ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ವಿತರಣೆ: ತಾರತಮ್ಯ ಮಾಡಿಲ್ಲ

ವಾಸ್ತವಾಂಶ ಅರಿತು ಮಾತನಾಡಲಿ: ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಗುಡುಗು
Last Updated 7 ಸೆಪ್ಟೆಂಬರ್ 2021, 13:09 IST
ಅಕ್ಷರ ಗಾತ್ರ

ಕೋಲಾರ: ‘ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ರೈತರು, ಹೆಣ್ಣು ಮಕ್ಕಳಿಗೆ ಒಂದೇ ಸಮನಾಗಿ ಸಾಲ ವಿತರಿಸಲಾಗಿದೆ. ಸಾಲ ನೀಡಿಕೆಯಲ್ಲಿ ತಾರತಮ್ಯದ ಆರೋಪ ಮಾಡುತ್ತಿರುವ ಕೆಲವರು ಕೇಂದ್ರ ಕಚೇರಿಗೆ ಬಂದು ಪರಿಶೀಲಿಸಿ ವಾಸ್ತವಾಂಶ ಅರಿತು ಮಾತನಾಡಲಿ’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಗುಡುಗಿದರು.

ಇಲ್ಲಿ ಮಂಗಳವಾರ ಸ್ತ್ರೀಶಕ್ತಿ ಸಂಘಗಳ ಸದಸ್ಯರಿಗೆ ₹ 58 ಲಕ್ಷ ಸಾಲ ವಿತರಿಸಿ ಮಾತನಾಡಿ, ‘ದಿವಾಳಿಯಾಗಿ ರೈತರು, ಮಹಿಳೆಯರು ವಿವಿಧ ಸಾಲ ಯೋಜನೆಗಳಿಂದ ವಂಚಿತರಾಗಿದ್ದ ಸಂದರ್ಭದಲ್ಲಿ ಕಷ್ಟಪಟ್ಟು ಬ್ಯಾಂಕ್ ಬೆಳೆಸಿದ್ದೇವೆ’ ಎಂದು ಹೇಳಿದರು.

‘ಒಂದು ಸಂಸ್ಥೆ ವಿರುದ್ಧ ಸುಳ್ಳು ಆರೋಪ ಮಾಡಿ ಕೆಟ್ಟ ಹೆಸರು ತರುವ ಪ್ರಯತ್ನ ಬೇಡ. ಬ್ಯಾಂಕ್ ವಿರುದ್ಧ ರಾಜಕೀಯ ಪ್ರೇರಿತವಾಗಿ ಆರೋಪ ಮಾಡಿ ಸಂಸ್ಥೆ ಹಾಳಾದರೆ ಅದು ಎರಡೂ ಜಿಲ್ಲೆಯ ರೈತರು, ಮಹಿಳೆಯರಿಗೆ ಮಾಡಿದ ದ್ರೋಹ. ಬ್ಯಾಂಕ್‌ನ ಬೆಳವಣಿಗೆ ಸಹಿಸದ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಬ್ಯಾಂಕ್‌ನ ಬೆಳವಣಿಗೆಗೆ ತಮ್ಮ ಕೊಡುಗೆ ಎನೆಂದು ಅವರು ಆತ್ಮವಿಮರ್ಶೆ ಮಾಡಿಕೊಳ್ಳಲಿ’ ಎಂದರು.

‘ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ಸಮನಾಗಿ ₹ 1,200 ಕೋಟಿ ನೀಡಿದ್ದೇವೆ. ಬ್ಯಾಂಕ್‌ನಲ್ಲಿ ತಪ್ಪುಗಳು ಆಗಿದ್ದರೆ ನೇರವಾಗಿ ಬಂದು ಹೇಳಿದರೆ ಸರಿಪಡಿಸಿಕೊಳ್ಳುತ್ತೇವೆ. ವ್ಯವಸ್ಥೆಯಲ್ಲಿ ದಿನನಿತ್ಯದ ಜೀವನಕ್ಕಾಗಿ ಕೂಲಿ ಮಾಡುವ ಜನರಿಗೆ ದ್ರೋಹ ಬಗೆದರೆ ನಾವು ಸಮಾಜದಲ್ಲಿ ಬದಕಲು ಸಾಧ್ಯವಿಲ್ಲ. ಸಮಾಜವನ್ನು ಸರಿದಾರಿಯಲ್ಲಿ ತೆಗೆದುಕೊಂಡು ಹೋಗಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.

‘ಬ್ಯಾಂಕ್‌ನ ಏಳಿಗೆಗೆ ಕಾರಣವಾದ ಮಹಿಳೆಯರೇ ಬ್ಯಾಂಕ್ ವಿರುದ್ಧ ಅಪಪ್ರಚಾರ ಮಾಡುವವರಿಗೆ ತಕ್ಕ ಪಾಠ ಕಲಿಸಬೇಕು. ಮುಂದೆ ಇದೇ ರೀತಿ ಬ್ಯಾಂಕ್‌ನ ಪರವಾಗಿ ನಿಲ್ಲುವುದರ ಜತೆಗೆ ಬ್ಯಾಂಕ್ ಬೆಳವಣಿಗೆಗೆ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

ಬುದ್ಧಿ ಕಲಿಸಬೇಕು: ‘ಬ್ಯಾಂಕ್ ವ್ಯವಸ್ಥೆಯನ್ನು ಅಭದ್ರಗೊಳಿಸಲು ಕೆಲ ರಾಜಕೀಯ ವ್ಯಕ್ತಿಗಳು ಹುನ್ನಾರ ನಡೆಸುತ್ತಿದ್ದಾರೆ. ಮಹಿಳೆಯರು ನಮ್ಮ ಜತೆ ನಿಲ್ಲುವ ಮೂಲಕ ಬ್ಯಾಂಕ್‌ ಬಗ್ಗೆ ಅಪಪ್ರಚಾರ ನಡೆಸುತ್ತಿರುವ ವ್ಯಕ್ತಿಗಳಿಗೆ ಬುದ್ಧಿ ಕಲಿಸಬೇಕು’ ಎಂದು ಬ್ಯಾಂಕ್ ನಿರ್ದೇಶಕ ಅನಿಲ್‌ಕುಮಾರ್ ಕೋರಿದರು.

‘ಡಿಸಿಸಿ ಬ್ಯಾಂಕ್ ಹೊರತುಪಡಿಸಿ ಬೇರೆ ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ಜಮೀನಿನ ದಾಖಲೆಪತ್ರಗಳ ಭದ್ರತೆ ನೀಡಬೇಕು. ನಮ್ಮ ಬ್ಯಾಂಕ್‌ನಲ್ಲಿ ಯಾವುದೇ ಭದ್ರತೆ ಇಲ್ಲದೆ ಸಾಲ ನೀಡುತ್ತಿದ್ದೇವೆ. ಹೆಣ್ಣು ಮಕ್ಕಳು ಸ್ವಯಂ ಪ್ರೇರಿತವಾಗಿ ಉದ್ಯಮ ಸ್ಥಾಪಿಸಲು ಬ್ಯಾಂಕ್‌ನ ಸೌಲಭ್ಯ ಪಡೆಯಬಹುದು’ ಎಂದು ಬ್ಯಾಂಕ್‌ನ ನಿರ್ದೇಶಕ ಸೋಮಣ್ಣ ಹೇಳಿದರು.

‘ಸಹಕಾರ ಸಂಸ್ಥೆಗಳು ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯ ನೀಡುವ ಮೂಲಕ ಸ್ವಾವಲಂಬಿ ಬದುಕಿಗೆ ನೆರವಾಗುತ್ತಿವೆ. ಸಣ್ಣ ವ್ಯಾಪಾರ ಮಾಡಲು, ಗ್ರಾಮೀಣ ಪ್ರದೇಶದಲ್ಲಿ ಹಸು ಸಾಕಲು ಅವಶ್ಯಕತೆಗೆ ಅನುಗುಣವಾಗಿ ಉದ್ಯಮ ಸ್ಥಾಪಿಸಲು ಸಾಲ ನೀಡಲಾಗುತ್ತದೆ’ ಎಂದು ಬ್ಯಾಂಕ್‌ನ ನಿರ್ದೇಶಕ ಸೊಣ್ಣೇಗೌಡ ವಿವರಿಸಿದರು.

ಬ್ಯಾಂಕ್‌ನ ಕೋಲಾರ ಶಾಖೆ ವ್ಯವಸ್ಥಾಪಕ ಅಂಬರೀಶ್, ಸಿಬ್ಬಂದಿ ಅಮೀನಾ, ಗೋಪಾಲಕೃಷ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT