ಗುರುವಾರ , ಅಕ್ಟೋಬರ್ 1, 2020
28 °C

ಕೋಚಿಮುಲ್‌: ಶ್ವೇತಪತ್ರಕ್ಕೆ ಮನವಿ ಸಲ್ಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಕೋಚಿಮುಲ್‌ ಹಣಕಾಸು ವಹಿವಾಟಿನ ಸಂಬಂಧ ಶ್ವೇತಪತ್ರ ಹೊರಡಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ್‌ ಬಣ) ಸದಸ್ಯರು ಇಲ್ಲಿ ಶನಿವಾರ ಕೋಚಿಮುಲ್‌ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ವಿ.ತಿಪ್ಪಾರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.

‘ಹೈನೋದ್ಯಮವು ಜಿಲ್ಲೆಯ ರೈತರ ಬೆನ್ನೆಲುಬು. ರೈತರು ನಿರೀಕ್ಷೆಗೂ ಮೀರಿ ಹಾಲು ಉತ್ಪಾದನೆ ಮಾಡಿ ಒಕ್ಕೂಟಕ್ಕೆ ಪೂರೈಸುತ್ತಿದ್ದಾರೆ. ಒಕ್ಕೂಟದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಹಾಲು ಖರೀದಿ ದರ ಕಡಿತಗೊಳಿಸಿ ರೈತರನ್ನು ಶೋಷಿಸಲಾಗುತ್ತಿದೆ’ ಎಂದು ಸಂಘಟನೆ ಸದಸ್ಯರು ಆರೋಪಿಸಿದರು.

‘ಒಕ್ಕೂಟದ ತುಂಡು ಗುತ್ತಿಗೆ ಕಾಮಗಾರಿಗಳಿಗೆ ಟೆಂಡರ್‌ ನಡೆಸದೆ ಅಕ್ರಮ ಎಸಗಲಾಗಿದೆ. ಒಕ್ಕೂಟದ ಕೆಲಸಕ್ಕೆ ಬಳಸುವ ಕಾರುಗಳ ಟೆಂಡರ್‌ನಲ್ಲೂ ಅವ್ಯವಹಾರ ನಡೆದಿದ್ದು, ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿದ್ದಾರೆ’ ಎಂದು ಸಂಘಟನೆಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶಿವಪ್ಪ ದೂರಿದರು.

‘ಒಕ್ಕೂಟದಲ್ಲಿರುವ ರೈತರ ದತ್ತಿ ಹಣ ₹ 3.50 ಕೋಟಿಯನ್ನು ಬ್ಯಾಂಕ್‌ ಖಾತೆಯಿಂದ ಡ್ರಾ ಮಾಡಿ ದುರ್ಬಳಕೆ ಮಾಡಲಾಗಿದೆ. ಒಕ್ಕೂಟದ ಅಧಿಕಾರಿಗಳು ಪ್ರವಾಸ ಭತ್ಯೆ ದುರುಪಯೋಗ ಪಡಿಸಿಕೊಂಡಿದ್ದಾರೆ. ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇದ್ದುಕೊಂಡೇ ಬೇರೆ ತಾಲ್ಲೂಕುಗಳಿಗೆ ಪ್ರವಾಸ ಮಾಡಿರುವುದಾಗಿ ನಕಲಿ ದಾಖಲೆಪತ್ರ ಸೃಷ್ಟಿಸಿ ಪ್ರವಾಸ ಭತ್ಯೆ ಪಡೆದಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದರು.

ನೇಮಕಾತಿ ಭ್ರಷ್ಟಾಚಾರ: ‘ಒಕ್ಕೂಟದ ಕ್ಯಾಂಟೀನ್‌ನಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದು, ಅಧಿಕಾರಿಗಳು ಹೆಚ್ಚುವರಿ ಬಿಲ್‌ ರೂಪದಲ್ಲಿ ಹಣ ದೋಚಿದ್ದಾರೆ. ನೌಕರರಿಗೆ ಹೆಚ್ಚುವರಿ ವೇತನ ನೀಡಿ ಅಕ್ರಮ ಎಸಗಲಾಗಿದೆ. ಒಕ್ಕೂಟದ ಸಿಬ್ಬಂದಿ ನೇಮಕಾತಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ’ ಎಂದು ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎನ್.ರಾಮೇಗೌಡ ಆರೋಪ ಮಾಡಿದರು.

‘ಅಕ್ರಮ ಹಾಗೂ ಆದಾಯ ಸೋರಿಕೆಯಿಂದ ಒಕ್ಕೂಟಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ. ಆದ ಕಾರಣ ಆದಾಯ ಸೋರಿಕೆಗೆ ಕ್ರಮ ಕೈಗೊಳ್ಳಬೇಕು. ಅಕ್ರಮದ ಸಂಬಂಧ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಜತೆಗೆ ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು’ ಎಂದು ಒತ್ತಾಯಿಸಿದರು.

ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷ ಬೈರರೆಡ್ಡಿ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ನಾರಾಯಣಸ್ವಾಮಿ, ಕಾನೂನು ಸಲಹೆಗಾರ ಸತೀಶ್, ವಿವಿಧ ತಾಲ್ಲೂಕು ಘಟಕಗಳ ಅಧ್ಯಕ್ಷರು ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು