ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19 ಭೀತಿ: ಸುರಕ್ಷತಾ ಕ್ರಮ

ಒಕ್ಕೂಟಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ: ಕೋಚಿಮುಲ್‌ ಅಧ್ಯಕ್ಷ ನಂಜೇಗೌಡ ಹೇಳಿಕೆ
Last Updated 31 ಮಾರ್ಚ್ 2020, 14:01 IST
ಅಕ್ಷರ ಗಾತ್ರ

ಕೋಲಾರ: ‘ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಹಾಲು ಒಕ್ಕೂಟದಲ್ಲಿ ನೌಕರರು ಮತ್ತು ಗ್ರಾಹಕರ ಆರೋಗ್ಯದ ದೃಷ್ಟಿಯಿಂದ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ’ ಎಂದು ಕೋಚಿಮುಲ್‌ ಅಧ್ಯಕ್ಷ ಹಾಗೂ ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.

ನಗರದ ಹೊರವಲಯದಲ್ಲಿರುವ ಕೋಚಿಮುಲ್‌ ಘಟಕದಲ್ಲಿ ಮಂಗಳವಾರ ಪರಿಶೀಲನೆ ನಡೆಸಿ ಮಾತನಾಡಿ, ‘ಕೋವಿಡ್‌–19 ಕಾಯಿಲೆಯಿಂದ ಇಡೀ ಜಗತ್ತು ತತ್ತರಿಸಿದೆ. ಸೋಂಕು ಹರಡುವಿಕೆ ತಡೆಗಾಗಿ ಒಕ್ಕೂಟದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ’ ಎಂದು ಹೇಳಿದರು.

‘ಒಕ್ಕೂಟದ ಘಟಕಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಒಕ್ಕೂಟದ ಎಲ್ಲಾ ಸಿಬ್ಬಂದಿ ಮತ್ತು ಕಾರ್ಮಿಕರಿಗೆ ಕೈ ಸ್ವಚ್ಛಗೊಳಿಸಿಕೊಳ್ಳಲು ಸ್ಯಾನಿಟೈಸರ್‌ ಸೌಲಭ್ಯ ಕಲ್ಪಿಸಲಾಗಿದೆ. ಜತೆಗೆ ಕಡ್ಡಾಯವಾಗಿ ಮುಖಗವಸು ಧರಿಸುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ. ಕೆಲಸಕ್ಕೆ ಹಾಜರಾಗುವ ಪ್ರತಿ ಕಾರ್ಮಿಕರನ್ನು ಒಕ್ಕೂಟದ ಪ್ರವೇಶ ಭಾಗದಲ್ಲೇ ಆರೋಗ್ಯ ತಪಾಸಣೆಗೆ ಒಳಪಡಿಸಲಾಗುತ್ತಿದೆ’ ಎಂದು ವಿವರಿಸಿದರು.

‘ಎಲ್ಲಾ ಕಾರ್ಮಿಕರ ದೇಹದ ಉಷ್ಣತೆ ತಪಾಸಣೆ ಮಾಡಲಾಗುತ್ತಿದೆ. ಒಕ್ಕೂಟದ ಆವರಣದಲ್ಲಿ ಎಲ್ಲಾ ಘಟಕಗಳಲ್ಲಿ ಕ್ರಿಮಿನಾಶಕ ಸಿಂಪಡಿಸಲಾಗುತ್ತಿದೆ. ಪ್ರತಿನಿತ್ಯ ಮುಖ್ಯ ಡೇರಿಗೆ ಬರುವ ಹಾಲು ಶೇಖರಣೆ ಮತ್ತು ಸರಬರಾಜು ವಾಹನಗಳು ಹಾಗೂ ಇತರೆ ವಾಹನಗಳಿಗೂ ಕ್ರಿಮಿನಾಶಕ ಸಿಂಪಡಣೆ ಮಾಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಒಕ್ಕೂಟದ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಸ್ವಚ್ಛತೆ ಕಾಪಾಡಲು ಹಾಗೂ ಸೋಂಕು ಹರಡುವಿಕೆ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸದಸ್ಯರಿಗೆ ಅರಿವು ಮೂಡಿಸಲಾಗಿದೆ. ಹಾಲಿನ ಸಮರ್ಪಕ ವಹಿವಾಟಿಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದರು.

‘ಒಕ್ಕೂಟದ ವ್ಯಾಪ್ತಿಯ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ದಿನಕ್ಕೆ 7.65 ಲಕ್ಷ ಲೀಟರ್‌ ಹಾಲು ಸಂಗ್ರಹಣೆಯಾಗುತ್ತಿದೆ. ಈ ಪೈಕಿ ಸ್ಯಾಚೆಟ್‌ ರೂಪದಲ್ಲಿ 3 ಲಕ್ಷ ಲೀಟರ್‌ ಮಾರಾಟ ಮಾಡಲಾಗುತ್ತಿದೆ. ಮೊಸರು ಉತ್ಪಾದನೆಗೆ 35 ಸಾವಿರ ಲೀಟರ್‌ ಬಳಕೆ ಮಾಡಲಾಗುತ್ತಿದೆ. 3 ಲಕ್ಷ ಲೀಟರ್‌ ಯುಎಚ್‌ಟಿ ಹಾಲು, ಬೇರೆ ಹಾಲು ಒಕ್ಕೂಟಗಳಿಗೆ 25 ಸಾವಿರ ಲೀಟರ್‌, ಕ್ಷೀರ ಭಾಗ್ಯ ಯೋಜನೆಯಡಿ ಅಂಗನವಾಡಿ ಮಕ್ಕಳಿಗೆ ನೀಡುತ್ತಿರುವ ಹಾಲಿನ ಪುಡಿ ಉತ್ಪಾದನೆಗೆ 40 ಸಾವಿರ ಲೀಟರ್‌ ಬಳಸಲಾಗುತ್ತಿದೆ. ಉಳಿದ 65 ಸಾವಿರ ಲೀಟರ್‌ ಹಾಲನ್ನು ಹಾಲಿನ ಪುಡಿಯಾಗಿ ಪರಿವರ್ತಿಸಲಾಗುತ್ತಿದೆ’ ಎಂದರು.

ರಜೆ ಘೋಷಿಸಿಲ್ಲ: ‘ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾಲು ಶೇಖರಣೆಯಾದರೆ ವಹಿವಾಟು ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವಂತೆ ಒಕ್ಕೂಟದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರಾಜ್ಯದ ಬೇರೆ ಜಿಲ್ಲೆಗಳ ಹಾಲು ಒಕ್ಕೂಟಗಳಲ್ಲಿ ಹಲವು ದಿನ ಸರದಿಯಲ್ಲಿ ಹಾಲು ಶೇಖರಣೆಗೆ ರಜೆ ಘೋಷಿಸಲಾಗಿದೆ. ಆದರೆ, ಜಿಲ್ಲೆಯ ಹಾಲು ಉತ್ಪಾದಕರು ಒಕ್ಕೂಟದ ಮೇಲೆ ಇಟ್ಟಿರುವ ನಂಬಿಕೆ ಕಾಪಾಡಿಕೊಳ್ಳುವ ದೃಷ್ಟಿಯಿಂದ ಹಾಲು ಶೇಖರಣೆಗೆ ರಜೆ ಘೋಷಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್‌) ವತಿಯಿಂದ ನೀಡುತ್ತಿರುವ ಪಶು ಆಹಾರ ರಿಯಾಯಿತಿ ದರವನ್ನು ಮುಂದಿನ 3 ತಿಂಗಳ ಅವಧಿಗೆ ಮುಂದುವರಿಸಬೇಕು. ಕೋವಿಡ್–19 ಕಾರಣಕ್ಕೆ ಸಣ್ಣ ಮತ್ತು ಅತಿ ಸಣ್ಣ ಹಾಲು ಉತ್ಪಾದಕರಿಗೆ ಅಗತ್ಯ ವಸ್ತುಗಳ ಖರೀದಿಗೆ ಸಮಸ್ಯೆಯಾಗಿದೆ. ಹೀಗಾಗಿ ಕೆಎಂಎಫ್‌ ಮತ್ತು ರಾಜ್ಯದ ಜಿಲ್ಲಾ ಹಾಲು ಒಕ್ಕೂಟಗಳ ಸಹಯೋಗದೊಂದಿಗೆ ಹಾಲು ಉತ್ಪಾದಕರಿಗೆ ಕನಿಷ್ಠ 5 ಕೆ.ಜಿ ಗೋಧಿ ಹಿಟ್ಟು ಹಾಗೂ ಒಂದು ಲೀಟರ್ ಅಡುಗೆ ಎಣ್ಣೆ ವಿತರಿಸುವಂತೆ ಕೆಎಂಎಫ್‌ಗೆ ಮನವಿ ಸಲ್ಲಿಸಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT