ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜಿಎಫ್‌ನಲ್ಲಿ ಮತಾಂತರ ಜಾಲ ಸಕ್ರಿಯ

ವಿದೇಶಿ ಕ್ರೈಸ್ತ ಮಿಷನರಿಗಳಿಂದ ಹಣಕಾಸು ನೆರವು
Last Updated 20 ಮಾರ್ಚ್ 2021, 14:44 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಕೆಜಿಎಫ್‌ ತಾಲ್ಲೂಕಿನಲ್ಲಿ ಮತಾಂತರ ಜಾಲ ಸಕ್ರಿಯವಾಗಿದ್ದು, ಹಣದ ಆಮಿಷವೊಡ್ಡಿ ಹಿಂದೂ ಧರ್ಮದಿಂದ ಕ್ರಿಶ್ಚಿಯನ್‌ ಧರ್ಮಕ್ಕೆ ಸಾಮೂಹಿಕವಾಗಿ ಮತಾಂತರ ಮಾಡುತ್ತಿರುವ ಆರೋಪ ಕೇಳಿಬಂದಿದೆ.

ವಿದೇಶಿ ಕ್ರೈಸ್ತ ಮಿಷನರಿಗಳಿಂದ ಮತಾಂತರ ಜಾಲಕ್ಕೆ ಹಣಕಾಸು ನೆರವು ಹರಿದು ಬರುತ್ತಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದಲ್ಲಿನ ಕಡು ಬಡವರನ್ನು ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ. ಈ ಸಂಬಂಧ ಸ್ಥಳೀಯ ಪೊಲೀಸ್‌ ಠಾಣೆಗಳಿಗೆ ಆಗಾಗ್ಗೆ ದೂರುಗಳು ಬರುತ್ತಿವೆ.

ಈ ಹಿಂದೆ ಬ್ರಿಟೀಷರ ಆಳ್ವಿಕೆಗೆ ಒಳಪಟ್ಟಿದ್ದ ಕೆಜಿಎಫ್‌ ತಾಲ್ಲೂಕಿನಲ್ಲಿ 120ಕ್ಕೂ ಹೆಚ್ಚು ಚರ್ಚ್‌ಗಳಿವೆ. ಕ್ರೈಸ್ತ ಮಿಷನರಿಗಳು ಈ ಚರ್ಚ್‌ಗಳ ಮೂಲಕ ಧರ್ಮ ಪ್ರಚಾರ ನಡೆಸುತ್ತಿವೆ. ಪಾದ್ರಿಗಳು ಹಾಗೂ ಈಗಾಗಲೇ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿರುವವರು ಪರಿಶಿಷ್ಟರ ಮನೆಗೆ ಭೇಟಿ ಕೊಟ್ಟು ಧರ್ಮ ಪ್ರಚಾರ ಮಾಡುತ್ತಿದ್ದಾರೆ.

ಪರಿಶಿಷ್ಟ ಜಾತಿಯಲ್ಲಿನ ಆದಿ ದ್ರಾವಿಡ ಸಮುದಾಯವರಿಗೆ ಚರ್ಚ್‌ನ ಸದಸ್ಯತ್ವ ನೀಡಿ ಧಾರ್ಮಿಕ ಸಭೆ ಸಮಾರಂಭಗಳಿಗೆ ಆಹ್ವಾನಿಸಲಾಗುತ್ತಿದೆ. ಚರ್ಚ್‌ಗಳಲ್ಲಿ ನಡೆಯುವ ಪ್ರಾರ್ಥನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಬರುವ ಅನ್ಯ ಧರ್ಮೀಯರ ಆರ್ಥಿಕ ಮತ್ತು ಅನಾರೋಗ್ಯ ಸಮಸ್ಯೆ ಪರಿಹರಿಸುವುದಾಗಿ, ಮಕ್ಕಳ ಶಿಕ್ಷಣಕ್ಕೆ ಹಣದ ನೆರವು ನೀಡುವುದಾಗಿ ಆಮಿಷವೊಡ್ಡಿ ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರವಾಗುವಂತೆ ಪ್ರಚೋದಿಸಲಾಗುತ್ತಿದೆ.

ಮತಾಂತರಗೊಂಡ ಜನರ ಸಂಖ್ಯೆಗೆ ಅನುಗುಣವಾಗಿ ವಿದೇಶಿ ಕ್ರೈಸ್ತ ಮಿಷನರಿಗಳು ಮತಾಂತರ ಜಾಲಕ್ಕೆ ಹಣಕಾಸು ನೆರವು ನೀಡುತ್ತಿವೆ. ಮತಾಂತರಗೊಂಡವರು ಆ ಸಂಗತಿಯನ್ನು ಬಹಿರಂಗಪಡಿಸದೆ ಹಿಂದೂ ಧರ್ಮದಲ್ಲೇ ಮುಂದುವರಿದಿರುವುದಾಗಿ ಹೇಳಿಕೊಂಡು ಪರಿಶಿಷ್ಟರ ಮೀಸಲಾತಿ ಸವಲತ್ತು ಅನುಭವಿಸುತ್ತಿದ್ದಾರೆ. ಆದರೆ, ಮತಾಂತರಗೊಂಡಿರುವುದಾಗಿ ನೋಟರಿ ಮಾಡಿಸಿದ್ದಾರೆ.

ಅಧಿಕಾರಿಗಳೂ ಸಕ್ರಿಯ: ಸರ್ಕಾರಿ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು, ನೌಕರರು ಸಹ ಮತಾಂತರ ಜಾಲದಲ್ಲಿ ಸಕ್ರಿಯರಾಗಿದ್ದಾರೆ. ಕೆಜಿಎಫ್‌ನ ಪೊಲೀಸ್‌ ಠಾಣೆಗಳು, ನಗರಸಭೆ, ಶಾಲಾ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಾಕಷ್ಟು ಪರಿಶಿಷ್ಟರು ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರವಾಗಿದ್ದಾರೆ.

ಹೀಗೆ ಮತಾಂತರಗೊಂಡವರು ಮೀಸಲಾತಿ ಸವಲತ್ತು ಪಡೆಯುವ ಏಕೈಕ ಕಾರಣಕ್ಕೆ ಇಂದಿಗೂ ತಮ್ಮ ಜಾತಿ ಪ್ರಮಾಣದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರೆಂದೇ ನಮೂದು ಮಾಡಿಸುತ್ತಿದ್ದಾರೆ. ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರಗೊಂಡಿರುವ ಕೆಜಿಎಫ್‌ನ ಪೊಲೀಸ್‌ ಠಾಣೆಯೊಂದರ ಎಎಸ್‌ಐ ಮತಾಂತರಕ್ಕೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

ಸ್ವಇಚ್ಛೆಯಿಂದ ಯಾವುದೇ ಧರ್ಮಕ್ಕೆ ಮತಾಂತರವಾಗಲು ಕಾನೂನಿನಲ್ಲಿ ಅವಕಾಶವಿದೆ. ಆದರೆ, ಮತಾಂತರಗೊಂಡವರು ಮೀಸಲಾತಿ ಸವಲತ್ತು ದುರ್ಬಳಕೆ ಮಾಡಿಕೊಂಡು ಸಮುದಾಯಕ್ಕೆ ಹಾಗೂ ಸರ್ಕಾರಕ್ಕೆ ವಂಚಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂಬುದು ಕೆಜಿಎಫ್‌ನ ಸ್ಥಳೀಯರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT