ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತ ಯೋಧರಿಗೆ ಡಿಡಿಪಿಐ ಅಭಿನಂದನೆ

Last Updated 6 ಮಾರ್ಚ್ 2019, 10:00 IST
ಅಕ್ಷರ ಗಾತ್ರ

ಕೋಲಾರ: ನಿವೃತ್ತ ಯೋಧರಾದ ಎಸ್.ಜಿ.ಸುರೇಶ್‌ ಮತ್ತು ಚನ್ನಕೇಶ ಅವರನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ (ಡಿಡಿಪಿಐ) ಕೆ.ರತ್ನಯ್ಯ ಇಲ್ಲಿ ಮಂಗಳವಾರ ಅಭಿನಂದಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಚನ್ನಕೇಶವ ಮತ್ತು ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಶೆಟ್ಟಿಹಳ್ಳಿ ಗ್ರಾಮದ ಸುರೇಶ್‌ಗೌಡ ಅವರು ಸೇನೆಯಲ್ಲಿ ಒಟ್ಟಾಗಿ ಸೇವೆ ಸಲ್ಲಿಸುತ್ತಿದ್ದರು.

ಇಲ್ಲಿ ಈ ಇಬ್ಬರನ್ನೂ ಮಂಗಳವಾರ ಸನ್ಮಾನಿಸಿದ ಡಿಡಿಪಿಐ, ‘ದೇಶ ಕಾಯುವ ಯೋಧರ ತ್ಯಾಗ, ದೇಶ ಪ್ರೇಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಸೈನಿಕರು ಹಗಲು ರಾತ್ರಿ, ಬಿಸಿಲು, ಚಳಿ, ಮಳೆ ಲೆಕ್ಕಿಸದೆ ದೇಶ ಕಾಯುತ್ತಿರುವುದರಿಂದ ನಾವೆಲ್ಲಾ ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದನಾ ದಾಳಿ ಹೇಯ ಕೃತ್ಯ. ಇಂತಹ ದಾಳಿ ನಡೆಸುವ ಉಗ್ರರಿಗೆ ಯೋಧರು ತಕ್ಕ ಉತ್ತರ ನೀಡುವ ಮೂಲಕ ದೇಶದ ಗೌರವ ಕಾಪಾಡಿದ್ದಾರೆ. ಸೈನಿಕರು ಸ್ವಾಭಿಮಾನಿಗಳಾಗಿದ್ದು, ಅವರಿಗೆ ದ್ವೇಷ, ಅಸೂಯೆ, ಜಾತಿ ಭೇದ ಭಾವವಿಲ್ಲ. ಕುಟುಂಬ ಸದಸ್ಯರಿಂದ ದೂರವಾಗಿ ಪ್ರಾಣದ ಹಂಗು ತೊರೆದು ಗಡಿ ಕಾಯುವ ಅವರ ಸೇವೆಯನ್ನು ಸ್ಮರಿಸಬೇಕು’ ಎಂದರು.

‘ದೇಶ ರಕ್ಷಣೆ ಕಾರ್ಯದಲ್ಲಿ ನಿರತರಾಗಿರುವ ಸೈನಿಕರು ಮತ್ತು ಪೊಲೀಸರನ್ನು ಗೌರವಿಸಬೇಕು. ಮಾನವ ಜೀವಕ್ಕೆ ಹಾಗೂ ಮೌಲ್ಯಗಳಿಗೆ ಬೆದರಿಕೆಯೊಡ್ಡುತ್ತಿರುವ ಸಮಾಜಘಾತುಕ ಶಕ್ತಿಗಳ ವಿರುದ್ಧ ಹೋರಾಡುವ ದೃಢ ಸಂಕಲ್ಪ ಮಾಡಬೇಕು. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡಬೇಕು’ ಎಂದು ಕಿವಿಮಾತು ಹೇಳಿದರು.

‘ಗಡಿ ಕಾಯುವಾಗ ನಮಗೆ ದೇಶ ಮುಖ್ಯವೆನಿಸುತ್ತದೆ. ಜೀವದ ಹಂಗು ನಮ್ಮನ್ನು ಕಾಡುವುದೇ ಇಲ್ಲ. ಜಮ್ಮು ಮತ್ತು ಕಾಶ್ಮೀರ, ಪಂಜಾಬ್‌ನಲ್ಲಿ ನಾನು ಕಾರ್ಯ ನಿರ್ವಹಿಸಿದ್ದು, ಹಲವು ಬಾರಿ ಕ್ಲಿಷ್ಟಕರ ಸಂದರ್ಭ ಎದುರಿಸಿದ್ದೇನೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರಬೇಕು’ ಎಂದು ಸುರೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT