ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕತೆಗೆ ಸಹಕಾರಿ ರಂಗದ ಕೊಡುಗೆ ಅಪಾರ: ಗೋವಿಂದಗೌಡ

Last Updated 20 ಜುಲೈ 2019, 14:45 IST
ಅಕ್ಷರ ಗಾತ್ರ

ಕೋಲಾರ: ‘ದೇಶದ ಆರ್ಥಿಕತೆಗೆ ಅಪಾರ ಕೊಡುಗೆ ನೀಡಿರುವ ಸಹಕಾರಿ ರಂಗವನ್ನು ದ್ವೇಷ, ಸ್ವಾರ್ಥದ ಸಂಕೋಲೆಯಿಂದ ಬಿಡಿಸಿ ಬಲಗೊಳಿಸಲು ಮಾಧ್ಯಮ ಸಹಕಾರ ಅಗತ್ಯ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಅಭಿಪ್ರಾಯಪಟ್ಟರು.

ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘ ಹಾಗೂ ಸಹಕಾರ ಇಲಾಖೆ ಸಹಯೋಗದಲ್ಲಿ ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಸಹಕಾರಿ ಚಳವಳಿ ಅಭಿವೃದ್ಧಿಯಲ್ಲಿ ಮಾಧ್ಯಮದ ಪಾತ್ರ’ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

‘ಸಹಕಾರಿ ವ್ಯವಸ್ಥೆಯಲ್ಲಿ ಸಣ್ಣಪುಟ್ಟ ಲೋಪವಾದರೂ ಅದನ್ನು ದೊಡ್ಡದಾಗಿ ಬಿಂಬಿಸಲಾಗುತ್ತಿದೆ. ವಾಣಿಜ್ಯ ಬ್ಯಾಂಕ್‌ಗಳಲ್ಲಿ ನಡೆಯುವ ಕೋಟಿಗಟ್ಟಲೇ ಅವ್ಯವಹಾರ ಹೊರ ಬರುವುದೇ ಇಲ್ಲ. ಮಾಧ್ಯಮಗಳ ಈ ನಡೆಯು ಸಹಕಾರಿ ಚಳವಳಿ ಸರಿ ದಾರಿಯಲ್ಲಿ ಸಾಗಲು ಸಹಕಾರಿಗಳು ಸದಾ ಎಚ್ಚರಿಕೆಯಿಂದ ಇರುವಂತೆ ಮಾಡಿದೆ’ ಎಂದರು.

‘ಕುರುಬೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘವು (ಎಸ್‍ಎಫ್‌ಸಿಎಸ್‌) ಸಮಾಜಕ್ಕೆ ಬೇಕಾದ ಎಲ್ಲಾ ಅಗತ್ಯಗಳನ್ನು ಒಂದೇ ಸೂರಿನಡಿ ಒದಗಿಸುವ ಸೂಪರ್ ಮಾರ್ಕೆಟ್ ಸ್ಥಾಪಿಸುವ ಮೂಲಕ ಸಹಕಾರಿ ಸಾರಿಗೆ ಒದಗಿಸಿ ಜಿಲ್ಲೆಯಲ್ಲಿ ಹೆಸರು ಗಳಿಸಿದೆ. ಸಹಕಾರಿಗಳು ಸ್ವಾರ್ಥ ಬಿಟ್ಟರೆ ಇಂತಹ ಸಾಧನೆ ಸಾಧ್ಯವೆಂದು ಸಮಾಜಕ್ಕೆ ತೋರಿಸಿಕೊಟ್ಟಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಹಕಾರಿಗಳ ಜವಾಬ್ದಾರಿ: ‘ಜಿಲ್ಲೆಯ ಸಹಕಾರಿ ಕ್ಷೇತ್ರಕ್ಕೆ ಪಾಪಣ್ಣ, ನಾಗಿರೆಡ್ಡಿ, ಜಿ.ನಾರಾಯಣಗೌಡ, ಎಂ.ವಿ.ಕೃಷ್ಣಪ್ಪ ಅವರಂತಹ ಮಹನೀಯರು ಅಪಾರ ಕೊಡುಗೆ ನೀಡಿದ್ದಾರೆ. ಈ ಮಹನೀಯರ ಹಾದಿಯಲ್ಲಿ ಸಾಗುವ ಜವಾಬ್ದಾರಿ ಜಿಲ್ಲೆಯ ಸಹಕಾರಿಗಳ ಮೇಲಿದೆ’ ಎಂದು ಕಿವಿಮಾತು ಹೇಳಿದರು.

‘ಇಫ್ಕೋ, ಕ್ರಿಬ್ಕೋ ಸಹಕಾರಿ ಗೊಬ್ಬರ ಕಂಪನಿಗಳು ಬಂದ ನಂತರ ರೈತರಿಗೆ ಅನುಕೂಲವಾಗಿದೆ. ಇಂತಹ ಸಹಕಾರಿ ವ್ಯವಸ್ಥೆಯ ಬಲವರ್ಧನೆಯಿಂದ ಸಮಾಜದ ಅಭಿವೃದ್ಧಿ ಸಾಧ್ಯ. ಸ್ವಾಮಿನಾಥನ್ ಆಯೋಗದ ವರದಿ ಜಾರಿಯಾದರೆ ಅನೇಕ ರಾಜಕಾರಣಿಗಳು ಬೀದಿಗೆ ಬರುತ್ತಾರೆಂಬ ಭಯದಿಂದ ರೈತರ ಸ್ವಾಭಿಮಾನಿ ಬದುಕಿನ ಈ ವರದಿ ನನೆಗುದಿಗೆ ಬಿದ್ದಿದೆ’ ಎಂದು ವಿಷಾದಿಸಿದರು.

ದ್ವೇಷ ಸಹಜ: ಉಪನ್ಯಾಸ ನೀಡಿದ ಪತ್ರಕರ್ತ ಎ.ಎಂ.ಸುರೇಶ್, ‘ಸಹಕಾರಿ ವ್ಯವಸ್ಥೆಯಲ್ಲಿ ದ್ವೇಷ ಅಸೂಯೆ ಸಹಜ. ಇದನ್ನು ಮೀರಿ ಸಹಕಾರಿ ಚಳವಳಿ ಬೆಳೆಸಬೇಕು. ಸಹಕಾರ ಸಂಘದ ಸದಸ್ಯರು ಜವಾಬ್ದಾರಿಯಿಂದ ಸಭೆಗಳಿಗೆ ಬಂದು ಖರ್ಚು, ವೆಚ್ಚ ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡರೆ ನ್ಯೂನ್ಯತೆಯ ಅರಿವಾಗಿ ಸಂಘ ತಾನಾಗಿಯೇ ಅಭಿವೃದ್ಧಿ ಪಥದಲ್ಲಿ ಸಾಗುತ್ತದೆ’ ಎಂದು ಸಲಹೆ ನೀಡಿದರು.

‘ಸಹಕಾರಿ ವ್ಯವಸ್ಥೆ ಸಂವಿಧಾನದ ಆಶಯದಂತೆ ಸದಸ್ಯರಿಂದ ಸದಸ್ಯರಿಗಾಗಿ ಸದಸ್ಯರಿಗೋಸ್ಕರ ಇದೆ. ಇಲ್ಲಿ ಸರ್ವಾಧಿಕಾರಿ ಧೋರಣೆ ಸಲ್ಲದು. ಮಾಧ್ಯಮ ರಂಗ ಸಹಕಾರಿ ಚಳವಳಿಯ ಕುರಿತು ಹೆಚ್ಚಿನ ಗಮನ ಹರಿಸಬೇಕು. ಲೋಪ ಎತ್ತಿ ತೋರುವುದು ಮಾತ್ರ ಕೆಲಸವಲ್ಲ, ಅಲ್ಲಿ ನಡೆಯುವ ಸಾಮಾಜಿಕ ಅಭಿವೃದ್ಧಿ ಕುರಿತ ಲೇಖನಗಳು ಅಗತ್ಯ’ ಎಂದು ಪ್ರತಿಪಾದಿಸಿದರು.

ಚಕ್ರಗಳಿದ್ದಂತೆ: ‘ಮಾಧ್ಯಮ ಕ್ಷೇತ್ರವು ಸಹಕಾರಿ ಕ್ಷೇತ್ರಕ್ಕೆ ಉತ್ತಮ ಮಾರ್ಗದರ್ಶನ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವಂತಾಗಬೇಕು. ಸಹಕಾರ ಕ್ಷೇತ್ರ ಮತ್ತು ಮಾಧ್ಯಮ ಕ್ಷೇತ್ರ ಸಮಾಜವೆಂಬ ಬಂಡಿಯ ಎರಡು ಚಕ್ರಗಳಿದ್ದಂತೆ’ ಎಂದು ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ನಿರ್ದೇಶಕ ಸೊಣ್ಣೇಗೌಡ ಅಭಿಪ್ರಾಯಪಟ್ಟರು.

‘ಮಾಧ್ಯಮಗಳು ಸಹಕಾರ ಸಂಸ್ಥೆಯ ಮಾಹಿತಿಯನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪುವಂತೆ ಮಾಡುತ್ತಿವೆ. ಇದು ಸಹಕಾರ ಸಂಸ್ಥೆಗಳ ಅಭಿವೃದ್ಧಿಗೆ ಪೂರಕವಾಗಿದೆ’ ಎಂದು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಂ.ವೆಂಕಟಸ್ವಾಮಿ ಹೇಳಿದರು.

ರಾಜ್ಯ ಸರಕು ಸಾಗಣೆ ಮತ್ತು ಮಾರಾಟ ಸಹಕಾರ ಸಂಘದ ನಿರ್ದೇಶಕ ವಿ.ಮುನಿರಾಜು, ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕರಾದ ಶಾಂತಮ್ಮ, ಸುರೇಶ್, ರುದ್ರಸ್ವಾಮಿ, ಎಚ್.ಕೃಷ್ಣಪ್ಪ, ಅಶ್ವತ್ಥನಾರಾಯಣ, ಸಿಇಒ ಕೆ.ಎಂ.ಭಾರತಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT