ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಪೂರ್ಣ

7
ತಿದ್ದುಪಡಿಗೆ ಅವಕಾಶವಿದೆ: ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಮಂಜುನಾಥ್‌ ಹೇಳಿಕೆ

ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಪೂರ್ಣ

Published:
Updated:
Prajavani

ಕೋಲಾರ: ‘ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು, 7,187 ಮಂದಿ ಹೊಸ ಮತದಾರರು ಹೆಸರು ನೋಂದಾಯಿಸಿದ್ದಾರೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜಿಲ್ಲೆಯ ಜನಸಂಖ್ಯೆಗೆ ಹೋಲಿಕೆ ಮಾಡಿದರೆ ಶೇ 71.46ರಷ್ಟು ಮತದಾರರ ನೋಂದಣಿಯಾಗಿದೆ. ತಿದ್ದುಪಡಿ, ಸೇರ್ಪಡೆ ಮತ್ತಿತರ ಸಮಸ್ಯೆ ಕಂಡುಬಂದಲ್ಲಿ ಕೂಡಲೇ ಬಗೆಹರಿಸಿಕೊಳ್ಳಬಹುದು’ ಎಂದು ಹೇಳಿದರು.

‘ಮತದಾರರ ಪಟ್ಟಿಗಳು ದೋಷರಹಿತವಾಗಿ ಅಂತಿಮಗೊಂಡಿವೆ. ತಿದ್ದುಪಡಿ ಸರಿಪಡಿಸಿಕೊಳ್ಳಲು ಲೋಕಸಭೆ ಚುನಾವಣೆ ನಾಮಪತ್ರ ಸಲ್ಲಿಕೆವರೆಗೂ ಅವಕಾಶವಿದೆ. ಬೂತ್‌ ಮಟ್ಟದಲ್ಲಿ 18 ವರ್ಷ ತುಂಬಿರುವ ಯುವಕ ಯುವತಿಯರು ಇದ್ದರೆ ಪಟ್ಟಿಗೆ ಹೆಸರು ಸೇರಿಸಲು ಬೂತ್‌ ಏಜೆಂಟರಿಗೆ ಅಥವಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ವಿವರಿಸಿದರು.

‘ಚುನಾವಣೆಯಲ್ಲಿ ಮತದಾರರ ಪಟ್ಟಿ ಮುಖ್ಯ. ಈ ನಿಟ್ಟಿನಲ್ಲಿ ಸಾಕಷ್ಟು ಪರಿಶೀಲನೆ ಬಳಿಕ ಯಾವುದೇ ದೋಷವಿಲ್ಲದಂತೆ ಪಟ್ಟಿ ಅಂತಿಮಗೊಳಿಸಲಾಗಿದೆ. ಮತದಾರರ ಪಟ್ಟಿಯನ್ನು ಆಯಾ ಬೂತ್‌ಗಳಲ್ಲಿ ಪ್ರಕಟಿಸಲಾಗುವುದು. ಯಾವುದೇ ಲೋಪವಿದ್ದರೆ ಸರಿಪಡಿಸಿಕೊಳ್ಳಲು ಸಮಯಾವಕಾಶವಿದೆ. ಈ ಬಗ್ಗೆ ಆತಂಕ ಬೇಡ’ ಎಂದು ಮಾಹಿತಿ ನೀಡಿದರು.

ಜಿಲ್ಲೆಯ ಮತದಾರರು: ‘ಜ.16ಕ್ಕೆ ಜಿಲ್ಲೆಯಲ್ಲಿ ಒಟ್ಟು 11,99,188 ಮತದಾರರಿದ್ದಾರೆ. ಈ ಪೈಕಿ 6,22,306 ಪುರುಷ ಮತದಾರರು ಮತ್ತು 5,96,881 ಮಹಿಳಾ ಮತದಾರರು, 101 ಮಂದಿ ಇತರೆ ಮತದಾರರಿದ್ದಾರೆ. 7,187 ಮಂದಿ ಯುವ ಮತದಾರರು ಈ ಬಾರಿ ಸೇರ್ಪಡೆಗೊಂಡಿದ್ದು, ಮೊದಲ ಬಾರಿ ಮತ ಚಲಾವಣೆಗೆ ಸಿದ್ಧರಾಗಿದ್ದಾರೆ’ ಎಂದರು.

‘100 ವರ್ಷ ತುಂಬಿರುವ ಮತದಾರರ ಬಗ್ಗೆ ವಿಶೇಷ ಆಸಕ್ತಿ ವಹಿಸಲಾಗಿದ್ದು, ಸಾಕಷ್ಟು ಮಂದಿ ಮೃತಪಟ್ಟಿರುತ್ತಾರೆ. ಹೆಚ್ಚಿನ ಪರಿಶೀಲನೆ ನಡೆಸಲಾಗುತ್ತಿದೆ. ಮತದಾರರ ಪಟ್ಟಿಯಲ್ಲಿನ ದೋಷ ಸೇರಿದಂತೆ ಯಾವುದೇ ಸಮಸ್ಯೆಯಿದ್ದರೂ ಉಚಿತ ಸಹಾಯವಾಣಿ ಸಂಖ್ಯೆ 1950ಕ್ಕೆ ಕರೆ ಮಾಡಿ ದೂರು ನೀಡಬಹುದು’ ಎಂದು ತಿಳಿಸಿದರು.

ದೂರುಗಳಿವೆ: ‘ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೆ ನೇರವಾಗಿ ಜಿಲ್ಲೆಗೆ ಸಂಪರ್ಕ ನೀಡುತ್ತದೆ. ಸಹಾಯವಾಣಿ ಬಗ್ಗೆ ದೂರುಗಳಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಸೂಚನೆ ಮೇರೆಗೆ ನಾನು ಪ್ರತಿನಿತ್ಯ ಕನಿಷ್ಠ ಒಂದು ಬಾರಿ ಆ ಸಂಖ್ಯೆಗೆ ಕರೆ ಮಾಡಿ ಪರಿಶೀಲಿಸುತ್ತಿದ್ದೇನೆ’ ಎಂದು ಸ್ಪಷ್ಟಪಡಿಸಿದರು.

‘ಜಿಲ್ಲಾ ಮಟ್ಟದಿಂದ ಬೂತ್ ಮಟ್ಟದವರೆಗೆ ಜ.25ರಂದು ಮತದಾರರ ದಿನಾಚರಣೆ  ಹಮ್ಮಿಕೊಂಡು, ಜಾಥಾ ಸೇರಿದಂತೆ ಅರಿವು ಕಾರ್ಯಕ್ರಮ ನಡೆಸಲಾಗುವುದು. ಜತೆಗೆ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಲಾಗುವುದು’ ಎಂದು ತಿಳಿಸಿದರು.

‘ಮತದಾರರ ಪಟ್ಟಿ ಅಂತಿಮವಾಗಿರುವ ಕುರಿತು ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಚರ್ಚೆ ನಡೆಸಲಾಗಿದೆ. ಯಾವುದೇ ದೋಷವಿಲ್ಲವೆಂದು ಅವರು ದೃಢಪಡಿಸಿದ್ದಾರೆ. ಅಂತೆಯೇ ಪ್ರತಿ ಬೂತ್‌ನಲ್ಲಿ ಏಜೆಂಟರನ್ನು ನೇಮಿಸಿಕೊಳ್ಳಲು ಅರ್ಜಿ ಪಡೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ’ ಎಂದು ವಿವರಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪುಷ್ಪಲತಾ, ಉಪ ವಿಭಾಗಾಧಿಕಾರಿ ಕೆ.ಶುಭಾ ಕಲ್ಯಾಣ್‌ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !