ಕೋಲಾರ: ‘ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಸರ್ಕಾರ ರಚಿಸುವ ರಾಜಕೀಯ ಪಕ್ಷಗಳು ದಲಿತ ಸಮುದಾಯದವರನ್ನು ಮುಖ್ಯಮಂತ್ರಿ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಬೇಕು’ ಎಂದು ಅಂಬೇಡ್ಕರ್ ದಲಿತ ಸೇನೆ ಮತ್ತು ಮೂಲನಿವಾಸಿ ಸಂಘಟನೆಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಆರ್.ಕೇಶವಮೂರ್ತಿ ಒತ್ತಾಯಿಸಿದರು.
ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘2013ರ ಮತ್ತು 2018ರ ವಿಧಾಸಭಾ ಚುನಾವಣೆ ಬಳಿಕ ದಲಿತರು ಮುಖ್ಯಮಂತ್ರಿ ಆಗಬೇಕೆಂಬ ಒತ್ತಾಯ ಕೇಳಿಬಂದಿದ್ದರಿಂದ ಆ ಸಮುದಾಯದವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಯಿತು’ ಎಂದರು.
‘ದಲಿತ ಮುಖಂಡರು ರಾಜಕೀಯವಾಗಿ ದೊಡ್ಡ ಹುದ್ದೆ ಸಮರ್ಥವಾಗಿ ನಿರ್ವಹಿಸಿದ ಉದಾಹರಣೆ ಸಾಕಷ್ಟಿವೆ. ಆದರೆ, ರಾಜ್ಯದಲ್ಲಿ ಈವರೆಗೆ ದಲಿತ ಮುಖಂಡರು ಮುಖ್ಯಮಂತ್ರಿ ಆಗಿಲ್ಲ. ದಲಿತ ಮುಖ್ಯಮಂತ್ರಿ ಅನುಷ್ಠಾನ ಮತ್ತು ಹೋರಾಟ ಸಮಿತಿಯಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹೋರಾಟ ನಡೆಸಿ ಸಮುದಾಯದವರಲ್ಲಿ ಜಾಗೃತಿ ಮೂಡಿಸುತ್ತೇವೆ’ ಎಂದು ಹೇಳಿದರು.
‘ಪ್ರತಿ ಜಿಲ್ಲೆಯ ಗ್ರಾಮ ಮಟ್ಟದಲ್ಲಿ ಸಭೆ, ಸಮಾವೇಶ ನಡೆಸಿ ದಲಿತ ಸಮುದಾಯವನ್ನು ಒಗ್ಗೂಡಿಸಿ ಬೆಂಗಳೂರಿನಲ್ಲಿ ಐತಿಹಾಸಿಕ ಸಮಾವೇಶ ಆಯೋಜಿಸುತ್ತೇವೆ. ದಲಿತ ಮುಖ್ಯಮಂತ್ರಿ ಬೇಡಿಕೆ ಈಡೇರಿಸುವಂತೆ ಸಮಾವೇಶದ ಮೂಲಕ ಸಂದೇಶ ರವಾನಿಸುತ್ತೇವೆ. ಚುನಾವಣಾ ಪ್ರಣಾಳಿಕೆಯಲ್ಲಿ ದಲಿತ ಮುಖಂಡರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸುವ ಪಕ್ಷಕ್ಕೆ ಮತ ನೀಡುವಂತೆ ಮತ್ತು ಘೋಷಣೆ ಮಾಡದ ಪಕ್ಷವನ್ನು ತಿರಸ್ಕರಿಸುವಂತೆ ಮನವಿ ಮಾಡುತ್ತೇವೆ’ ಎಂದು ವಿವರಿಸಿದರು.
ಆಳುವ ಶಕ್ತಿಯಿದೆ: ‘ದಲಿತರಿಗೂ ರಾಜ್ಯ ಆಳುವ ಶಕ್ತಿಯಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ದಲಿತ ಸಮುದಾಯದವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಬೇಕು. ಆವರೆಗೆ ಹೋರಾಟ ಮುಂದುವರಿಸುತ್ತೇವೆ. ಹೋರಾಟಕ್ಕೆ ಮಠಾಧೀಶರು, ದಲಿತಪರ ಹೋರಾಟಗಾರರು, ರಾಜಕೀಯ ಮುಖಂಡರು, ಹಾಲಿ ಮತ್ತು ನಿವೃತ್ತ ಅಧಿಕಾರಿಗಳು, ವಿವಿಧ ಕ್ಷೇತ್ರಗಳ ಸಾಧಕರು ಬೆಂಬಲ ನೀಡುತ್ತಾರೆ’ ಎಂದು ಬಹುಜನ ದಲಿತ ಸಂಘರ್ಷ ಸಮಿತಿ ರಾಜ್ಯ ಅಧ್ಯಕ್ಷ ವಿಜಯ್‌ಕುಮಾರ್ ತಿಳಿಸಿದರು.
ವಿವಿಧ ದಲಿತಪರ ಸಂಘಟನೆಗಳ ಮುಖಂಡರಾದ ಎಂ.ಚಂದ್ರಪ್ಪ, ಶ್ರೀನಿವಾಸ್, ನಾಗರಾಜ್, ಎ.ಸುರೇಶ್, ಎಂ.ನಾಗೇಶ್ ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.