ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: ರಾಜಕೀಯ ಮಾತು ಸರಿಯಲ್ಲ: ಸಂಸದ ಮುನಿಸ್ವಾಮಿ

ವಿಪಕ್ಷ ನಾಯಕ ಸಿದ್ದರಾಮಯ್ಯ ಬಗ್ಗೆ ಸಂಸದ ಮುನಿಸ್ವಾಮಿ ಲೇವಡಿ
Last Updated 14 ಏಪ್ರಿಲ್ 2020, 14:56 IST
ಅಕ್ಷರ ಗಾತ್ರ

ಕೋಲಾರ: ‘ವಿಪಕ್ಷ ನಾಯಕ ಸಿದ್ದರಾಮಯ್ಯ ಅಧಿಕಾರದಲ್ಲಿ ಇದ್ದಿದ್ದರೆ ಈ ವೇಳೆಗೆ ರಾಜ್ಯವನ್ನು ಗುಡಿಸಿ ಗುಂಡಾಂತರ ಮಾಡಿರುತ್ತಿದ್ದರು. ಕೊರೊನಾ ಸೋಂಕಿನ ಸಂದಿಗ್ಧ ಸ್ಥಿತಿಯಲ್ಲಿ ರಾಜಕೀಯವಾಗಿ ಮಾತನಾಡುವುದು ಸರಿಯಲ್ಲ’ ಎಂದು ಸಂಸದ ಎಸ್‌.ಮುನಿಸ್ವಾಮಿ ಲೇವಡಿ ಮಾಡಿದರು.

ದಿಗ್ಬಂಧನದ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಇಲ್ಲಿನ ಎಪಿಎಂಸಿಗೆ ಮಂಗಳವಾರ ಭೇಟಿ ನೀಡಿದ ಸಂಸದರು ಹಾಗೂ ಅವರ ಸ್ನೇಹಿತ ಹೂಡಿಯ ವಿಜಯ್‌ಕುಮಾರ್‌ ರೈತರಿಂದ ಸುಮಾರು 2 ಲೋಡ್ ತರಕಾರಿ ಖರೀದಿಸಿ ಮಾತನಾಡಿದರು.

‘ಕೋವಿಡ್‌–19 ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರು ಬಡವರ ಪರವಾಗಿ ಜಾರಿಗೊಳಿಸಿರುವ ಯೋಜನೆಗಳನ್ನು ಇಡೀ ಜಗತ್ತು ಮೆಚ್ಚಿದೆ. ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ವಿಪಕ್ಷಗಳ ಮುಖಂಡರು ಅವರಿಗೆ ಪಕ್ಷಾತೀತವಾಗಿ ಬೆಂಬಲ ನೀಡಲಿ’ ಎಂದು ಹೇಳಿದರು.

‘ಜಿಲ್ಲೆಯ ಎಪಿಎಂಸಿಗಳಲ್ಲಿ ಹಾಗೂ ಜಮೀನುಗಳಲ್ಲಿ ರೈತರಿಂದ ನೇರವಾಗಿ ತರಕಾರಿ ಖರೀದಿಸಿ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯ ವಾರ್ಡ್‌ಗಳ ಜನರಿಗೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಜನಪ್ರತಿನಿಧಿಗಳು ರೈತರ ಜಮೀನು ಹಾಗೂ ಎಪಿಎಂಸಿಗಳಿಗೆ ತೆರಳಿ ತರಕಾರಿ ಖರೀದಿಸಿದರೆ ಸಾಕಷ್ಟು ಅನುಕೂಲವಾಗುತ್ತದೆ. ಈವರೆಗೆ ವೈಯಕ್ತಿಕವಾಗಿ ನಾನು ₹ 3 ಲಕ್ಷ ಮೌಲ್ಯದ ತರಕಾರಿ ಖರೀದಿಸಿದ್ದೇವೆ’ ಎಂದು ವಿವರಿಸಿದರು.

ಹಸಿರು ವಲಯ: ‘ಕೋಲಾರ ಜಿಲ್ಲೆ ಹಸಿರು ವಲಯದಲ್ಲಿದೆ. ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳು ಕೆಂಪು ವಲಯದಲ್ಲಿ ಇರುವುದರಿಂದ ಎಚ್ಚರಿಕೆ ವಹಿಸುವುದು ಅಗತ್ಯ. ಎಲ್ಲರೂ ಮನೆಯಲ್ಲೇ ಇದ್ದು ಸಹಕರಿಸಿದರೆ ಕೊರೊನಾ ಸೋಂಕನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು’ ಎಂದು ಕಿವಿಮಾತು ಹೇಳಿದರು.

‘ಗ್ರಾಮೀಣ ಭಾಗದಲ್ಲಿ ಸಂಶಯಾಸ್ಪದ ವ್ಯಕ್ತಿಗಳು ಕಂಡುಬಂದರೆ ಜಿಲ್ಲಾಡಳಿತಕ್ಕೆ, ಆರೋಗ್ಯ ಇಲಾಖೆಗೆ ಅಥವಾ ಪೊಲೀಸರಿಗೆ ಮಾಹಿತಿ ನೀಡಬೇಕು. ದಿಗ್ಬಂಧನದ ಹಿನ್ನೆಲೆಯಲ್ಲಿ ಆರ್ಥಿಕ ವ್ಯವಸ್ಥೆ ಕುಸಿದಿದ್ದು, ಮೋದಿ ಕೇರ್ ಫಂಡ್‌ಗೆ ಬಿಜೆಪಿ ಕಾರ್ಯಕರ್ತರು ತಲಾ ₹ 100 ನೀಡಿ ಅರ್ಥ ವ್ಯವಸ್ಥೆ ಸುಭದ್ರಗೊಳಿಸುವ ಸಂಕಲ್ಪ ಮಾಡಿದ್ದಾರೆ. 19 ದಿನ ನಿರಂತರವಾಗಿ ಆಹಾರ, ದಿನಸಿ ವಿತರಣೆ ಮಾಡುತ್ತೇವೆ’ ಎಂದರು.

ಶಿಸ್ತುಕ್ರಮ: ‘ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಪಡಿತರ ವಿತರಣೆಗೆ ನ್ಯಾಯಬೆಲೆ ಅಂಗಡಿ ಮಾಲೀಕರು ಹಣ ಪಡೆಯುತ್ತಿದ್ದಾರೆ ಎಂಬ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಆಹಾರ ಖಾತೆ ಸಚಿವರು ಪರಿಶೀಲನೆ ಮಾಡಿದ್ದಾರೆ. ನ್ಯಾಯಬೆಲೆ ಅಂಗಡಿ ಮಾಲೀಕರು ಪಡಿತರ ವಿತರಣೆಯಲ್ಲಿ ಅಕ್ರಮ ಎಸಗಿದರೆ ಮುಲಾಜಿಲ್ಲದೆ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT