ಬುಧವಾರ, ಏಪ್ರಿಲ್ 14, 2021
24 °C

ಮಕ್ಕಳ ಗುರಿ ಸಾಧನೆಗೆ ಸಹಕಾರ ನೀಡಿ: ಶಾಸಕ ಕೆ.ಶ್ರೀನಿವಾಸಗೌಡ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

 ಕೋಲಾರ: ‘ಜಿಲ್ಲೆಯಲ್ಲಿ ನೀರಿನ ಸಮಸ್ಯೆಯಿಂದ ರೈತರು ಕೃಷಿ ಚಟುವಟಿಕೆಗಳಿಂದ ದೂರ ಸರಿದಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದಾಗ ಬದುಕು ರೂಪಿಸಿಕೊಳ್ಳಲು ಸಾಧ್ಯ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಅಭಿಪ್ರಾಯಪಟ್ಟರು.

ಇಲ್ಲಿನ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ವತಿಯಿಂದ ನಾಡಪ್ರಭು ಕೆಂಪೇಗೌಡರ ಜಯಂತಿಯಲ್ಲಿ ಪಾಲ್ಗೊಂಡಿದ್ದ ಪಲ್ಲಕ್ಕಿಗಳಿಗೆ ಪ್ರಶಸ್ತಿ ವಿತರಣೆ ಹಾಗೂ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಕಳುಹಿಸಬೇಕು. ಸಮುದಾಯದ ಪೋಷಕರಿಗೆ ಮಕ್ಕಳಿಗಿಂತ ಬೇರೆ ಆಸ್ತಿ ಯಾವುದು ದೊಡ್ಡದಲ್ಲ, ಅವರ ಗುರಿ ಸಾಧನೆಗೆ ಸಹಕಾರ ನೀಡಬೇಕು’ ಎಂದು ಸಲಹೆ ನೀಡಿದರು.

ಆದಿ ಚುಂಚನಗಿರಿಯ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ ಆಶೀರ್ವಾಚನ ನೀಡಿ ಮಾತನಾಡಿ, ‘ಮನೆಯಲ್ಲಿ ತಂದೆ–ತಾಯಿ ಶಿಸ್ತು, ಸಂಸ್ಕಾರವಂತರಾಗಿ ಬದುಕಿದಾಗ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ’ ಎಂದರು.

‘ನಾವು ಮಾಡುತ್ತಿರುವ ಕೆಲಸ ಕಾರ್ಯಗಳು ತಪ್ಪು ಎಂದು ತಿಳಿದಿದ್ದರೂ ತಿದ್ದಿಕೊಳ್ಳುತ್ತಿಲ್ಲ ಎಂದರೆ ಜ್ಞಾನ ಸಂಸ್ಕಾರದ ಕೊರತೆಯೇ ಕಾರಣ. ಹೀಗಾಗಿ ಪೋಷಕರು ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿ’ ಎಂದು ಸಲಹೆ ನೀಡಿದರು.

ಸ್ಪಟಿಕಪುರ ಪೀಠಾಧ್ಯಕ್ಷ ಶ್ರೀ ನಂಜಾವದೂತ ಸ್ವಾಮೀಜಿ ಮಾತನಾಡಿ, ‘ಕೇವಲ ವಿದ್ಯಾವಂತರಾದರೆ ಕ್ರಿಮಿನಲ್‌ಗಳಾಗುವವರೇ ಹೆಚ್ಚು, ವಿನಯ, ವಿದ್ಯೆ, ಸಂಸ್ಕಾರ ತಂದೆ ತಾಯಿಗಳು, ಗುರು ಹಿರಿಯನ್ನು ಗೌರವಿಸಿದಾಗ ಕಲಿತ ವಿದ್ಯೆಗೆ ಅರ್ಥ ಬರುತ್ತದೆ’ ಎಂದರು.

‘ವಿದ್ಯೆ ವಿನಯವನ್ನು ಕೊಡುತ್ತದೆ, ವಿನಯ ಇದ್ದರೆ ಒಳ್ಳೆಯ ವ್ಯಕ್ತಿತ್ವ ನಮ್ಮದಾಗುತ್ತದೆ. ಈ ಮೂರೂ ಇದ್ದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು. ವಿದ್ಯಾವಂತರಾದವರು ಉದ್ಯೋಗ ಪಡೆದು ತಾನು, ತನ್ನ ಕುಟುಂಬಕ್ಕಷ್ಟೇ ಸೀಮಿತರಾಗಿ ತಂದೆ ತಾಯಿಗಳನ್ನು ನಿರ್ಲಕ್ಷಿಸುತ್ತಿರುವುದು ಒಳ್ಳೆಯ ಸಂಸ್ಕಾರವಲ್ಲ. ಹೆತ್ತವರನ್ನು ಗೌರವಿಸುವುದನ್ನು ಕಲಿಯಬೇಕು’ ಎಂದು ಹೇಳಿದರು.

ಕೇಂದ್ರ ಇಂಧನ ಇಲಾಖೆ ಸಹಕಾರ್ಯದರ್ಶಿ ಕೆ.ಆರ್.ನಂದಿನಿ ಮಾತನಾಡಿ, ‘ಜಿಲ್ಲೆಯಲ್ಲಿ ಸಮುದಾಯದ ಜನಸಂಖ್ಯೆಗೆ ಹೋಲಿಸಿದರೆ ಸಾಧನೆ ತೃಪ್ತಿತಂದಿಲ್ಲ’ ಎಂದು ವಿಷಾದವ್ಯಕ್ತಪಡಿಸಿದರು.

‘ಒಬ್ಬ ನಂದಿನಿ ಐಎಎಸ್ ಅಧಿಕಾರಿಯಾದರೆ ಸಾಲದು, ಪ್ರತಿವರ್ಷ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುತ್ತಿದೆ. ಆ ಪ್ರತಿಭೆಗಳನ್ನು ನೀರೆರೆದು ಪೋಷಿಸಿ ಶಾಶ್ವತ ಆಸ್ತಿಯನ್ನಾಗಿಸುವ ದಿಸೆಯಲ್ಲಿ ಸಂಘ, ಸಮುದಾಯ ಕೆಲಸ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

‘ಯುಪಿಎಸ್‍ಸಿಯಲ್ಲಿ ಪ್ರಥಮ ರ್‌್ಯಾಂಕ್ ಪಡೆದ ಸಂಸರ್ಭದಲ್ಲಿ ಇದೇ ವೇದಿಕೆಯಲ್ಲಿ ಸನ್ಮಾನ ಸ್ವೀಕರಿಸುವಾಗ ಸಂತಸ ಪಟ್ಟಿದ್ದೆ. ಇಂದು ಜವಾಬ್ದಾರಿಯುತವಾಗಿ ಕೆಲಸ ಮಾಡುವ ಸಮಯ. ಅಧಿಕಾರಿಯಾಗಿ ರಾಜ್ಯ, ಜಿಲ್ಲೆಗೆ ನನ್ನಿಂದ ಜನ ಏನನ್ನು ನಿರೀಕ್ಷಿಸುತ್ತಿದ್ದಾರೆ ಎಂಬ ಅರಿವಿದೆ’ ಎಂದು ನುಡಿದರು.

‘ಬರೀ ಪಠ್ಯಪುಸ್ತಕ ಓದಿದರೆ ಸಾಲದು, ಪುಸ್ತಕದಾಚೆಗೂ ಭವಿಷ್ಯವಿದೆ. ಇತರೆ ಪುಸ್ತಕಗಳನ್ನು ಹೆಚ್ಚು ಹೆಚ್ಚು ಓದಿ ಜ್ಞಾನ ಸಂಪಾದಿಸಿಕೊಳ್ಳಿ’ ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.

ಮಹಾರಾಷ್ಟ್ರ ಸರ್ಕಾರದ ಮಾರುಕಟ್ಟೆ ಇಲಾಖೆ ಕಾರ್ಯದರ್ಶಿ ಶ್ರೀನಿವಾಸಪುರದ ಗಾಂಡ್ಲಹಳ್ಳಿಯ ಗೋವಿಂದರಾಜು, ಬೆಳಗಾವಿಯ ರಾಣಿ ಚೆನ್ನಮ್ಮ ವಿವಿಯ ಉಪಕುಲಪತಿ ಡಾ.ರಾಮಚಂದ್ರೇಗೌಡ, ಕಿದ್ವಾಯಿ ಆಸ್ಪತ್ರೆ ನಿರ್ದೇಶಕ ಡಾ.ರಾಮಚಂದ್ರ ಅವರನ್ನು ಸನ್ಮಾನಿಸಲಾಯಿತು.

ಆಂಧ್ರದ ಪಲಮನೇರು ಶಾಸಕ ವೆಂಕಟೇಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ರಾಮು, ರಮೇಶ್, ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಿಸಪ್ಪಗೌಡ, ಅಧ್ಯಕ್ಷ ಕೆ.ವಿ.ಶಂಕರಪ್ಪ, ಪ್ರಧಾನ ಕಾರ್ಯದರ್ಶಿ ಡಾ.ಕೆ.ಎಂ.ಜೆ. ಮೌನಿ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.