ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಗತಿ ಆರಂಭಕ್ಕೆ ವಿಘ್ನ: ಹಳಿ ತಪ್ಪಿದ ಪಾಠ ಪ್ರವಚನ

ಜಿಲ್ಲೆಯಲ್ಲಿ ಕಾಲೇಜು ವಿದ್ಯಾರ್ಥಿಗಳ– ಸಿಬ್ಬಂದಿಯ ಕೋವಿಡ್‌ ಪರೀಕ್ಷೆ ವರದಿ ವಿಳಂಬ
Last Updated 20 ನವೆಂಬರ್ 2020, 16:09 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಕೋವಿಡ್‌ ಪರೀಕ್ಷೆಯ ವರದಿ ವಿಳಂಬವಾಗಿರುವುದರಿಂದ ಪದವಿ ಕಾಲೇಜುಗಳಲ್ಲಿ ತರಗತಿ ಆರಂಭಕ್ಕೆ ವಿಘ್ನ ಎದುರಾಗಿದೆ.

ಅಂತಿಮ ವರ್ಷದ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳನ್ನು ಆರಂಭಿಸಿ 3 ದಿನ ಕಳೆದರೂ ಬಹುತೇಕ ಕಡೆ ವಿದ್ಯಾರ್ಥಿಗಳ ಹಾಜರಾತಿ ಕಡಿಮೆಯಿದೆ. ಕೋವಿಡ್‌ ಆತಂಕದ ಕಾರಣಕ್ಕೆ ವಿದ್ಯಾರ್ಥಿಗಳು ಕಾಲೇಜಿಗೆ ಬರಲು ಹಿಂದೇಟು ಹಾಕುತ್ತಿದ್ದು, ಪಾಠ ಪ್ರವಚನ ಹಳಿ ತಪ್ಪಿವೆ.

ಜಿಲ್ಲೆಯಲ್ಲಿ 14 ಪದವಿ ಕಾಲೇಜುಗಳಿವೆ. ಈ ಪೈಕಿ 8 ಸರ್ಕಾರಿ ಹಾಗೂ 6 ಖಾಸಗಿ ಕಾಲೇಜುಗಳಾಗಿವೆ. ರಾಜ್ಯ ಸರ್ಕಾರದ ಆದೇಶದಂತೆ ನ.17ರಂದು ಕಾಲೇಜುಗಳನ್ನು ಪುನರಾರಂಭಿಸಲಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ ಹಲವು ವಿದ್ಯಾರ್ಥಿಗಳು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡು ಕಾಲೇಜಿಗೆ ಬರುತ್ತಿದ್ದಾರೆ. ಮತ್ತೆ ಕೆಲ ವಿದ್ಯಾರ್ಥಿಗಳಿಗೆ ಕಾಲೇಜುಗಳಲ್ಲೇ ಆರೋಗ್ಯ ಇಲಾಖೆಯಿಂದ ಕೋವಿಡ್‌ ಪರೀಕ್ಷೆ ಮಾಡಲಾಗುತ್ತಿದ್ದೆ.

ಜಿಲ್ಲೆಯಲ್ಲಿ ಕೋವಿಡ್‌ ಪರೀಕ್ಷೆಗಾಗಿ ಮೂರು ರ್‍ಯಾಪಿಡ್‌ ಪಾಲಿಮರೈಸ್ಡ್‌ ಚೈನ್‌ ರಿಯಾಕ್ಷನ್‌ (ಆರ್‌ಟಿಪಿಸಿಆರ್‌) ಪ್ರಯೋಗಾಲಯ ತೆರೆಯಲಾಗಿದೆ. ಶುಕ್ರವಾರದವರೆಗೆ 3,031 ವಿದ್ಯಾರ್ಥಿಗಳ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಆರ್‌ಟಿಪಿಸಿಆರ್‌ ಪ್ರಯೋಗಾಲಯಗಳಿಗೆ ರವಾನಿಸಲಾಗಿದೆ. ಜತೆಗೆ ಕಾಲೇಜುಗಳ ಸಿಬ್ಬಂದಿಯ ಗಂಟಲು ದ್ರವ ಮಾದರಿಯನ್ನು ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ.

ಪ್ರಯೋಗಾಲಯಗಳಲ್ಲಿ ಏಕಾಏಕಿ ಕಾರ್ಯ ಒತ್ತಡ ಹೆಚ್ಚಾದ ಕಾರಣ ಕೋವಿಡ್‌ ಪರೀಕ್ಷೆ ತಡವಾಗುತ್ತಿದೆ. ಮತ್ತೊಂದೆಡೆ ವಿದ್ಯಾರ್ಥಿಗಳು ಹಾಗೂ ಕಾಲೇಜು ಸಿಬ್ಬಂದಿಯ ಮೊಬೈಲ್‌ ಸಂಖ್ಯೆಗೆ ಕೋವಿಡ್‌ ಪರೀಕ್ಷೆಯ ವರದಿ ರವಾನೆ ಪ್ರಕ್ರಿಯೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.

ಪ್ರವೇಶ ನಿರಾಕರಣೆ: ಗಂಟಲು ಮಾದರಿ ಸಂಗ್ರಹಿಸಿದ ನಂತರ 2 ದಿನದೊಳಗೆ ಕೋವಿಡ್‌ ಪರೀಕ್ಷೆಯ ವರದಿ ನೀಡುವುದಾಗಿ ಆರೋಗ್ಯ ಇಲಾಖೆ ಹೇಳಿತ್ತು. ಆದರೆ, 3 ದಿನ ಕಳೆದರೂ ಬಹುಪಾಲು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ವರದಿ ರವಾನೆಯಾಗಿಲ್ಲ. ಹೀಗಾಗಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿ, ವೈದ್ಯಕೀಯ ವರದಿ ಬಂದ ನಂತರ ಕಾಲೇಜಿಗೆ ಬರುವಂತೆ ಸೂಚಿಸಿ ವಾಪಸ್‌ ಕಳುಹಿಸಲಾಗುತ್ತಿದೆ.

ವೈದ್ಯಕೀಯ ವರದಿಯ ನಿರೀಕ್ಷೆಯಲ್ಲಿರುವ ಸಿಬ್ಬಂದಿ ಸಹ ಕಾಲೇಜಿಗೆ ಬರುತ್ತಿಲ್ಲ. ಬೆರಳೆಣಿಕೆ ವಿದ್ಯಾರ್ಥಿಗಳು ಕಾಲೇಜಿಗೆ ಬಂದರೂ ತರಗತಿಗಳು ನಡೆಯುತ್ತಿಲ್ಲ. ವಿದ್ಯಾರ್ಥಿಗಳು ಹಾಗೂ ಕಾಲೇಜು ಸಿಬ್ಬಂದಿಯೂ ಕೋವಿಡ್‌ ಪರೀಕ್ಷೆ ವರದಿಯ ನಿರೀಕ್ಷೆಯಲ್ಲೇ ದಿನ ದೂಡುತ್ತಿದ್ದಾರೆ.

ಮಾರ್ಗಸೂಚಿ ಪಾಲನೆ: ಕೋವಿಡ್‌ ಹಿನ್ನೆಲೆಯಲ್ಲಿ ಕಾಲೇಜುಗಳಲ್ಲಿ ಸರ್ಕಾರದ ಸುರಕ್ಷತಾ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಕಾಲೇಜಿನ ಕೊಠಡಿಗಳನ್ನು ಪ್ರತಿನಿತ್ಯ ಸ್ಯಾನಿಟೈಸ್‌ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಮಾಸ್ಕ್‌ ಧರಿಸಿ ಕಾಲೇಜಿಗೆ ಬರುತ್ತಿದ್ದಾರೆ. ಕಾಲೇಜುಗಳ ಪ್ರವೇಶ ದ್ವಾರದಲ್ಲೇ ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್‌ ವ್ಯವಸ್ಥೆ ಮಾಡಲಾಗಿದೆ.

ತರಗತಿಗಳಲ್ಲಿ ಅಂತರ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ಮೇಜುಗಳ ಜೋಡಿಸಲಾಗಿದೆ. ಆದರೆ, ಕೋವಿಡ್‌ ಬಗೆಗಿನ ಅವ್ಯಕ್ತ ಭಯದ ಕಾರಣಕ್ಕೆ ವಿದ್ಯಾರ್ಥಿಗಳು ಕಾಲೇಜಿನತ್ತ ಮುಖ ಮಾಡುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT