ಸೋಮವಾರ, ಜೂನ್ 14, 2021
26 °C
ಕುಸಿದ ವಹಿವಾಟು: ಹಳಿಗೆ ಮರಳುತ್ತಿದ್ದ ಉದ್ಯಮಕ್ಕೆ ಮತ್ತೆ ಲಾಕ್‌ಡೌನ್‌ ಸಂಕಷ್ಟ

ಕೋವಿಡ್‌ ಹೊಡೆತಕ್ಕೆ ಹೋಟೆಲ್‌ ಉದ್ಯಮ ತತ್ತರ

ಜೆ.ಆರ್‌.ಗಿರೀಶ್‌ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಮೊದಲ ಲಾಕ್‌ಡೌನ್‌ನಿಂದ ಚೇತರಿಸಿಕೊಂಡು ಹಳಿಗೆ ಮರಳುತ್ತಿದ್ದ ಹೋಟೆಲ್‌ ಉದ್ಯಮವು ಕೋವಿಡ್‌ ಎರಡನೇ ಅಲೆ ಹಾಗೂ ಲಾಕ್‌ಡೌನ್‌ ಬಿಸಿಗೆ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ. ವಹಿವಾಟು ಕುಸಿತದ ಹೊಡೆತಕ್ಕೆ ತತ್ತರಿಸಿರುವ ಹೋಟೆಲ್‌ ಉದ್ಯಮದ ಸ್ಥಿತಿ ಡೋಲಾಯಮಾನವಾಗಿದೆ.

ರಾಜ್ಯ ಸರ್ಕಾರದ ಕೋವಿಡ್‌ ಮಾರ್ಗಸೂಚಿ ಪ್ರಕಾರ ಹೋಟೆಲ್‌ಗಳಲ್ಲಿ ಆಹಾರ ಪದಾರ್ಥಗಳ ಪಾರ್ಸೆಲ್‌ಗೆ ಮಾತ್ರ ಅನುಮತಿಯಿದೆ. ಆದರೆ, ಗ್ರಾಹಕರ ಕೊರತೆ ಹಾಗೂ ನಷ್ಟದ ಭೀತಿಯಿಂದಾಗಿ ಜಿಲ್ಲೆಯಲ್ಲಿ ನೂರಾರು ಹೋಟೆಲ್‌ಗಳು ತಾತ್ಕಾಲಿಕವಾಗಿ ಬಾಗಿಲು ಮುಚ್ಚುತ್ತಿವೆ.

ಜಿಲ್ಲೆಯಲ್ಲಿ ಕರ್ನಾಟಕ ಪ್ರದೇಶ ಹೋಟೆಲ್‌ ಮತ್ತು ಉಪಾಹಾರ ಮಂದಿರಗಳ ಸಂಘದಲ್ಲಿ ನೋಂದಾಯಿತವಾದ ಸುಮಾರು 130 ಹೋಟೆಲ್‌ಗಳಿವೆ. ಸಂಘದಲ್ಲಿ ನೋಂದಣಿಯಾಗದ ಹೋಟೆಲ್‌ಗಳ ಸಂಖ್ಯೆ 200ಕ್ಕೂ ಹೆಚ್ಚಿದೆ.

ಜತೆಗೆ ರಾಷ್ಟ್ರೀಯ ಹೆದ್ದಾರಿ 75ರ ಬದಿಯಲ್ಲಿ ರಾಮಸಂದ್ರ ಗಡಿಯಿಂದ ನಂಗಲಿ ಗಡಿವರೆಗೆ 30ಕ್ಕೂ ಹೆಚ್ಚು ಪ್ರತಿಷ್ಠಿತ ಹೋಟೆಲ್‌ಗಳಿವೆ. ಅಲ್ಲದೇ, ಡಾಬಾಗಳು ತಲೆಎತ್ತಿವೆ. ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಫಾಸ್ಟ್‌ ಫುಡ್‌ ಮಳಿಗೆಗಳು, ಸಣ್ಣ ಪುಟ್ಟ ಹೋಟೆಲ್‌ಗಳಿವೆ. ಹೋಟೆಲ್‌ ಉದ್ಯಮವು ಸಾವಿರಾರು ಮಂದಿ ಕಾರ್ಮಿಕರಿಗೆ ಜೀವನಾಧಾರವಾಗಿದೆ.

ಲಾಕ್‌ಡೌನ್‌ನಿಂದ ಹೋಟೆಲ್‌ಗಳಿಗೆ ವಿನಾಯಿತಿ ನೀಡಲಾಗಿದೆ. ಆದರೆ, ಗ್ರಾಹಕರು ಅಲ್ಲಿಯೇ ಕುಳಿತು ಆಹಾರ ಸೇವಿಸುವಂತಿಲ್ಲ. ಬದಲಿಗೆ ಪಾರ್ಸೆಲ್‌ ಕೊಂಡೊಯ್ಯುವುದಕ್ಕಷ್ಟೇ ಅನುಮತಿ ಕೊಡಲಾಗಿದೆ. ಇದರಿಂದ ಹೋಟೆಲ್‌ಗಳ ಆದಾಯ ಸಾಕಷ್ಟು ಕುಸಿದಿದೆ. ಬಹುತೇಕ ಹೋಟೆಲ್‌ಗಳು ಹೆಸರಿಗಷ್ಟೇ ಬಾಗಿಲು ತೆರೆಯುತ್ತಿವೆ. ಆದರೆ, ಗ್ರಾಹಕರೇ ಬರುತ್ತಿಲ್ಲ.

ನಿರ್ವಹಣೆ ಸವಾಲು: ಹಿಂದಿನ ವರ್ಷ ಲಾಕ್‌ಡೌನ್‌ ಸಂದರ್ಭದಲ್ಲಿ ಸಂಪೂರ್ಣ ಬಂದ್‌ ಆಗಿದ್ದ ಹೋಟೆಲ್‌ಗಳು ಲಾಕ್‌ಡೌನ್‌ ತೆರವಿನ ಬಳಿಕ ವಹಿವಾಟು ಆರಂಭಿಸಿದ್ದವು. ಹೋಟೆಲ್‌ಗಳಲ್ಲಿ ದಿನದಿಂದ ದಿನಕ್ಕೆ ವಹಿವಾಟು ವೃದ್ಧಿಯಾಗುತ್ತಿತ್ತು. ಇದೀಗ ಮತ್ತೊಮ್ಮೆ ಕೋವಿಡ್‌ ಬಿರುಗಾಳಿ ಎದ್ದಿದ್ದು, ಉದ್ಯಮ ನಷ್ಟದ ಸುಳಿಗೆ ಸಿಲುಕಿದೆ.

ಕೊರೊನಾ ಸೋಂಕಿನ ಆತಂಕ ಮತ್ತು ಲಾಕ್‌ಡೌನ್‌ ಕಾರಣಕ್ಕೆ ಹೋಟೆಲ್‌ಗಳಿಗೆ ಬರುವ ಗ್ರಾಹಕರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಕೊರೊನಾ ಸೋಂಕು ಸಾವಿರಾರು ಮಂದಿಯ ಬದುಕನ್ನೇ ಕಸಿದಿದ್ದು, ಹೋಟೆಲ್‌ಗಳ ನಿರ್ವಹಣೆಯು ಮಾಲೀಕರಿಗೆ ದೊಡ್ಡ ಸವಾಲಾಗಿದೆ.

ಉಳಿವಿಗಾಗಿ ಹೋರಾಟ: ಹೆಚ್ಚಿನ ಹೋಟೆಲ್‌ಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ನಿರೀಕ್ಷಿತ ಪ್ರಮಾಣದಲ್ಲಿ ವಹಿವಾಟು ನಡೆಯದಿದ್ದರೂ ಕಟ್ಟಡದ ಬಾಡಿಗೆ ಕಟ್ಟಿ, ಕೆಲಸಗಾರರಿಗೆ ಸಂಬಳ ಕೊಟ್ಟು ಪರಿಸ್ಥಿತಿ ನಿಭಾಯಿಸುತ್ತಿರುವ ಹೋಟೆಲ್‌ ಮಾಲೀಕರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.

ಹೋಟೆಲ್‌ ನಿರ್ವಹಣಾ ವೆಚ್ಚ, ಆಹಾರ ಪದಾರ್ಥಗಳ ಬೆಲೆ ಏರಿಕೆ, ಸರಕು ಸಾಗಣೆ ವೆಚ್ಚ, ಅಡುಗೆ ಅನಿಲ (ಗ್ಯಾಸ್‌), ನೀರು ಮತ್ತು ವಿದ್ಯುತ್‌ ಬಿಲ್‌ನ ಹೊರೆ, ಕೆಲಸಗಾರರ ಸಂಬಳ, ವಾಣಿಜ್ಯ ತೆರಿಗೆ ಹೊರೆಯು ಹೋಟೆಲ್‌ ಮಾಲೀಕರನ್ನು ಹೈರಾಣಾಗಿಸಿದೆ. ಆದರೂ ಬ್ರ್ಯಾಂಡ್‌ ನೇಮ್‌ ಹಾಗೂ ಭವಿಷ್ಯದ ದೃಷ್ಟಿಯಿಂದ ಪರಿಸ್ಥಿತಿ ನಿಭಾಯಿಸಲೇಬೇಕಾದ ಅನಿವಾರ್ಯತೆಗೆ ಸಿಲುಕಿರುವ ಉದ್ದಿಮೆದಾರರು ಉಳಿವಿಗಾಗಿ ಹೋರಾಟ ನಡೆಸುತ್ತಿದ್ದಾರೆ.

ಸುರಕ್ಷತೆಗೆ ಒತ್ತು: ಕೋವಿಡ್‌ ಮಾರ್ಗಸೂಚಿಯಂತೆ ಹೋಟೆಲ್‌ಗಳಲ್ಲಿ ಸಾಕಷ್ಟು ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ. ಹೋಟೆಲ್‌ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್‌, ಸ್ಯಾನಿಟೈಸರ್‌ ಮತ್ತು ಗ್ಲೌಸ್‌ ಬಳಸುತ್ತಿದ್ದಾರೆ. ಜತೆಗೆ ಹೋಟೆಲ್‌ಗಳಲ್ಲಿ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಲಾಗಿದೆ. ಅಲ್ಲದೇ, ದೊಡ್ಡ ಹೋಟೆಲ್‌ಗಳಲ್ಲಿ ದಿನಕ್ಕೆ 2 ಬಾರಿ ಇಡೀ ಹೋಟೆಲ್‌ ಸ್ಯಾನಿಟೈಸ್‌ ಮಾಡಲಾಗುತ್ತಿದೆ.

ಮಾಲೀಕರು ಕೆಲಸಗಾರರಿಗೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿ ಸಣ್ಣ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೂ ರಜೆ ಕೊಟ್ಟು ಮನೆಗೆ ಕಳುಹಿಸುತ್ತಿದ್ದಾರೆ. ಆದರೂ ಕೊರೊನಾ ಬಗೆಗಿನ ಅವ್ಯಕ್ತ ಭಯದ ಕಾರಣಕ್ಕೆ ಜನರು ಹೋಟೆಲ್‌ಗಳತ್ತ ಮುಖ ಮಾಡುತ್ತಿಲ್ಲ.

ವಹಿವಾಟು ಕುಸಿತದಿಂದ ತತ್ತರಿಸಿರುವ ಹೋಟೆಲ್‌ಗಳು ನಷ್ಟದ ಸಂಕಷ್ಟದಿಂದ ಪಾರಾಗಲು ನಿರ್ವಹಣಾ ವೆಚ್ಚ ಕಡಿತಕ್ಕೆ ಮುಂದಾಗಿವೆ. ಕೆಲಸಗಾರರ ಸಂಖ್ಯೆ ಇಳಿಕೆ, ವಿದ್ಯುತ್‌ ಮತ್ತು ನೀರಿನ ಬಳಕೆಯಲ್ಲಿ ಮಿತವ್ಯಯ, ಹವಾನಿಯಂತ್ರಿತ ವ್ಯವಸ್ಥೆಗೆ ಕಡಿವಾಣ, ಸೀಮಿತ ಆಹಾರ ಪದಾರ್ಥಗಳ ತಯಾರಿಕೆಯಂತಹ ಕ್ರಮಗಳನ್ನು ಅನುಸರಿಸಿ ನಿರ್ವಹಣಾ ವೆಚ್ಚ ಸಾಧ್ಯವಾದಷ್ಟು ತಗ್ಗಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು