ಶನಿವಾರ, ಜನವರಿ 16, 2021
28 °C
ಸ್ಕೌಟ್ಸ್‌–ಗೈಡ್ಸ್‌ ರಾಜ್ಯ ಮುಖ್ಯ ಆಯುಕ್ತ ಸಿಂಧ್ಯಾ ಬೇಸರ

ಕೋವಿಡ್-19‌: ಜನರ ನಡವಳಿಕೆ ಬದಲಾಗಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕೋವಿಡ್‌ನಿಂದ ಇಡೀ ಜಗತ್ತು ತಲ್ಲಣಗೊಂಡಿದೆ. ಲಾಕ್‌ಡೌನ್‌ ವೇಳೆ ಎಲ್ಲರಿಗೂ ಕಷ್ಟವಾಗಿತ್ತು. ಕೋವಿಡ್‌ನಿಂದ ಕಲಿಯಬೇಕಾದ ಪಾಠ ಬಹಳಷ್ಟಿದ್ದರೂ ಜನರ ನಡವಳಿಕೆ ನಿರೀಕ್ಷಿತ ಮಟ್ಟದಲ್ಲಿ ಬದಲಾಗಿಲ್ಲ’ ಎಂದು ಸ್ಕೌಟ್ಸ್ ಮತ್ತು ಗೈಡ್ಸ್‌ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಬೇಸರ ವ್ಯಕ್ತಪಡಿಸಿದರು.

ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆಯ ಜಿಲ್ಲಾ ಮುಖ್ಯ ಆಯುಕ್ತ ಕೆ.ವಿ.ಶಂಕರಪ್ಪ ಅವರ ಹುಟ್ಟು ಹಬ್ಬದ ಅಂಗವಾಗಿ ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸೇವಾ ಚಟುವಟಿಕೆ, ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

‘ಲಾಕ್‌ಡೌನ್‌, ಎಸ್ಸೆಸ್ಸೆಲ್ಸಿ ಪರೀಕ್ಷೆ ಸಂದರ್ಭದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್‌ನ 10 ಸಾವಿರ ಮಕ್ಕಳು ಹಾಗೂ ಶಿಕ್ಷಕರು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಸೇವೆ ಸಲ್ಲಿಸಿದ್ದಾರೆ. ಎಲ್ಲಾ ಶಾಲೆ, ಕಾಲೇಜುಗಳಲ್ಲಿ ಸ್ಕೌಟ್ಸ್ ಗೈಡ್ಸ್ ಘಟಕ ಆರಂಭಿಸಬೇಕು. ನುರಿತ ಶಿಕ್ಷಕರಿಲ್ಲದೆ ಚಟುವಟಿಕೆ ನಡೆಸುವುದು ಕಷ್ಟ. ಸಂಸ್ಥೆಯ ಚಟುವಟಿಕೆಗಳಿಗೆ ಸರ್ಕಾರ, ಜನಪ್ರತಿನಿಧಿಗಳು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

‘ಗುರುಗಳು ಸಂಪರ್ಕದಿಂದ ಮನುಷ್ಯನ ಬದುಕಿನಲ್ಲಿ ಪರಿವರ್ತನೆಯಾಗುತ್ತದೆ ಎಂಬುದಕ್ಕೆ ಕೆ.ವಿ.ಶಂಕರಪ್ಪ ಅವರೇ ಸಾಕ್ಷಿ. ಅವರು ಒಕ್ಕಲಿಗ ಸಮುದಾಯದವನ್ನು ಪ್ರೀತಿಸಿ, ಗೌರವಿಸಿ ಕೈಲಾದ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಎಲ್ಲಾ ಸಮುದಾಯದವರನ್ನು ಇದೇ ಭಾವನೆಯಿಂದ ಕಂಡಿದ್ದಾರೆ’ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

‘ಕೆ.ವಿ.ಶಂಕರಪ್ಪ ಹಣಕ್ಕೆ ಆಸೆ ಪಟ್ಟವರಲ್ಲ. ಹತ್ತಿದ ಮೆಟ್ಟಿಲು ತುಳಿದವ ಕೆಳಕ್ಕೆ ಇಳಿಯಲಾರ. ಜಿಲ್ಲೆಯ ಅಭಿವೃದ್ಧಿಗೆ ಶಂಕರಪ್ಪ ಅವರ ಸಹಕಾರ ಅಗತ್ಯ’ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.

ಚಿಂತನೆ ಬದಲಾಯಿತು: ‘ವ್ಯಕ್ತಿತ್ವ ರೂಪಿಸಿಕೊಳ್ಳಲು ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಗಾಂಧೀಜಿ, ಅಂಬೇಡ್ಕರ್ ಸ್ಫೂರ್ತಿಯಾಗಬೇಕು. ಎಡಪಂಥೀಯ ತತ್ವಗಳಲ್ಲಿ ನಂಬಿಕೆ ಇಟ್ಟಿದ್ದ ನಾನು ಬಾಲಗಂಗಾಧರನಾಥ ಸ್ವಾಮೀಜಿ ಅವರ ಸಂಪರ್ಕಕ್ಕೆ ಬಂದ ನಂತರ ಚಿಂತನೆ ಬದಲಾಯಿತು. ಸಾಮಾನ್ಯ ಕೆಳ ವರ್ಗದ ಕುಟುಂಬದಿಂದ ಬಂದ ನಾನು ಕೆಳಕ್ಕೆ ಬಿದ್ದಿದ್ದೇನೆ ಸೋತಿದ್ದೇನೆ ಹಾಗೂ ಅಭಿಮಾನದಿಂದ ಗೆದ್ದಿದ್ದೇನೆ’ ಎಂದು ಶಂಕರಪ್ಪ ನುಡಿದರು.

‘ಮೂಡಣದ ಮುತ್ತು’ ಅಭಿನಂದನಾ ಕೃತಿ ಬಿಡುಗಡೆ ಮಾಡಲಾಯಿತು. ಕರೊನಾ ವಾರಿಯರ್ಸ್‌ಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಯಿತು. ರಕ್ತನಿಧಿ ಕೇಂದ್ರಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು.

ಶಾಸಕರಾದ ಕೆ.ಶ್ರೀನಿವಾಸಗೌಡ, ಕೆ.ವೈ.ನಂಜೇಗೌಡ, ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು, ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜು, ಮೈಸೂರು ವಿಶ್ವವಿದ್ಯಾಲಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಸಹಾಯಕ ಪ್ರಾಧ್ಯಾಪಕ ಬಿ.ವೆಂಕಟರಾಮಣ್ಣ, ರೋಟರಿ ರಾಜ್ಯಪಾಲ ಬಿ.ಎಲ್.ನಾಗೇಂದ್ರಪ್ರಸಾದ್‌ ಪಾಲ್ಗೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು