ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾರ್ಮೆಂಟ್ಸ್‌ ಕಾರ್ಖಾನೆಗೆ ಕೋವಿಡ್‌ ಬಿಸಿ

Last Updated 5 ಏಪ್ರಿಲ್ 2021, 13:27 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಸಿದ್ಧ ಉಡುಪು ಕಾರ್ಖಾನೆಯೊಂದರ 33 ಕಾರ್ಮಿಕರಿಗೆ ಮತ್ತು ಅನಾಥಾಶ್ರಮದ 27 ಮಕ್ಕಳಿಗೆ ಕೊರೊನಾ ಸೋಂಕು ಹರಡಿರುವುದು ಸೋಮವಾರ ದೃಢಪಟ್ಟಿದೆ.

ಜಿಲ್ಲಾ ಕೇಂದ್ರದ ಹೊರವಲಯದ ಬೆತ್ತನಿ ಗ್ರಾಮದ ಬಳಿಯಿರುವ ಶಾಹಿ ಗಾರ್ಮೆಂಟ್ಸ್‌ ಕಾರ್ಖಾನೆಯ ಕಾರ್ಮಿಕರಿಗೆ ಸೋಂಕು ತಗುಲಿದ್ದು, ಇಡೀ ಘಟಕ ಸೀಲ್‌ಡೌನ್‌ ಆಗಿದೆ. ಕಾರ್ಖಾನೆಯಲ್ಲಿ 900 ಕಾರ್ಮಿಕರಿದ್ದು, ಸೋಂಕಿತರ ಸಂಪರ್ಕದ ಹಿನ್ನೆಲೆಯಲ್ಲಿ ಅವರೆಲ್ಲರಿಗೂ ಕೋವಿಡ್‌ ಪರೀಕ್ಷೆ ಮಾಡಲಾಗಿದೆ.

ಸೋಂಕಿತ ಕಾರ್ಮಿಕರನ್ನು ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸಂಪರ್ಕಕ್ಕೆ ಬಂದಿರುವ ಕುಟುಂಬ ಸದಸ್ಯರು, ಸಂಬಂಧಿಕರು, ಸ್ನೇಹಿತರಿಗೂ ಕೋವಿಡ್‌ ಪರೀಕ್ಷೆ ಮಾಡಲಾಗುತ್ತಿದ್ದು, ಸೋಂಕಿತರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯಿದೆ.

ಬಂಗಾರಪೇಟೆ ತಾಲ್ಲೂಕಿನ ಅತ್ತಿಗಿರಿಕುಪ್ಪ ಬಳಿಯಿರುವ ಬಜೇರಿಯಾ ಟ್ರಸ್ಟ್‌ನ ಅನಾಥಾಶ್ರಮದ ಮಕ್ಕಳಿಗೆ ಸೋಂಕು ತಗುಲಿದೆ. ಅನಾಥಾಶ್ರಮದಲ್ಲಿ 60 ವಿದ್ಯಾರ್ಥಿಗಳಿದ್ದು, ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳಲ್ಲಿ ಓದುತ್ತಿದ್ದಾರೆ. ಅನಾಥಾಶ್ರಮದ ವಿದ್ಯಾರ್ಥಿನಿಗೆ ಶುಕ್ರವಾರ (ಏ.2) ಕೆಮ್ಮು ಮತ್ತು ಜ್ವರದ ಲಕ್ಷಣ ಕಾಣಿಸಿಕೊಂಡಿತ್ತು. ಆಕೆಗೆ ಕೋವಿಡ್‌ ಪರೀಕ್ಷೆ ಮಾಡಿದಾಗ ಸೋಂಕು ತಗುಲಿರುವುದು ಖಚಿತವಾಗಿತ್ತು.

ಆ ವಿದ್ಯಾರ್ಥಿನಿಯ ಸಂಪರ್ಕಕ್ಕೆ ಬಂದಿರುವ 26 ಮಕ್ಕಳಿಗೆ ಸೋಂಕು ಹರಡಿದೆ. ಸೋಂಕಿತ ಮಕ್ಕಳನ್ನು ಜಿಲ್ಲೆಯ ವಿವಿಧ ಕೋವಿಡ್‌ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಉಳಿದ 33 ಮಕ್ಕಳಿಗೆ ಹಾಗೂ ಅನಾಥಾಶ್ರಮದ 5 ಸಿಬ್ಬಂದಿಗೆ ಕೋವಿಡ್‌ ಪರೀಕ್ಷೆ ಮಾಡಿದ್ದು, ವೈದ್ಯಕೀಯ ವರದಿ ಬರಬೇಕಿದೆ.

ಅನಾಥಾಶ್ರಮವನ್ನು ನಿರ್ಬಂಧಿತ ಪ್ರದೇಶವಾಗಿ (ಕಂಟೈನ್‌ಮೆಂಟ್‌) ಘೋಷಿಸಲಾಗಿದೆ. ಗ್ರಾಮ ಪಂಚಾಯಿತಿಗಳ ಮೂಲಕ ಅನಾಥಾಶ್ರಮಕ್ಕೆ ಆಹಾರ ಪದಾರ್ಥ, ತರಕಾರಿ, ಹಾಲು ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಸುವಂತೆ ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಬಂಗಾರಪೇಟೆ ತಾಲ್ಲೂಕು ಆಡಳಿತಕ್ಕೆ ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT