ಭಾನುವಾರ, ಜುಲೈ 25, 2021
25 °C

ಮಗಳು ಪರಾರಿ; ತಂದೆ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಿವಾಸಪುರ: ತಾಲ್ಲೂಕಿನ ವೈ.ಹೊಸಕೋಟೆ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಮಂಗಳವಾರ ರಾತ್ರಿ ಮರಕ್ಕೆ ನೇಣು ಹಾಕಿ ಕೊಂಡು ನಾರಾಯಣಸ್ವಾಮಿ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.

ನಾರಾಯಣಸ್ವಾಮಿ ಅವರಿಗೆ ಇಬ್ಬರು ಪತ್ನಿಯರಿದ್ದು, ಎರಡನೇ ಪತ್ನಿಯ ಮಗಳು ಕೆಲವು ದಿನಗಳ ಹಿಂದೆ ಪ್ರಿಯಕರನ ಜತೆ ಪರಾರಿಯಾಗಿದ್ದಳು. ಇದರಿಂದ ಬೇಸರಗೊಂಡ ತಾಯಿ ಮಂಗಳವಾರ ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ತಡ ರಾತ್ರಿ ಗ್ರಾಮಕ್ಕೆ ಬಂದ ನಾರಾಯಣಸ್ವಾಮಿ, ಗ್ರಾಮದ ಸಮೀಪ ಹುಣಸೆ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

----

ಆನೆ ದಾಳಿ

ಕೆಜಿಎಫ್‌: ಕಾಡಾನೆಗಳ ಹಿಂಡು ಬುಧವಾರ ನಗರದ ಹೊರಭಾಗದ ಮೂರು ಗ್ರಾಮಗಳ ಮೇಲೆ ಹಾದು ಹೋಗಿದ್ದರಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.

ನಗರದ ಹೊರವಲಯದ ಚೆನ್ನಾಗನಹಳ್ಳಿ, ಕಂಬಳಿ, ಮೂಗನೂರು ಮೇಲೆ ಹಾದು ಹೋಗಿರುವ ಆರು ಆನೆಗಳ ಹಿಂಡು ದಾರಿಯಲ್ಲಿ ಸಿಕ್ಕಿದ ಬಾಳೆ ಮತ್ತು ಮಾವು ಹಾಗೂ ಸಪೋಟ ತೋಟಗಳನ್ನು ನಾಶಮಾಡಿವೆ.

ದೊಡ್ಡ ಕಂಬಳಿ ಗ್ರಾಮದ ರವೀಂದ್ರ ಅವರ ಬಾಳೆ ತೋಟ, ಅದೇ ಗ್ರಾಮದ ಕಾಶಿನಾಥ್‌ ಅವರ ಮಾವಿನ ತೋಟ, ಚಿನ್ನಾಗನಹಳ್ಳಿಯ ಏಕಾಂತ ರೆಡ್ಡಿ ಅವರ ಟೊಮೆಟೊ ಮತ್ತು ದೊಡ್ಡ ಕಂಬಳಿಯ ಲತಾ ರಮೇಶ್ ಅವರ ಸಪೋಟ ಹಣ್ಣಿನ ತೋಟ ಆನೆ ದಾಳಿಗೆ ಸಿಕ್ಕಿ
ನಷ್ಟವುಂಟಾಗಿದೆ.

ಕಾಮಸಮುದ್ರದಿಂದ ಬಂದಿರುವ ಆನೆಗಳು ಎರಡು ತಿಂಗಳ ಹಿಂದೆ ಕೂಡ ಇದೇ ಮಾರ್ಗದಲ್ಲಿ ಬಂದಿದ್ದವು. ಸಂಜೆ ವೇಳೆಗೆ ಹಿಂಡು ಬೋಡುಗುರ್ಕಿ ಗ್ರಾಮದತ್ತ ತೆರಳಿದೆ. ರಾತ್ರಿ ವೇಳೆಗೆ ತೊಪ್ಪನಹಳ್ಳಿ ಮಾರ್ಗವಾಗಿ ತಮಿಳುನಾಡಿಗೆ ಹೋಗಬಹುದು ಎಂದು ಅರಣ್ಯ ಇಲಾಖೆ ಅಂದಾಜಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು