ಶನಿವಾರ, ಜನವರಿ 23, 2021
23 °C
ಜಿಲ್ಲೆಯ 8 ಕೇಂದ್ರದಲ್ಲಿ ಏಕಕಾಲಕ್ಕೆ ನಡೆದ ತಾಲೀಮು

ಲಸಿಕೆ ಅಣಕು ಕಾರ್ಯಾಚರಣೆ ಯಶಸ್ವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಜಿಲ್ಲೆಯಲ್ಲಿ ಶುಕ್ರವಾರ ಕೋವಿಡ್ ಲಸಿಕೆ ನೀಡಿಕೆಯ ಅಣಕು ಕಾರ್ಯಾಚರಣೆಯು (ಡ್ರೈ ರನ್‌) ಯಶಸ್ವಿಯಾಗಿ ನಡೆಯಿತು.

ಆರೋಗ್ಯ ಇಲಾಖೆಯು ಸಾಕಷ್ಟು ಸಿದ್ಧತೆಯೊಂದಿಗೆ ಜಿಲ್ಲೆಯ 8 ಕೇಂದ್ರಗಳಲ್ಲಿ ಏಕಕಾಲಕ್ಕೆ ಅಣಕು ಕಾರ್ಯಾಚರಣೆ ಆರಂಭಿಸಿತು. ಸಾರ್ವಜನಿಕರಿಗೆ ಲಸಿಕೆ ನೀಡುವ ಕಾರ್ಯಕ್ಕೆ ಸಿದ್ಧತೆಯನ್ನು ಡ್ರೈ ರನ್‌ ಮೂಲಕ ಪರಿಶೀಲಿಸಲಾಯಿತು.

ಜಿಲ್ಲಾ ಕೇಂದ್ರದ ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆ, ಶ್ರೀ ದೇವರಾಜ ಅರಸು ವೈದ್ಯಕೀಯ ಕಾಲೇಜು, ಇಟಿಸಿಎಂ ಆಸ್ಪತ್ರೆ, ದರ್ಗಾ ಮೊಹಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ, ಮುಳಬಾಗಿಲು ಮತ್ತು ಶ್ರೀನಿವಾಸಪುರ ತಾಲ್ಲೂಕು ಆಸ್ಪತ್ರೆ, ಮಾಲೂರು ತಾಲ್ಲೂಕಿನ ದೊಡ್ಡಶಿವಾರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ. ಕೆಜಿಎಫ್‌ ತಾಲ್ಲೂಕಿನ ಬೇತಮಂಗಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಾರ್ಯಾಚರಣೆ ನಡೆಯಿತು.

ಪ್ರತಿ ಲಸಿಕಾ ಕೇಂದ್ರದಲ್ಲಿ ನಿರೀಕ್ಷಣಾ ಕೊಠಡಿ, ಲಸಿಕೆ ಕೊಠಡಿ ಮತ್ತು ನಿಗಾ ಕೊಠಡಿ ಸೇರಿದಂತೆ 3 ಕೊಠಡಿ ಮೀಸಲಿಡಲಾಗಿತ್ತು. ಪ್ರತಿ ಕೇಂದ್ರದಲ್ಲಿ ತಲಾ 5 ಮಂದಿ ಲಸಿಕೆ ಅಧಿಕಾರಿಗಳು ಕಾರ್ಯ ನಿರ್ವಹಿಸಿದರು. ಆರೋಗ್ಯ ಕಾರ್ಯಕರ್ತರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಸೇರಿದಂತೆ ಪ್ರತಿ ಕೇಂದ್ರದಲ್ಲಿ ತಲಾ 25 ಮಂದಿಗೆ ಲಸಿಕೆ ನೀಡಿಕೆಯ ಪೂರ್ವಭ್ಯಾಸ ನಡೆಸಲಾಯಿತು.

ಮಾಸ್ಕ್‌ ಧರಿಸಿ ಕೇಂದ್ರಗಳಿಗೆ ಬಂದ ಫಲಾನುಭವಿಗಳ ದೇಹದ ಉಷ್ಣತೆಯನ್ನು ಸಿಬ್ಬಂದಿಯು ಪರಿಶೀಲಿಸಿದರು. ಸ್ಯಾನಿಟೈಸರ್‌ನಿಂದ ಕೈಗಳನ್ನು ಸ್ವಚ್ಛ ಮಾಡಿಕೊಂಡ ಬಳಿಕ ಆರೋಗ್ಯ ಕಾರ್ಯಕರ್ತರು ತಮ್ಮ ಪಾಳಿಗಾಗಿ ನಿರೀಕ್ಷಣಾ ಕೊಠಡಿಯಲ್ಲಿ ಕಾದು ಕುಳಿತರು. ನಿರೀಕ್ಷಣಾ ಕೊಠಡಿಯಲ್ಲಿ 5ರಿಂದ 6 ಮಂದಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಲಸಿಕೆ ನೀಡಿಕೆ ಪೂರ್ವಭ್ಯಾಸದ ಬಳಿಕ ಅರ್ಧ ತಾಸು ನಿಗಾ ಕೊಠಡಿಯಲ್ಲಿ ಕೂರಿಸಲಾಯಿತು.

ಲಸಿಕೆ ಹಾಕಿಸಿಕೊಂಡ ವ್ಯಕ್ತಿಗೆ ಅಡ್ಡ ಪರಿಣಾಮವಾದಲ್ಲಿ ಹೇಗೆ ಸ್ಪಂದಿಸಬೇಕೆಂಬ ಬಗ್ಗೆ ಅಣಕು ಕಾರ್ಯಾಚರಣೆ ನಡೆಸಲಾಯಿತು. ಕೇಂದ್ರದಲ್ಲಿನ ವೈದ್ಯಕೀಯ ಸಿಬ್ಬಂದಿ ತಕ್ಷಣವೇ ಕಾರ್ಯಪ್ರವೃತ್ತರಾಗಿ ವ್ಯಕ್ತಿಗೆ ಆರೈಕೆ ನೀಡಿದಂತೆ ಹಾಗೂ ಪರಿಸ್ಥಿತಿ ನಿಭಾಯಿಸುವಂತೆ ಕಾರ್ಯ ನಿರ್ವಹಿಸಿದರು.

ಸಿಬ್ಬಂದಿಗೆ ಮಾಹಿತಿ: ಒಟ್ಟಾರೆ ಕಾರ್ಯಾಚರಣೆಯಲ್ಲಿ ಕೋವಿಡ್ ಲಸಿಕೆ ನೀಡುವುದನ್ನು ಹೊರತುಪಡಿಸಿ ಉಳಿದ ಎಲ್ಲಾ ಹಂತಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಯಿತು. ದಾಖಲಾತಿ ಪರಿಶೀಲನೆ, ಹೆಸರು ನೋಂದಣಿ, ಲಸಿಕೆ ವಿತರಣೆ ಸೇರಿದಂತೆ ಎಲ್ಲಾ ಮಾಹಿತಿಯನ್ನು ಕೇಂದ್ರ ಸರ್ಕಾರದ ಕೋ–ವಿನ್‌ ತಂತ್ರಾಂಶದಲ್ಲಿ (ಪೋರ್ಟಲ್‌) ದಾಖಲಿಸಲಾಯಿತು. ವಿವಿಧ ಪ್ರಕ್ರಿಯೆ ಬಗ್ಗೆ ವೈದ್ಯಕೀಯ ಸಿಬ್ಬಂದಿಗೆ ಮಾಹಿತಿ ನೀಡಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.