕ್ಕೆ ಒಳಗಾಗಿರುವವರಿಗೆ ದೇಶದ ಪೌರತ್ವ ನೀಡಲು ಮುಂದಾಗಿದೆ. ಆದರೆ ಶ್ರೀಲಂಕಾ, ಚೀನಾ ಇತರೆ ದೇಶಗಳಲ್ಲಿ ಯಾರು ತೊಂದರೆಗೆ ಒಳಗಾಗಿಲ್ಲವೆ, ಸರ್ಕಾರದ ಅಧಿಕಾರಿಗಳು ಮನೆಯತ್ತಿರ ಬಂದು ಎನ್‌ಆರ್‌ಸಿಗೆ ದಾಖಲೆ ಕೇಳಿದರೆ ತೋರಿಸಲು ಎಲ್ಲಿಂದ ತರಬೇಕು’ ಎಂದು ಪ್ರಶ್ನಿಸಿದರು.

‘2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ನೋಟ್‌ ರದ್ದು, ಉದ್ಯೋಗ ಕಲ್ಪಿಸುವ ಕುರಿತು ರೂಪಿಸಿದ ಯೋಜನೆಗಳು ವಿಫಲವಾದವು. ದೇಶದ ಯುವಕರು ಉದ್ಯೋಗ ಕೇಳಿದ್ದಕ್ಕೆ ಪಕೋಡ ಮಾರಿಕೊಂಡು ಜೀವನ ಮಾಡಿ ಎಂದು ಪ್ರಧಾನಿ ಹೇಳಿದರು. ಈ ಸರ್ಕಾರವನ್ನು ಅಧಿಕಾರದಿಂದ ಬಿಳಿಸುವ ತನಕ ನಮ್ಮ ಹೋರಾಟ ಮುಂದುವರೆಯಬೇಕು’ ಎಂದು ಎಚ್ಚರಿಸಿದರು.

‘ಸಿಎಎ, ಎನ್‌ಆರ್‌ಸಿ ವಿರುದ್ಧ ಹೋರಾಟ ನಡೆಸುತ್ತಿರುವ ಕಾರಣ ಎಬಿವಿಪಿ ಕಾರ್ಯಕರ್ತರನ್ನು ಮುಂದೆ ಬಿಟ್ಟು ನಮ್ಮ ಮೇಲೆ ಹಲ್ಲೆ ಮಾಡಿಸಿದರು. ದೇಶದ್ರೋಹ ಪಟ್ಟಿಕಟ್ಟಿ ದೂರು ದಾಖಲಿಸಿದರು. ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುವ ದೇಶದ್ರೋಹಿಗಳಿಗೆ ನಾವು ಭಯ ಪಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

ಜನವಾದಿ ಮಹಿಳಾ ಸಂಘಟನೆಯ ಉಪಾಧ್ಯಕ್ಷೆ ವಿ.ಗೀತಾ ಮಾತನಾಡಿ, ‘ಆರ್‌ಎಸ್‌ಎಸ್‌, ಭಜರಂಗದಳ, ಬಿಜೆಪಿ ಅವರು ದೇಶ ಪ್ರೇಮಿಗಳಲ್ಲ. ಮುಸ್ಲಿಂರು, ಇಸ್ಲಾಮರು, ದಲಿತರು ದೇಶದ ನಿಜವಾದ ದೇಶಪ್ರೇಮಿಗಳು. ನಿಮ್ಮ ಹಾಗೆ ಸೆಂಟ್ರಲ್ ಜೈಲಿನಲ್ಲಿ ದೇಶದಲ್ಲಿ ಅಪಾಲಜಿ ಪತ್ರ ಬರೆದುಕೊಟ್ಟು ಬಂದವರಲ್ಲ’ ಎಂದು ಹೇಳಿದರು.

‘ಅಸ್ಸಾಂನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾದಾಗ ಸಾಕಷ್ಟು ಹೋರಾಟ ನಡೆಯಿತು. ಆ ಹೋರಾಟದಲ್ಲಿ ಹಲವರು ಪ್ರಾಣ ಕಳೆದುಕೊಂಡರು. ಸಿಎಎ, ಎನ್‍ಆರ್‌ಸಿಯ ದುಷ್ಪರಿಣಾಮದ ಬಗ್ಗೆ ಯಾರೂ ಯೋಚಿಸುತ್ತಿಲ್ಲ. ಕಾಯ್ದೆ ಹಿಂಪಡೆಯುವವರೆಗೂ ಹೋರಾಟ ನಡೆಸಬೇಕು’ ಎಂದು ಎಚ್ಚರಿಸಿದರು.

‘ಜಿಲ್ಲೆಯ ಸಮಸ್ಯೆಗಳ ವಿರುದ್ಧ ಹೋರಾಟ ಮಾಡಿದ್ದು ಮುಸ್ಲಿಂ ಮತ್ತು ದಲಿತರು. ಬಿಜೆಪಿಯವರು ಎಂದೂ ಹೋರಾಟ ನಡೆಸಿಲ್ಲ. ಬಿಜೆಪಿ ಹುಚ್ಚರಿಗೆ ಅಧಿಕಾರ ಸಿಕ್ಕಿರುವ ಹಿನ್ನಲೆಯಲ್ಲಿ ಬಂಡವಾಳಶಾಹಿಗಳ ಗುಲಾಮರಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಜಿಲ್ಲಾ ಅಂಜುಮಾನ್‌ ಇಸ್ಲಾಮಿಯಾ ಸಂಘಟನೆ ಅಧ್ಯಕ್ಷ ಜಮೀರ್‌ ಅಹಮ್ಮದ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಟ್ರಸ್ಟ್‌ನ ಅಧ್ಯಕ್ಷೆ ಶಾಜೀದ್ ಬೇಗಂ, ನಿವೃತ್ತ ಪ್ರಧ್ಯಾಪಕಿ ಪ್ರೊ.ವಾಜೂನಿಸ್ಸಾ, ಸಿಪಿಎಂ ಗೌರವಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ, ಮೌಲ್ವಿಗಳಾದ ಕಹಲೆ ಉಲ್ಲಾಸಾಬ್, ಇಶ್ರ, ವಿದ್ಯಾರ್ಥಿ ಹುಮೆಹಾನಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT