ಮಂಗಳವಾರ, ಏಪ್ರಿಲ್ 7, 2020
19 °C
ವಿಧಾನಸೌಧದಲ್ಲಿ ಸಮಾರಂಭ: ಬ್ಯಾಂಕ್‌ನ ಸಾಧನೆ ದಾಖಲು

ಡಿಸಿಸಿ ಬ್ಯಾಂಕ್: 18ಕ್ಕೆ ಸಾಕ್ಷ್ಯಚಿತ್ರ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಸಹಕಾರಿ ಸಂಸ್ಥೆಗಳಲ್ಲೇ ಮಾದರಿ ಬ್ಯಾಂಕ್‌ ಆಗಿರುವ ಕೋಲಾರ ಡಿಸಿಸಿ ಬ್ಯಾಂಕ್‌ ಕುರಿತು ನಬಾರ್ಡ್ ತಯಾರಿಸಿರುವ ಸಾಕ್ಷ್ಯಚಿತ್ರವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿಧಾನಸೌಧದಲ್ಲಿ ಮಾರ್ಚ್‌ 18ರಂದು ನಡೆಯುವ ರಾಜ್ಯ ಸಾಲ ಸಮ್ಮೇಳನದಲ್ಲಿ ಬಿಡುಗಡೆ ಮಾಡುತ್ತಾರೆ’ ಎಂದು ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ತಿಳಿಸಿದರು.

ಇಲ್ಲಿ ಮಂಗಳವಾರ ನಡೆದ ಪ್ರಸಕ್ತ ಹಣಕಾಸು ಆರ್ಥಿಕ ವರ್ಷದ ಕಡೆಯ ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಹಾಗೂ ಪರಿಶೀಲನಾ ಸಮಿತಿ ಸಭೆಯಲ್ಲಿ ಮಾತನಾಡಿ, ‘ಸಾಕ್ಷ್ಯಚಿತ್ರದಲ್ಲಿ ಬ್ಯಾಂಕ್‌ನ ಸಾಧನೆಯನ್ನು ದಾಖಲಿಸಲಾಗಿದೆ’ ಎಂದು ವಿವರಿಸಿದರು.

‘ನಾಲ್ಕೈದು ವರ್ಷಗಳ ಹಿಂದೆ ಬ್ಯಾಂಕ್‌ನ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಇಳಿದಿತ್ತು. ಅತಿ ಹೆಚ್ಚು ಖಾತೆಗಳು ವಸೂಲಾಗದ ಸಾಲಕ್ಕೆ (ಎನ್‌ಪಿಎ) ಒಳಗಾಗಿ ರಾಜ್ಯದಲ್ಲಿ ಅತ್ಯಂತ ಹೀನಾಯ ಬ್ಯಾಂಕ್ ಎಂಬ ಅಪಖ್ಯಾತಿಗೆ ಒಳಗಾಗಿತ್ತು. ಇದೀಗೆ ರಾಜ್ಯದಲ್ಲೇ ಮಾದರಿ ಡಿಸಿಸಿ ಬ್ಯಾಂಕ್ ಎಂಬ ಹೆಗ್ಗಳಿಗೆ ಪಾತ್ರವಾಗಿದೆ. ಈ ಸಾಧನೆಯ ಕೀರ್ತಿ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಸಲ್ಲುತ್ತದೆ’ ಎಂದರು.

‘ಬ್ಯಾಂಕ್‌ನ ಆರ್ಥಿಕ ಪರಿಸ್ಥಿತಿ ಕುಸಿದಾಗ ನಬಾರ್ಡ್ ಮತ್ತು ಅಪೆಕ್ಸ್ ಬ್ಯಾಂಕ್‌ಗಳು ವಿಶ್ವಾಸವಿಟ್ಟು ನೆರವು ನೀಡಿದ್ದರಿಂದ ಪ್ರಗತಿ ಸಾಧಿಸಲು ಸಾಧ್ಯವಾಯಿತು. ಬ್ಯಾಂಕ್‌ ಸುಮಾರು 4 ಲಕ್ಷ ಕುಟುಂಬಗಳ ಮಹಿಳೆಯರಿಗೆ ಸಾಲ ನೀಡಿ ಸಬಲೀಕರಣಕ್ಕೆ ಆದ್ಯತೆ ನೀಡಿದೆ. ಪಾರದರ್ಶಕ ಆಡಳಿತಕ್ಕಾಗಿ ಎಲ್ಲಾ ಸೊಸೈಟಿಗಳ ಗಣಕೀಕರಣಕ್ಕೆ ಒತ್ತು ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ಸೊಸೈಟಿಗಳ ಲೆಕ್ಕದ ವಿವರಗಳ ದಾಖಲಾತಿ ಪುಸ್ತಕಗಳು ಕ್ರಮಬದ್ಧವಾಗಿರಬೇಕು. ಎಲ್ಲಾ ಸೂಸೈಟಿಗಳ ಲೆಕ್ಕ ಪರಿಶೋಧನಾ ವರದಿಗಳನ್ನು ನಿಗದಿತ ಅವಧಿಯೊಳಗೆ ಸಲ್ಲಿಸಬೇಕು. ಇದರಿಂದ ಸಾರ್ವಜನಿಕರ ವಿಶ್ವಾಸ ಗಳಿಸಬಹುದು’ ಎಂದು ಸಲಹೆ ನೀಡಿದರು.

ರಾಜ್ಯಕ್ಕೆ ಮಾದರಿ: ‘ದಿವಾಳಿಯಾಗಿದ್ದ ಡಿಸಿಸಿ ಬ್ಯಾಂಕನ್ನು ಪುನಶ್ಚೇತನಗೊಳಿಸಿ, ಮಹಿಳೆಯರ ಸಬಲೀಕರಣಕ್ಕಾಗಿ ಸಹಕಾರ ಕ್ಷೇತ್ರದಲ್ಲಿ ಅತಿ ಹೆಚ್ಚು ಸಾಲ ವಿತರಿಸಲಾಗಿದೆ. ಬ್ಯಾಂಕ್‌ ಸಾಲ ವಸೂಲಾತಿಯಲ್ಲೂ ಹೆಚ್ಚಿನ ಸಾಧನೆ ಮಾಡಿ ರಾಜ್ಯಕ್ಕೆ ಮಾದರಿಯಾಗಿದೆ’ ಎಂದು ನಬಾರ್ಡ್ ಬ್ಯಾಂಕ್ ಸಹಾಯಕ ಪ್ರಧಾನ ವ್ಯವಸ್ಥಾಪಕ (ಎಜಿಎಂ) ನಟರಾಜನ್ ಮೆಚ್ಚುಗೆ ವ್ಯಕ್ತಪಡಿಸಿದರು.

‘ಡಿಸಿಸಿ ಬ್ಯಾಂಕ್ ಬಿಆರ್ ಕಾಯ್ದೆ ಕಲಂ 11(1) ಪಾಲನೆ ಮಾಡುವಲ್ಲಿ ಯಶಸ್ವಿಯಾಗಿದೆ. ಶೇ 63ರಷ್ಟಿದ್ದ ಬ್ಯಾಂಕ್‌ನ ವಸೂಲಾಗದ ಸಾಲವನ್ನು (ಎನ್‌ಪಿಎ) ಶೇ 3.20ಕ್ಕೆ ಇಳಿಸಿ ಶೇ 96ರಷ್ಟು ನಷ್ಟ ತುಂಬಿರುವುದು ದೊಡ್ಡ ಸಾಧನೆ. ಬ್ಯಾಂಕ್‌ ಕೃಷಿ ಕ್ಷೇತ್ರಕ್ಕೆ ₹ 345 ಕೋಟಿ, ಕೃಷಿಯೇತರ ಕ್ಷೇತ್ರಗಳಿಗೆ ₹ 370 ಕೋಟಿ ಸಾಲ ವಿತರಿಸಿದೆ. ಸಾಲ ವಸೂಲಾತಿಯಲ್ಲಿ ಶೇ 94ರಷ್ಟು ಸಾಧನೆ ಮಾಡಿದೆ’ ಎಂದು ಶ್ಲಾಘಿಸಿದರು.

ಕ್ರಮಬದ್ಧ ವರದಿ: ‘ಮಹಿಳಾ ಸ್ವಸಹಾಯ ಗುಂಪುಗಳು ಪ್ರತಿ ವಾರ ನಡೆಸುವ ಸಭೆಯ ನಡಾವಳಿಯನ್ನು ದಾಖಲೆಪುಸ್ತಕದಲ್ಲಿ ಮತ್ತು ಬಿಲ್‌ನಲ್ಲಿ ದಾಖಲಿಸಬೇಕು. ಸಭೆಯ ನಿರ್ಣಯ, ಪಡೆದ ಸಾಲ ಮತ್ತು ಮರುಪಾವತಿ ವಿವರ ಹಾಗೂ ಪ್ರಗತಿಯ ಸಾಧನೆಗಳನ್ನು ದಾಖಲೆಪುಸ್ತಕ ಒಳಗೊಂಡಿರಬೇಕು. ಸೊಸೈಟಿಗಳ ಲೆಕ್ಕಪರಿಶೋಧನಾ ವರದಿಗಳು ಕ್ರಮಬದ್ಧವಾಗಿರಬೇಕು’ ಎಂದು ಸೂಚಿಸಿದರು.

ಬ್ಯಾಂಕ್‌ನ ಉಪಾಧ್ಯಕ್ಷ ನಾಗರಾಜ್, ವ್ಯವಸ್ಥಾಪಕ ನಿರ್ದೇಶಕ ರವಿ, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಶಿವಕುಮಾರ್, ನಾಗೇಶ್ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು