ಶುಕ್ರವಾರ, ಆಗಸ್ಟ್ 19, 2022
21 °C
ತಹಶೀಲ್ದಾರ್‌ ಸೇರಿದಂತೆ ನಾಲ್ವರ ವಿರುದ್ಧ ದೂರು

ಜೀವಂತವಾಗಿದ್ದಾಗಲೇ ಮರಣ ಪ್ರಮಾಣ ಪತ್ರ! ಮುಳಬಾಗಿಲು ನಗರ ಠಾಣೆಯಲ್ಲಿ ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಳಬಾಗಿಲು: ಜಮೀನು ಕಬಳಿಸುವ ಉದ್ದೇಶದಿಂದ ವ್ಯಕ್ತಿ ಜೀವಂತವಾಗಿರುವಾಗಲೇ ಆತನ ಹೆಸರಿನಲ್ಲಿ ಅಕ್ರಮವಾಗಿ ಮರಣ ಪ್ರಮಾಣ ಪತ್ರ ಸೃಷ್ಟಿಸಿದ ಪ್ರಕರಣದಲ್ಲಿ ತಹಶೀಲ್ದಾರ್ ಸೇರಿದಂತೆ ನಾಲ್ವರು ಕಂದಾಯ ಸಿಬ್ಬಂದಿ ವಿರುದ್ಧ ಮುಳಬಾಗಿಲು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಳಬಾಗಿಲು ಜೆಎಂಎಫ್‌ಸಿ ನ್ಯಾಯಾಲಯದ ಆದೇಶದಂತೆ ಹಿಂದಿನ ತಹಶೀಲ್ದಾರ್ ಕೆ.ಎನ್.ರಾಜಶೇಖರ್, ಗ್ರಾಮಲೆಕ್ಕಿಗ ಕೆ.ಎನ್.ಅರವಿಂದ್ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. 

ತಾಲ್ಲೂಕಿನ ಕಸಬಾ ಹೋಬಳಿ ಎಂ.ಹೊಸಹಳ್ಳಿ ಗ್ರಾಮದ ವಿ.ಶಿವರಾಜ್ (40) ಎಂಬುವರು 2021ರ ಜುಲೈ 5ರಂದು ಮರಣ ಹೊಂದಿದ್ದಾರೆ ಎಂದು ಜುಲೈ 13ರಂದು ಕಾನೂನು ಬಾಹಿರವಾಗಿ ಮರಣ ಪ್ರಮಾಣ ಪತ್ರ ಸೃಷ್ಟಿಸಲಾಗಿದೆ.

’ನಾನಿನ್ನೂ ಬದುಕಿರುವಾಗಲೇ ನನ್ನ ಹೆಸರಿನಲ್ಲಿ ಮರಣ ಪ್ರಮಾಣಪತ್ರ ಸೃಷ್ಟಿಸಲಾಗಿದೆ. ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಕ್ರಮ ತೆಗೆದುಕೊಳ್ಳಬೇಕು ನನಗೆ ನ್ಯಾಯದೊರಕಿಸಿ ಕೊಡಬೇಕು‘ ಎಂದು ಒತ್ತಾಯಿಸಿ ಶಿವರಾಜ್‌ ಕಂದಾಯ ಇಲಾಖೆ, ಲೋಕಾಯುಕ್ತ, ಎಸಿಬಿಗೆ ಮೊರೆ ಹೋಗಿದ್ದರು.

ಅಲ್ಲಿ ನ್ಯಾಯ ಸಿಗಲಿಲ್ಲ ಎಂದು ಕೊನೆಗೆ ನ್ಯಾಯಾಲಯಕ್ಕೆ ಮೊರೆ ಹೋದ ಶಿವರಾಜ್‌, ಖಾಸಗಿ ದೂರು ದಾಖಲಿಸಿದ್ದರು.

ಈ ಸಂಬಂಧ ವಿಚಾರಣೆ ನಡೆಸಿದ ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಜಿ ಹುಸೇನ್ ಸಾಬ್‌ ಯಾದವಾಡ ಅವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲು ಮಾಡಲು ಆದೇಶಿಸಿದ್ದಾರೆ.

ಹಿಂದಿನ ತಹಶೀಲ್ದಾರ್ ಕೆ.ಎನ್.ರಾಜಶೇಖರ್‌,ಉಪ ತಹಶೀಲ್ದಾರ್ ಕೆ.ಎಲ್.ಜಯರಾಮ್, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷರೂ ಆಗಿರುವ ಗ್ರಾಮಲೆಕ್ಕಿಗ ಕೆ.ಎನ್.ಅರವಿಂದ್, ಕಂದಾಯ ನಿರೀಕ್ಷಕ ಸಾದತ್ ಉಲ್ಲಾಖಾನ್ ವಿರುದ್ಧ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಎಂ.ಹೊಸಹಳ್ಳಿ ಗ್ರಾಮದ ರೈತ ಶಿವರಾಜ್ ಬದುಕಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ಮರಣ ಪ್ರಮಾಣಪತ್ರ ವಿತರಣೆ ಮಾಡಿರುವ ಸಂಬಂಧ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ನ್ಯಾಯಾಲಯದ ಆದೇಶದಂತೆ ನಾಲ್ಕು ಮಂದಿ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದು ತನಿಖೆ ಮಾಡಲಾಗುತ್ತದೆ’ ಎಂದು ನಗರಠಾಣೆ ಪಿಎಸ್ಐ ಸೀತಪ್ಪ ತಿಳಿಸಿದರು.

ಏನಿದು ವಿವಾದ?

ತಂದೆಯಿಂದ ತನಗೆ ಬಳುವಳಿಯಾಗಿ ಬಂದಿದ್ದ ಜಮೀನು ಕಬಳಿಸಲು ತಹಶೀಲ್ದಾರ್‌ ಕಚೇರಿ ಸಿಬ್ಬಂದಿಯೊಬ್ಬರ ನೇತೃತ್ವದಲ್ಲಿ ನಡೆದ ಷಡ್ಯಂತ್ರದ ಭಾಗವೇ ಮರಣ ಪ್ರಮಾಣ ಪತ್ರ ಎಂದು ಶಿವರಾಜ್‌ ದೂರಿನಲ್ಲಿ ತಿಳಿಸಿದ್ದಾರೆ.

ಮುಳಬಾಗಿಲು ತಹಶಿಲ್ದಾರ್‌ ಕಚೇರಿಯ ಸಿಬ್ಬಂದಿಯೂ ಈ ಷಡ್ಯಂತ್ರದಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದರು. 

ಪಡಿತರ ಚೀಟಿ ಸೇರಿದಂತೆ ಇನ್ನಿತರ ಸರ್ಕಾರಿ ದಾಖಲೆಗಳಲ್ಲೂ ಶಿವರಾಜ್‌ ಮೃತರಾಗಿದ್ದಾರೆ ಎಂದು ಆರೋಪಿಗಳು ತಿದ್ದುಪಡಿ ಮಾಡಿದ್ದರು ಎಂದು ದೂರಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.