ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳನ್ನು ಎತ್ತಿ ಕಟ್ಟಿದರೆ ಸಹಿಸುವುದಿಲ್ಲ: ವಸತಿ ಶಾಲೆ ಸಿಬ್ಬಂದಿಗೆ ಎಚ್ಚರಿಕೆ

Last Updated 20 ಮೇ 2019, 13:27 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯ ವಸತಿ ಶಾಲೆಗಳ ಪ್ರಾಂಶುಪಾಲರು, ಶಿಕ್ಷಕರು, ವಾರ್ಡನ್‌ಗಳು ಮತ್ತು ಅಡುಗೆ ಸಿಬ್ಬಂದಿ ನಡುವಿನ ಭಿನ್ನಾಭಿಪ್ರಾಯಕ್ಕೆ ಮಕ್ಕಳನ್ನು ಎತ್ತಿ ಕಟ್ಟಿ ಅನಗತ್ಯ ವಿವಾದ ಸೃಷ್ಟಿಸಿದರೆ ಸಹಿಸುವುದಿಲ್ಲ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದರು.

ಇಲ್ಲಿ ಸೋಮವಾರ ನಡೆದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಕ್ರೈಸ್‌ ಸಂಸ್ಥೆ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿ, ‘ಸಿಬ್ಬಂದಿ ಹಾಗೂ ನೌಕರರ ಸ್ವಾರ್ಥಕ್ಕೆ ಮಕ್ಕಳನ್ನು ಎತ್ತಿ ಕಟ್ಟಿದರೆ ಭವಿಷ್ಯದಲ್ಲಿ ಅವರ ಮೇಲೆ ಕೆಟ್ಟ ಪರಿಣಾಮವಾಗುತ್ತದೆ’ ಎಂದು ಹೇಳಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶ ಬಂದಿರುವ ವಿದ್ಯಾರ್ಥಿನಿಲಯಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಿಇಒ, ‘ಕಡಿಮೆ ಫಲಿತಾಂಶ ಸಾಧನೆ ಮಾಡಿರುವ ಹಾಸ್ಟೆಲ್‌ಗಳ ವಾರ್ಡನ್‌ಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿ’ ಎಂದು ಅಧಿಕಾರಿಗಳಿಗೆ ಆದೇಶಿಸಿದರು.

‘ಸಮಾಜ ವಿಜ್ಞಾನ, ವಿಜ್ಞಾನ ಮತ್ತು ಕನ್ನಡ ವಿಷಯದಲ್ಲಿ ಕೆಲವೆಡೆ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಇಂಗ್ಲೀಷ್ ಮತ್ತು ಗಣಿತಕ್ಕಿಂತ ಈ ವಿಷಯಗಳು ಕಷ್ಟವೇ? ಸಮಾಜ ವಿಜ್ಞಾನ, ವಿಜ್ಞಾನ ಮತ್ತು ಕನ್ನಡ ವಿಷಯ ತುಂಬಾ ಸುಲಭವಾಗಿದ್ದು, ಈ ವಿಷಯಗಳಲ್ಲಿ ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವುದು ಕ್ಷಮಿಸಲಾಗದ ಅಪರಾಧ’ ಎಂದು ತಿಳಿಸಿದರು.

‘4 ವಿದ್ಯಾರ್ಥಿಗಳಿರುವ ಹಾಸ್ಟೆಲ್‌ನಲ್ಲಿ 3 ಮಂದಿ ಅನುತ್ತೀರ್ಣರಾಗಿದ್ದಾರೆ. ಬಾಲಕಿಯರ ಹಾಸ್ಟೆಲ್‌ನಲ್ಲಿ ಕೇವಲ ಶೇ 60ರಷ್ಟು ಫಲಿತಾಂಶ ಬಂದಿದೆ. ವಿದ್ಯಾರ್ಥಿಗಳು ಈ ಮಟ್ಟಕ್ಕೆ ಇಳಿದರೆ ಅವರ ಮುಂದಿನ ಭವಿಷ್ಯದ ಗತಿ ಏನು? ಸಂಬಂಧಪಟ್ಟ ತಾಲ್ಲೂಕು ಅಧಿಕಾರಿಗಳು ಅನುತ್ತೀರ್ಣರಾಗಿರುವ ಮಕ್ಕಳಿಗೆ ನುರಿತ ಶಿಕ್ಷಕರಿಂದ ಭೋದನೆ ಶಿಬಿರ ಆಯೋಜಿಸಿ. ಕನಿಷ್ಠ ಉತ್ತೀರ್ಣರಾಗುವುದಕ್ಕಾದರೂ ಅವರಿಗೆ ನೆರವಾಗಬೇಕು’ ಎಂದು ಸಲಹೆ ನೀಡಿದರು.

ಶೇ 100ರಷ್ಟು ಫಲಿತಾಂಶ: ‘ಜಿಲ್ಲೆಯ ಎಲ್ಲ ಹಾಸ್ಟೆಲ್‌ ಮತ್ತು ವಸತಿ ಶಾಲೆಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಸಾಧನೆ ಮಾಡಲೇಬೇಕು. ಇದಕ್ಕೆ ಈ ಕ್ಷಣದಿಂದಲೇ ಅಗತ್ಯ ಕ್ರಮ ಕೈಗೊಳ್ಳಿ. ಪ್ರಾಂಶುಪಾಲರು ತಂಡದ ನಾಯಕರಂತೆ ಕೆಲಸ ಮಾಡಿ’ ಎಂದು ಸೂಚಿಸಿದರು.

‘ಹಿಂದಿನ ಶೈಕ್ಷಣಿಕ ವರ್ಷಕ್ಕಿಂತ ಈ ಬಾರಿ ಫಲಿತಾಂಶ ಸ್ವಲ್ಪ ಹೆಚ್ಚಳವಾಗಿದ್ದರೂ ಸಮಾಧಾನಕರವಾಗಿಲ್ಲ. ಸರ್ಕಾರ ಶಿಕ್ಷಣಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಎಲ್ಲ ಸೌಲಭ್ಯ ಕಲ್ಪಿಸಿದರೂ ಫಲಿತಾಂಶ ಉತ್ತಮವಾಗಿಲ್ಲ. ಇದಕ್ಕೆ ಶಿಕ್ಷಕರೇ ಕಾರಣರು. ಶಿಕ್ಷಕರು ಭೋದನೆ ವಿಚಾರದಲ್ಲಿ ಬದಲಾಗದಿದ್ದರೆ ಉಳಿಗಾಲವಿಲ್ಲ’ ಎಂದು ಎಚ್ಚರಿಸಿದರು.

ಫಲಿತಾಂಶ ಸುಧಾರಿಸಿ: ‘ಮುಳಬಾಗಿಲು ತಾಲ್ಲೂಕಿನ ಘಟ್ಟು ವೆಂಕಟರಮಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶೇ 100ರಷ್ಟು ಫಲಿತಾಂಶ ಬಂದಿದೆ. ಅದೇ ರೀತಿ ಹಲವು ವಸತಿ ಶಾಲೆಗಳು ಉತ್ತಮ ಫಲಿತಾಂಶ ಪಡೆದಿವೆ. ಇಂತಹ ಶಾಲೆಗಳನ್ನು ಮಾದರಿಯಾಗಿಸಿಕೊಂಡು ಇತರ ಶಾಲೆಗಳಲ್ಲೂ ಫಲಿತಾಂಶ ಸುಧಾರಣೆ ಮಾಡಬೇಕು’ ಎಂದು ಸೂಚಿಸಿದರು.

‘ಮುಂದಿನ ವರ್ಷದ ಫಲಿತಾಂಶಕ್ಕಾಗಿ ಮಕ್ಕಳ ಸ್ಥಿತಿಗತಿ ವರದಿ ಸಿದ್ಧಪಡಿಸಿಕೊಳ್ಳಬೇಕು. ಹಾಸ್ಟೆಲ್ ವಾರ್ಡನ್‌ಗಳು ಮಕ್ಕಳ ಕಡೆಗೆ ಸಂಪೂರ್ಣ ಗಮನ ಹರಿಸಿ ಕಾರ್ಯ ನಿರ್ವಹಿಸಿ. ಇಲ್ಲವೇ ಸ್ವಯಂಪ್ರೇರಿತರಾಗಿ ಕೆಲಸ ಬಿಟ್ಟು ಹೋಗಿ’ ಎಂದು ತಾಕೀತು ಮಾಡಿದರು.

ಸಮಾಧಾನಕರವಾಗಿಲ್ಲ: ‘ಹಾಸ್ಟೆಲ್‌ಗಳಲ್ಲಿ ಮಕ್ಕಳ ಹಾಜರಾತಿ ಮಾಹಿತಿ ಸಂಗ್ರಹಣೆಗಾಗಿ ಅಳವಡಿಸಿರುವ ಬಯೋಮೆಟ್ರಿಕ್ ವ್ಯವಸ್ಥೆ ಸಮಾಧಾನಕರವಾಗಿಲ್ಲ. ಒತ್ತಾಯಕ್ಕೆ ಮಕ್ಕಳನ್ನು ಕರೆತಂದು ಹಿಡಿದಿಟ್ಟುಕೊಳ್ಳುವುದನ್ನು ಬಿಡಬೇಕು. ಹಾಸ್ಟೆಲ್‌ ಮಕ್ಕಳು ಹೊರಗೆ ಹೋಗಿದ್ದಾಗ ಅನಾಹುತ ಸಂಭವಿಸಿದರೆ ವಾರ್ಡನ್‌ ಮತ್ತು ಸಿಬ್ಬಂದಿಯೇ ಜವಾಬ್ದಾರರು’ ಎಂದರು.

‘ಯಾರದೋ ಒತ್ತಾಯಕ್ಕೆ ಮಣಿದು ಹಾಸ್ಟೆಲ್‌ ನಡೆಸುವಂತಾಗಬಾರದು. ಪಕ್ಕಾ ಕೆಲಸ ಆಗಬೇಕಿದ್ದು, ಇದಕ್ಕೆ ಸಂಪೂರ್ಣ ಸಹಕಾರ ನೀಡುತ್ತೇನೆ. ಆಹಾರದ ಗುಣಮಟ್ಟ ಸದ್ಯಕ್ಕೆ ಸುಧಾರಣೆಯಾಗಿದೆ. ಏನಾದರೂ ಸಮಸ್ಯೆ ಎದುರಾದರೆ ಗಮನಕ್ಕೆ ತನ್ನಿ. ಗುತ್ತಿಗೆದಾರ ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಮುಲಾಜಿಲ್ಲದೆ ಶಿಸ್ತುಕ್ರಮಜರುಗಿಸುತ್ತೇನೆ. ಹಣ ನೀಡುವ ನಾವು ಗುತ್ತಿಗೆದಾರರು ಕೊಟ್ಟಿದ್ದನ್ನು ತೆಗೆದುಕೊಳ್ಳಲಾಗುವುದಿಲ್ಲ. ನಮಗೆ ಬೇಕಾದನ್ನು ಅವರು ಕೊಡಬೇಕಷ್ಟೇ’ ಎಂದು ಹೇಳಿದರು.

‘ಹಾಸ್ಟೆಲ್‌ನ ಆಹಾರದ ವೇಳಾಪಟ್ಟಿಯಲ್ಲಿ ಇರುವಂತೆಯೇ ಪ್ರತಿನಿತ್ಯ ಮಕ್ಕಳಿಗೆ ಊಟ, ತಿಂಡಿ ನೀಡಬೇಕು. ಆಹಾರದ ವೇಳಾಪಟ್ಟಿಯನ್ನು ಕಡ್ಡಾಯವಾಗಿ ಹಾಕಬೇಕು. ಜತೆಗೆ ಮಕ್ಕಳಿಗೆ ತಮ್ಮ ಸಮಸ್ಯೆ ಹೇಳಿಕೊಳ್ಳಲು ಅನುಕೂಲವಾಗುವಂತೆ ನನ್ನ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ಹಾಸ್ಟೆಲ್‌ನ ಫಲಕದಲ್ಲಿ ಹಾಕಿರಬೇಕು’ ಎಂದು ಸೂಚನೆ ನೀಡಿದರು.

ಹಾಸ್ಟೆಲ್‌ ವಾರ್ಡನ್‌ಗಳು ಹಾಗೂ ವಸತಿ ಶಾಲೆ ಪ್ರಾಂಶುಪಾಲರು ನೀರಿನ ಸಮಸ್ಯೆ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ, ‘ನಾನು ತುರ್ತಾಗಿ ಸಮಸ್ಯೆಗೆ ಸ್ಪಂದಿಸುತ್ತೇನೆ. ಇಲಾಖೆಯಿಂದಲೇ ನೀರಿನ ವ್ಯವಸ್ಥೆ ಮಾಡಿಕೊಳ್ಳಿ’ ಎಂದು ತಿಳಿಸಿದರು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಸಿಂಧೂ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT