ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತ್ರೀಶಕ್ತಿ ಸಂಘ ಸಾಲ: ₹ 1 ಲಕ್ಷಕ್ಕೆ ಏರಿಸಿ-ಶಾಸಕ ಶ್ರೀನಿವಾಸಗೌಡ

ಡಿಸಿಸಿ ಬ್ಯಾಂಕ್‍ ಆಡಳಿತ ಮಂಡಳಿಗೆ ಶಾಸಕ ಶ್ರೀನಿವಾಸಗೌಡ ಸಲಹೆ
Last Updated 31 ಜನವರಿ 2022, 16:23 IST
ಅಕ್ಷರ ಗಾತ್ರ

ಕೋಲಾರ: ‘ಅವಿಭಜಿತ ಕೋಲಾರ ಜಿಲ್ಲೆಯ ಹೆಣ್ಣು ಮಕ್ಕಳು ಆರ್ಥಿಕವಾಗಿ ಸಬಲರಾಗಲು ಡಿಸಿಸಿ ಬ್ಯಾಂಕ್ ಕಡೆಯಿಂದ ₹ 1 ಲಕ್ಷ ಬಡ್ಡಿರಹಿತ ಸಾಲ ನೀಡುವ ಬಗ್ಗೆ ಬ್ಯಾಂಕ್‌ನ ಆಡಳಿತ ಮಂಡಳಿ ಚಿಂತನೆ ನಡೆಸಬೇಕು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಸಲಹೆ ನೀಡಿದರು.

ಡಿಸಿಸಿ ಬ್ಯಾಂಕ್ ಮತ್ತು ಅಣ್ಣಿಹಳ್ಳಿ ರೇಷ್ಮೆ ಬೆಳಗಾರರ ಮತ್ತು ರೈತರ ಸೇವಾ ಸಹಕಾರ ಸಂಘದ ಸಹಯೋಗದಲ್ಲಿ ತಾಲ್ಲೂಕಿನ ಬೀರಮಾನಹಳ್ಳಿ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಹಿಳಾ ಸ್ವಸಹಾಯ ಸಂಘಗಳಿಗೆ ₹ 10.20 ಕೋಟಿ ಸಾಲ ವಿತರಿಸಿ ಮಾತನಾಡಿದರು.

‘ಮಹಿಳೆಯರಿಗೆ ಹೈನುಗಾರಿಕೆ ಮಾಡಲು ಹಸು ಖರೀದಿಗೆ ಕನಿಷ್ಠ ₹ 80 ಸಾವಿರ ಬೇಕಿದೆ. ಬ್ಯಾಂಕ್ ಕೊಡುವ ₹ 50 ಸಾವಿರ ಯಾವುದಕ್ಕೂ ಸಾಲುವುದಿಲ್ಲ. ಹೆಚ್ಚು ಸಾಲ ಕೊಟ್ಟರೆ ಮಾತ್ರ ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯ. ಆಡಳಿತ ಮಂಡಳಿ ಈ ಬಗ್ಗೆ ಗಮನ ಹರಿಸಬೇಕು’ ಎಂದು ಮನವಿ ಮಾಡಿದರು.

‘ಸ್ತ್ರೀಶಕ್ತಿ ಸಂಘಗಳ ಸದಸ್ಯರು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ₹ 1 ಲಕ್ಷ ನೀಡುವಂತೆ ಸರ್ಕಾರದ ಮೇಲೆ ಜಿಲ್ಲೆಯ ಶಾಸಕರು ಒಳಗೊಂಡಂತೆ ಒತ್ತಡ ಹೇರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಕಾಂಗ್ರೆಸ್‌ ಪಕ್ಷವು ಈ ಅಂಶವನ್ನು ಮುಂದಿನ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಲಿದೆ’ ಎಂದು ವಿಧಾನ ಪರಿಷತ್ ಸದಸ್ಯ ಎಂ.ಎಲ್‌.ಅನಿಲ್‌ಕುಮಾರ್ ತಿಳಿಸಿದರು.

‘ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಸ್ವಾವಲಂಬಿ ಬದುಕು ನಡೆಸಲು ತಲಾ ₹ 50 ಸಾವಿರ ಬಡ್ಡಿರಹಿತ ಸಾಲ ನೀಡುವ ಚಾರಿತ್ರಿಕ ನಿರ್ಣಯ ಕೈಗೊಂಡಿತ್ತು.ಈಗಿನ ಬಿಜೆಪಿ ಸರ್ಕಾರ ಈ ಮೊತ್ತವನ್ನು ₹ 1 ಲಕ್ಷಕ್ಕೇರಿಸಬೇಕು. ಮಹಿಳೆಯರು ಸಾಲ ಸದುಪಯೋಗಪಡಿಸಿಕೊಂಡು ಬ್ಯಾಂಕ್‍ಗೆ ಮರುಪಾವತಿ ಮಾಡಿ ಶಕ್ತಿ ತುಂಬಬೇಕು’ ಎಂದು ಕೋರಿದರು.

ಠೇವಣಿಯಿಟ್ಟು ಶಕ್ತಿ ತುಂಬಿ: ‘ಹೆಣ್ಣು ಮಕ್ಕಳಿಗೆ ಬಡ್ಡಿರಹಿತವಾಗಿ ತಲಾ ₹ 1 ಲಕ್ಷ ಸಾಲ ನೀಡಲು ಬ್ಯಾಂಕ್‌ಗೆ ಶಕ್ತಿಯಿದೆ. ಆದರೆ, ಸಮಾಜದ ಪ್ರತಿಯೊಬ್ಬರೂ ತಮ್ಮ ಉಳಿತಾಯದ ಹಣವನ್ನು ಡಿಸಿಸಿ ಬ್ಯಾಂಕ್‌ನಲ್ಲಿ ಠೇವಣಿ ಇಡಬೇಕು. ಕೇವಲ ಸಾಲಕ್ಕಾಗಿ ಡಿಸಿಸಿ ಬ್ಯಾಂಕ್, ಠೇವಣಿ ಇಡಲು ಖಾಸಗಿ ಬ್ಯಾಂಕ್‌ ಎಂಬ ಮನಸ್ಥಿತಿ ದೂರವಾಗಬೇಕು’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಹೇಳಿದರು.

‘ಜನರು ಉಳಿತಾಯದ ಹಣವನ್ನು ಡಿಸಿಸಿ ಬ್ಯಾಂಕ್‌ನಲ್ಲಿ ಠೇವಣಿಯಿಟ್ಟು ಶಕ್ತಿ ತುಂಬಿ. ಆಗ ಹೆಚ್ಚಿನ ಸಂಖ್ಯೆಯ ಮಹಿಳೆಯರು ರೈತರಿಗೆ ನೆರವಾಗುವ ಸಾಮರ್ಥ್ಯ ಬರುತ್ತದೆ. ಮನುಷ್ಯ ಶಾಶ್ವತವಲ್ಲ. ಆದರೆ, ನಾವು ಮಾಡಿದ ಸಾಧನೆಗಳು ಶಾಶ್ವತವಾಗಿ ಉಳಿಯುತ್ತದೆ’ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸೋಮಣ್ಣ, ಕೆ.ವಿ.ದಯಾನಂದ್, ಅಣ್ಣಿಹಳ್ಳಿ ಸೊಸೈಟಿ ಅಧ್ಯಕ್ಷ ಎನ್.ನಾಗರಾಜ್ ಮಾಜಿ ಕಾರ್ಯದರ್ಶಿ ಚಂದ್ರಣ್ಣ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT