ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ಮೇರಹಳ್ಳಿ ಕೆರೆಯಲ್ಲಿ ಡಿ.ಸಿ ಪರಿಶೀಲನೆ

Last Updated 12 ನವೆಂಬರ್ 2019, 17:11 IST
ಅಕ್ಷರ ಗಾತ್ರ

ಕೋಲಾರ: ನಗರದ ಹೊರವಲಯದ ಅಮ್ಮೇರಹಳ್ಳಿ ಕೆರೆ ಅಂಗಳದಲ್ಲಿ ಕೊರೆದಿರುವ ಕೊಳವೆ ಬಾವಿಗಳಿಗೆ ಕೆ.ಸಿ ವ್ಯಾಲಿ ಯೋಜನೆ ನೀರು ಸೇರದಂತೆ ತಡೆಗೋಡೆ ನಿರ್ಮಿಸಲಾಗುತ್ತಿದ್ದು, ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮಂಗಳವಾರ ಕೆರೆಗೆ ಭೇಟಿ ನೀಡಿ ತಡೆಗೋಡೆ ಕಾಮಗಾರಿ ಪರಿಶೀಲಿಸಿದರು.

ಕೆ.ಸಿ ವ್ಯಾಲಿ ಯೋಜನೆಯಿಂದ ಜಿಲ್ಲೆಗೆ ಹರಿದು ಬರುತ್ತಿರುವ ನೀರು ಸದ್ಯದಲ್ಲೇ ಅಮ್ಮೇರಹಳ್ಳಿ ಕೆರೆಗೆ ಬರಲಿದೆ. ನಗರದ ಹೊರವಲಯದಲ್ಲಿರುವ ಅಮ್ಮೇರಹಳ್ಳಿ ಹಾಗೂ ಮಡೇರಹಳ್ಳಿ ಕೆರೆಗಳನ್ನು ನಗರಕ್ಕೆ ಅಗತ್ಯವಿರುವ ಕುಡಿಯುವ ನೀರಿನ ಶೇಖರಣೆಗೆ ಮೀಸಲಿರಿಸಲಾಗಿದೆ. ಈ ಉದ್ದೇಶಕ್ಕಾಗಿ ಎರಡೂ ಕೆರೆಗಳ ಅಂಗಳದಲ್ಲಿ ಸಾಕಷ್ಟು ಕೊಳವೆ ಬಾವಿ ಕೊರೆಸಲಾಗಿದೆ.

ಕೆರೆಯಂಗಳದ ಕೊಳವೆ ಬಾವಿಗಳಲ್ಲಿನ ಅಂತರ್ಜಲದ ಜತೆ ಕೆ.ಸಿ ವ್ಯಾಲಿ ಯೋಜನೆ ನೀರು ಸೇರುವ ಆತಂಕ ಎದುರಾಗಿದೆ. ಹೀಗಾಗಿ ಕೊಳವೆ ಬಾವಿಗಳ ಸುತ್ತ ತಡೆಗೋಡೆ ನಿರ್ಮಿಸಲಾಗುತ್ತಿದೆ. ಕಾಮಗಾರಿ ಪರಿಶೀಲನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ‘ಕೆ.ಸಿ ವ್ಯಾಲಿ ನೀರು ಮಡೇರಹಳ್ಳಿ ಕೆರೆಗೂ ಬರುತ್ತದೆ’ ಎಂದು ತಿಳಿಸಿದರು.

‘ನಗರಕ್ಕೆ ಕುಡಿಯುವ ನೀರು ಪೂರೈಸುವ ಉದ್ದೇಶಕ್ಕಾಗಿ ಮಡೇರಹಳ್ಳಿ, ಅಮ್ಮೇರಹಳ್ಳಿ ಹಾಗೂ ಕೋಲಾರಮ್ಮ ಕೆರೆ ಅಂಗಳದಲ್ಲಿ ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಈ ಕೊಳವೆ ಬಾವಿಗಳ ಒಳಗೆ ಕೆ.ಸಿ ವ್ಯಾಲಿ ನೀರು ಇಳಿಯದಂತೆ ನಗರಸಭೆಯಿಂದ ತಡೆಗೋಡೆ ನಿರ್ಮಿಸಲಾಗುತ್ತಿದೆ’ ಎಂದು ವಿವರಿಸಿದರು.

‘ಸದ್ಯ ಮಡೇರಹಳ್ಳಿ ಕೆರೆಯಂಗಳದ ೮ ಕೊಳವೆ ಬಾವಿಗಳಲ್ಲಿ ನೀರು ಲಭ್ಯವಿದೆ. ಈ ಕೊಳವೆ ಬಾವಿಗಳಿಗೆ ತಡೆಗೋಡೆ ನಿರ್ಮಿಸಲಾಗುತ್ತಿದೆ. ಮಡೇರಹಳ್ಳಿ ಕೆರೆಗೆ ಸಂಪೂರ್ಣವಾಗಿ ಕೆ.ಸಿ ವ್ಯಾಲಿ ನೀರು ಹರಿಸುವುದಿಲ್ಲ. ಕೋಲಾರ ನಗರಕ್ಕೆ ಈ ಕೆರೆಯಿಂದ ಕುಡಿಯುವ ನೀರು ಪೂರೈಕೆಯಾಗುತ್ತಿರುವ ಕಾರಣ ಕೆರೆಗೆ ಹೆಚ್ಚಿನ ನೀರು ಹರಿಸುವುದಿಲ್ಲ. ಕೊಳವೆ ಬಾವಿಗಳಿಗೆ ಹೆಚ್ಚುವರಿಯಾಗಿ ಪೈಪ್‌ ಅಳವಡಿಸಿ ಪಂಪ್‌ ಮತ್ತು ಮೋಟರ್‌ಗಳನ್ನು ಎತ್ತರದಲ್ಲಿ ಇರಿಸಲಾಗುವುದು’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT