ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನಿಂದ ದೇಶದ ಮಾನ ಹರಾಜು

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೇಣುಗೋಪಾಲ್‌ ಕಿಡಿ
Last Updated 19 ಮೇ 2021, 13:26 IST
ಅಕ್ಷರ ಗಾತ್ರ

ಕೋಲಾರ: ‘ಕೋವಿಡ್‌ ಸಂಕಷ್ಟದ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ಪಕ್ಷವು ಪ್ರಧಾನಿ ಮೋದಿಯವರ ವರ್ಚಸ್ಸು ಕುಗ್ಗಿಸಲು ಮತ್ತು ಜಾಗತಿಕವಾಗಿ ದೇಶದ ಮಾನ ಹರಾಜು ಹಾಕಲು ಹೊರಟಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೇಣುಗೋಪಾಲ್‌ ಕಿಡಿಕಾರಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕೋವಿಡ್‌ನಿಂದ ಇಡೀ ಜಗತ್ತು ತಲ್ಲಣಗೊಂಡಿದೆ. ಕೋವಿಡ್‌ ಯಾರೂ ಊಹೆ ಮಾಡದ ಹಾಗೂ ಹಿಂದೆಂದೂ ಕಂಡಿರದ ಕಾಯಿಲೆಯಾಗಿದೆ. ಇಂತಹ ಪರಿಸ್ಥಿತಿ ನಿಭಾಯಿಸಿದ ಅನುಭವ ಯಾರಿಗೂ ಇಲ್ಲ. ಇಡೀ ದೇಶ ಒಗ್ಗೂಡಿ ಈ ಪರಿಸ್ಥಿತಿ ಎದುರಿಸಬೇಕಿದೆ’ ಎಂದರು.

‘ಕೋವಿಡ್‌ ಸಂಕಷ್ಟದ ಪರಿಸ್ಥಿತಿ ನಿರ್ವಹಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಮರ್ಥವಾಗಿವೆ. ಸರ್ಕಾರಿ ಆಸ್ಪತ್ರೆಗಳ ಬಲವರ್ಧನೆ ಮಾಡಲಾಗುತ್ತಿದೆ. ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಆಮ್ಲಜನಕ ಸಂಪರ್ಕವುಳ್ಳ ಬೆಡ್‌ಗಳ ಸಂಖ್ಯೆ ಹೆಚ್ಚಿಸಲು ಮತ್ತು ಆಮ್ಲಜನಕ ಉತ್ಪಾದನಾ ಘಟಕಗಳ ಸ್ಥಾಪನೆಗೆ ಸರ್ಕಾರ ಶೇ 70ರಷ್ಟು ಸಹಾಯಧನ ನೀಡುತ್ತದೆ’ ಎಂದು ವಿವರಿಸಿದರು.

‘ರಾಜ್ಯದ ವೈದ್ಯಕೀಯ ಆಮ್ಲಜನಕದ ಕೊರತೆ ನೀಗಿಸುವ ನಿಟ್ಟಿನಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಂಡಿದೆ. ವೈದ್ಯಕೀಯ ಕಾಲೇಜು ಆಸ್ಪತ್ರೆ, ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳು ಸೇರಿದಂತೆ 127 ಕಡೆ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘62 ಘಟಕಗಳನ್ನು ರಾಜ್ಯ ಸರ್ಕಾರದ ಅನುದಾನದಲ್ಲಿ, 28 ಘಟಕಗಳನ್ನು ಕೇಂದ್ರದ ಅನುದಾನದಲ್ಲಿ, 24 ಘಟಕಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಮತ್ತು 11 ಘಟಕಗಳನ್ನು ಖಾಸಗಿ ಕಂಪನಿಗಳ ಸಿಎಸ್‍ಆರ್ ನೆರವಿನಲ್ಲಿ ಸ್ಥಾಪಿಸಲಾಗುತ್ತದೆ. 2 ಘಟಕಗಳು ವಿದೇಶದಿಂದ ಕೊಡುಗೆಯಾಗಿ ಬಂದಿವೆ’ ಎಂದು ತಿಳಿಸಿದರು.

ಚುಚ್ಚುಮದ್ದು ದಾಸ್ತಾನು: ‘ಜಿಲ್ಲೆಯ ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲಿ 40 ವೆಂಟಿಲೇಟರ್ ಮತ್ತು ಆಮ್ಲಜನಕ ಸಂಪರ್ಕವುಳ್ಳ 200 ಬೆಡ್‌, ಕೆಜಿಎಫ್‌ ಆಸ್ಪತ್ರೆಯಲ್ಲಿ 5 ವೆಂಟಿಲೇಟರ್‌ ಹಾಗೂ ಆಮ್ಲಜನಕ ಸಂಪರ್ಕದ 100 ಬೆಡ್‌, ತಾಲ್ಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕ ಸಂಪರ್ಕವುಳ್ಳ 50 ಬೆಡ್ ವ್ಯವಸ್ಥೆ ಆಗಿದೆ. ಆರ್.ಎಲ್‌.ಜಾಲಪ್ಪ ಆಸ್ಪತ್ರೆಗೆ ಸರ್ಕಾರದಿಂದ 10 ವೆಂಟಿಲೇಟರ್‌ ನೀಡಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಕಲ್ಪಿಸಲಾಗುತ್ತಿದೆ’ ಎಂದರು.

‘ಜಿಲ್ಲೆಗೆ 100 ಆಮ್ಲಜನಕ ಸಾಂದ್ರಕಗಳು ಬಂದಿವೆ. ರಾಜ್ಯ ಸರ್ಕಾರ 7 ಸಾವಿರಕ್ಕೂ ಹೆಚ್ಚು ಆಮ್ಲಕನಕ ಸಾಂದ್ರಕ ಖರೀದಿಸಲಿದ್ದು, ಜಿಲ್ಲೆಗೆ ಇನ್ನೂ 200 ಸಾಂದ್ರಕಗಳು ಸಿಗಲಿವೆ. ಕೇಂದ್ರದಿಂದ ಜಿಲ್ಲೆಗೆ 15 ಸಾವಿರ ವಯಲ್ಸ್ ರೆಮ್‌ಡಿಸವರ್‌ ಚುಚ್ಚುಮದ್ದು ಬಂದಿದೆ. ಜಿಲ್ಲೆಯಲ್ಲಿ ಸದ್ಯ 2 ಸಾವಿರ ವಯಲ್ಸ್ ರೆಮ್‌ಡಿಸವರ್‌ ಚುಚ್ಚುಮದ್ದಿನ ದಾಸ್ತಾನು ಇದೆ’ ಎಂದು ಹೇಳಿದರು.

ಮಾನ ಹರಾಜು: ‘ದೇಶದಲ್ಲಿ ಕಾಂಗ್ರೆಸ್‌ ಜವಾಬ್ದಾರಿಯುತ ಪ್ರತಿಪಕ್ಷವಾಗಿ ತನ್ನ ಅನುಭವದ ಆಧಾರದಲ್ಲಿ ಕೋವಿಡ್‌ ಪರಿಸ್ಥಿತಿ ನಿರ್ವಹಣೆ ಸಂಬಂಧ ಸರ್ಕಾರಕ್ಕೆ ರಚನಾತ್ಮಕ ಸಲಹೆ ನೀಡಬೇಕು. ಆದರೆ, ಕೋವಿಡ್‌ ಸಂಕಷ್ಟದ ಸ್ಥಿತಿಯಲ್ಲಿ ಕಾಂಗ್ರೆಸ್‌ ಸಾಮಾಜಿಕ ಜಾಲತಾಣ ಬಳಸಿಕೊಂಡು ರಾಷ್ಟ್ರೀಯ ಮಟ್ಟದಲ್ಲಿ ತನ್ನ ಪ್ರತಿನಿಧಿಗಳಿಗೆ ಟೂಲ್‌ಕಿಟ್‌ ಕಳುಹಿಸಿಕೊಟ್ಟು ದೇಶದ ಮಾನ ಹರಾಜು ಹಾಕುತ್ತಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ಕೇಶವಪ್ರಸಾದ್ ಟೀಕಿಸಿದರು.

ಬಿಜೆಪಿ ಜಿಲ್ಲಾ ಪ್ರಭಾರಿ ಜಯಚಂದ್ರರೆಡ್ಡಿ, ಜಿಲ್ಲಾ ಘಟಕದ ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯ ವಿಜಯ್‌ಕುಮಾರ್, ವಕ್ತಾರ ಎಸ್.ಬಿ.ಮುನಿವೆಂಕಟಪ್ಪ, ನಗರ ಘಟಕದ ಅಧ್ಯಕ್ಷ ತಿಮ್ಮರಾಯಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT