ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವನಾತ್ಮಕವಾಗಿ ಕನ್ನಡ ಭಾಷೆ ಬೆಳೆಸಿ: ಟಿ.ಎಸ್.ನಾಗಾಭರಣ

ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗಾಭರಣ ಸಲಹೆ
Last Updated 8 ಏಪ್ರಿಲ್ 2021, 15:45 IST
ಅಕ್ಷರ ಗಾತ್ರ

ಕೋಲಾರ: ‘ಬಹು ಭಾಷಾ ಸಂಗಮವಾಗಿರುವ ಗಡಿ ಜಿಲ್ಲೆ ಕೋಲಾರದಲ್ಲಿ ತಾತ್ವಿಕತೆ ಬದಲಿಗೆ ಭಾವನಾತ್ಮಕವಾಗಿ ಕನ್ನಡ ಕಟ್ಟುವ ಕೆಲಸ ಮಾಡಬೇಕು. ಆಗ ಖಂಡಿತ ಕನ್ನಡ ಭಾಷೆ ಉಳಿಯುತ್ತದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅಭಿಪ್ರಾಯಪಟ್ಟರು.

ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರು ಮತ್ತು ಕನ್ನಡಪರ ಸಂಘ- ಸಂಸ್ಥೆಗಳ ಮುಖಂಡರೊಂದಿಗೆ ಇಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿ, ‘ಮನಸ್ಸುಗಳನ್ನು ಬೆಸೆದಾಗ ಸಮಾಜ ಕಟ್ಟಲು ಸಾಧ್ಯ. ಸಮಾಜ ಕಟ್ಟಲು ಎಷ್ಟು ಕಷ್ಟವೋ ಭಾಷೆ ಕಟ್ಟುವುದು ಸಹ ಅಷ್ಟೇ ಕಷ್ಟ. ಈ ಕೆಲಸ ನಿಧಾನ ಗತಿಯಲ್ಲಿ ಕಾರ್ಯರೂಪಕ್ಕೆ ಬರುತ್ತದೆ’ ಎಂದು ಹೇಳಿದರು.

‘ಕನ್ನಡ ಭಾಷೆಯು ಜನಪರ ಜನಪದವಾಗಿ ಬೆಳೆಯಬೇಕು. ಕನ್ನಡ ಬೆಳವಣಿಗೆಗೆ ಗಲಾಟೆ, ದೊಂಬಿ ಮಾಡುವ ಬದಲು ಕನ್ನಡ ವಿರೋಧಿಗಳ ಮನವೊಲಿಕೆ ಅಭಿಯಾನ ನಡೆಯಬೇಕು. ಜಿಲ್ಲೆ ಗಡಿ ಭಾಗದಲ್ಲಿರುವುದರಿಂದ ಅನ್ಯ ಭಾಷೆ ಮಾತನಾಡುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದ್ದರಿಂದ ಸಹೋದರ ಭಾವನೆಯಲ್ಲಿ ಕನ್ನಡ ಭಾಷೆ ಅಳವಡಿಸಿಕೊಳ್ಳುವಂತೆ ಅವರ ಮನವೊಲಿಸಬೇಕು’ ಎಂದು ಸಲಹೆ ನೀಡಿದರು.

‘ರಾಜ್ಯದಲ್ಲಿನ ಬಹುಪಾಲು ಬ್ಯಾಂಕ್‌ಗಳು ಭಾಷಾ ನೀತಿ ಉಲ್ಲಂಘಿಸುತ್ತಿವೆ. ಬ್ಯಾಂಕ್‌ ಅಧಿಕಾರಿಗಳು ವ್ಯವಹಾರಿಕವಾಗಿ ತೆಲುಗು ಮಾತನಾಡಬಾರದು. ಬದಲಿಗೆ ಕನ್ನಡದಲ್ಲೇ ಮಾತನಾಡಬೇಕು. ಭಾರತೀಯ ರಿಸರ್ವ್ ಬ್ಯಾಂಕ್‌ನ ನಿಯಮಾವಳಿ, ನೇಮಕಾತಿ ಪ್ರಕ್ರಿಯೆ ಹಾಗೂ ಆಡಳಿತದಲ್ಲಿ ಕನ್ನಡ ಸಂಪೂರ್ಣ ಅನುಷ್ಠಾನ ಸಂಬಂಧ ಸಭೆ ಸಮಾಲೋಚನೆ ನಡೆಸಿ ಕನ್ನಡ ನಾಮಫಲಕಗಳ ಅಳವಡಿಕೆಗೆ 3 ತಿಂಗಳ ಗಡುವು ನೀಡಲಾಗಿದೆ’ ಎಂದರು.

‘ಜಿಲ್ಲೆಯು ಕನ್ನಡಪರ ಹೋರಾಟಗಳಿಗೆ ಹೆಸರುವಾಸಿಯಾಗಿದ್ದು, ಸಮಾನ ಮನಸ್ಕರು ಸಾಂಸ್ಕೃತಿಕ, ಸಾಹಿತ್ಯಕ ಹಾಗೂ ಶೈಕ್ಷಣಿಕವಾಗಿ ಕಾರ್ಯಕ್ರಮ ಹಮ್ಮಿಕೊಂಡು ಜನರಲ್ಲಿ ಭಾಷಾ ಪ್ರೇಮ ಬೆಳಸಬೇಕು. ಅನ್ಯಭಾಷೆ ಬಳಕೆಯನ್ನು ಸಮಸ್ಯೆ ರೀತಿ ನೋಡದೆ ಕನ್ನಡಪರ ಹೋರಾಟಗಾರರು ಹಾಗೂ ಪ್ರಾಧಿಕಾರಗಳು ಸಂಬಂಧಪಟ್ಟ ಅಧಿಕಾರಿಗಳಿಂದ ಮತ್ತು ಆದೇಶಗಳಿಂದ ಬಗೆಹರಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಇಂಗ್ಲಿಷ್ ನಾಮಫಲಕ: ‘ಜಿಲ್ಲಾ ಕೇಂದ್ರದ ಬಹುಪಾಲು ಅಂಗಡಿಗಳಿಗೆ ಇಂಗ್ಲಿಷ್ ಭಾಷೆಯ ನಾಮಫಲಕ ಅಳವಡಿಸಲಾಗಿದೆ. ನಗರಸಭೆ ವಾಣಿಜ್ಯ ಪರವಾನಗಿ ನೀಡುವ ಸಂದರ್ಭದಲ್ಲಿ ಹಾಕುವ ಷರತ್ತುಗಳನ್ನು ಅಂಗಡಿ ಮಾಲೀಕರು ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ’ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‌ಶೆಟ್ಟಿ ಬಣ) ಜಿಲ್ಲಾ ಘಟಕದ ಅಧ್ಯಕ್ಷ ರಾಜೇಶ್ ದೂರಿದರು.

‘ಬ್ಯಾಂಕ್‌ಗಳಲ್ಲಿ ಕನ್ನಡ ಭಾಷೆ ಬಾರದ ಅಧಿಕಾರಿಗಳ ಸಂಖ್ಯೆ ಹೆಚ್ಚಿದ್ದು, ಅವರಿಗೆ ಕನ್ನಡ ಕಲಿಸುವ ಕೆಲಸ ಆಗಬೇಕು. ಅವರು ಕನ್ನಡ ಭಾಷೆ ಕಲಿಯದಿದ್ದರೆ ಅವರನ್ನು ಸೇವೆಯಿಂದ ಬಿಡುಗಡೆಗೊಳಿಸಿ ಕನ್ನಡಿಗರನ್ನು ನೇಮಿಸಿಕೊಳ್ಳಬೇಕು’ ಎಂದು ಮನವಿ ಮಾಡಿದರು.

ಕನ್ನಡಪರ ಹೋರಾಟಗಾರರು, ಕನ್ನಡಪರ ಸಂಘ ಸಂಸ್ಥೆಗಳ ಸದಸ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT