ಬುಧವಾರ, ಜೂನ್ 16, 2021
28 °C
ಮಡೇರಹಳ್ಳಿ ಬಳಿಯ ಅರಣ್ಯ ಇಲಾಖೆ ಭೂಮಿ: ಸಭೆಯಲ್ಲಿ ಚರ್ಚೆ

ಎಪಿಎಂಸಿಗೆ ಜಮೀನು ಪಡೆಯಲು ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಜಿಲ್ಲಾ ಕೇಂದ್ರದ ಎಪಿಎಂಸಿಗೆ ತಾಲ್ಲೂಕಿನ ಮಡೇರಹಳ್ಳಿ ಬಳಿ ಅರಣ್ಯ ಇಲಾಖೆಯ 35 ಎಕರೆ ಜಮೀನು ಮಂಜೂರಾತಿಗೆ ತುರ್ತಾಗಿ ಅನುಮೋದನೆ ಪಡೆಯಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಎಪಿಎಂಸಿಯಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಸಂಬಂಧ ಇಲ್ಲಿ ಬುಧವಾರ ನಡೆದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭೆಯಲ್ಲಿ ಮಾತನಾಡಿದ ಎಪಿಎಂಸಿ ಅಧ್ಯಕ್ಷ ಕೆ.ಮಂಜುನಾಥ್‌, ‘ಎಪಿಎಂಸಿಗೆ ಮಡೇರಹಳ್ಳಿ ಬಳಿ ಹೆಚ್ಚುವರಿ ಜಮೀನು ಪಡೆಯಲು ಕೃಷಿ ಮಾರಾಟ ಇಲಾಖೆ ನಿರ್ದೇಶಕರು ಒಪ್ಪಿಗೆ ನೀಡಿದ್ದಾರೆ’ ಎಂದು ಹೇಳಿದರು.

‘ಅರಣ್ಯ ಇಲಾಖೆಯಿಂದ ಜಮೀನು ಮಂಜೂರಾತಿಗೆ ಅನುಮೋದನೆ ಪಡೆಯಬೇಕು. 6 ತಿಂಗಳೊಳಗೆ ₹ 12 ಕೋಟಿ ವೆಚ್ಚದಲ್ಲಿ ಮಾರುಕಟ್ಟೆ ಅಭಿವೃದ್ಧಿಪಡಿಸಬೇಕು. ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಖಾಲಿ ಜಾಗ ಲಭ್ಯವಿದ್ದು, 30 ಎಕರೆ ಜಮೀನನ್ನು ತಾತ್ಕಾಲಿಕ ವ್ಯವಸ್ಥೆಗಾಗಿ ಅನುಮೋದನೆ ಕೊಡಿಸುವಂತೆ ನಿರ್ದೇಶಕರನ್ನು ಕೋರಬೇಕು’ ಎಂದು ತಿಳಿಸಿದರು.

‘ತಾಲ್ಲೂಕಿನ ಹೊಳಲಿ ಬಳಿಯ 50 ಎಕರೆ ಜಮೀನಿಗೆ ತಾತ್ಕಾಲಿಕವಾಗಿ ಟೊಮೊಟೊ ಮಾರುಕಟ್ಟೆ ಸ್ಥಳಾಂತರಿಸುವಂತೆ ಜಿಲ್ಲಾಧಿಕಾರಿ ಮೌಖಿಕ ಆದೇಶ ನೀಡಿದ್ದಾರೆ. ಮಾರುಕಟ್ಟೆ ಪ್ರಾಂಗಣದ ಮುಂಭಾಗ ಇರುವ ಸರ್ವಿಸ್‌ ರಸ್ತೆಯನ್ನು ಎಪಿಎಂಸಿ ಕಾಂಪೌಂಡ್‌ವರೆಗೆ ₹ 50 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ.  ಸರ್ವಿಸ್‌ ರಸ್ತೆ ಅಭಿವೃದ್ಧಿಯಿಂದ ವಾಹನ ಸಂಚಾರಕ್ಕೆ ಅನುಕೂಲವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಬೆಳೆ ಹೆಚ್ಚಳ: ‘ಜಿಲ್ಲೆಗೆ ಕೆ.ಸಿ ವ್ಯಾಲಿ ಯೋಜನೆ ನೀರು ಬಂದಿರುವುದರಿಂದ ಟೊಮೆಟೊ ಬೆಳೆ ವಿಸ್ತೀರ್ಣ ಹೆಚ್ಚಾಗಿದೆ. ಹೀಗಾಗಿ ಕಳೆದ ವರ್ಷಕ್ಕಿಂತ ಈ ಬಾರಿ 2 ಪಟ್ಟು ಟೊಮೊಟೊ ಆವಕವಾಗುವ ನಿರೀಕ್ಷೆಯಿದ್ದು, ವಾಹನ ದಟ್ಟಣೆ ಉಂಟಾಗಲಿದೆ. ಮಾಲೂರು ರಸ್ತೆ ಕಡೆಯಿಂದ ಬರುವ ವಾಹನಗಳು ವಿಜಯನಗರ ಮಾರ್ಗವಾಗಿ ಸಾಗಿ ಪವನ್ ಕಾಲೇಜು ಸಮೀಪ ನಗರ ಪ್ರವೇಶಿಸಬೇಕು’ ಎಂದು ಸೂಚಿಸಿದರು.

‘ಮಾರುಕಟ್ಟೆ ವಿಸ್ತೀರ್ಣ ಕೇವಲ 18 ಎಕರೆಯಿದ್ದು, ಟೊಮೊಟೊ ಸುಗ್ಗಿ ಆರಂಭವಾಗಿರುವುದರಿಂದ ಅಂತರ ಪಾಲನೆಗೆ ಸಮಸ್ಯೆ ಆಗುತ್ತಿದೆ. ಎಪಿಎಂಸಿಯಲ್ಲಿ ಸ್ಥಳಾವಕಾಶ ಕೊರತೆ ಕಾರಣಕ್ಕೆ ಕೆಲವರು ಮಾರುಕಟ್ಟೆ ಹೊರಗೆ ಟೊಮೊಟೊ ಇಳಿಸಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. 2 ಕಡೆ ಟೊಮೆಟೊ ವಹಿವಾಟು ನಡೆದರೆ ಧಾರಣೆಯಲ್ಲಿ ವ್ಯತ್ಯಾಸವಾಗುತ್ತದೆ. ಆದ ಕಾರಣ ಒಂದೆಡೆ ಟೊಮೊಟೊ ವಹಿವಾಟು ನಡೆಸಬೇಕು’ ಎಂದರು.

‘ದೊಡ್ಡ ಮಟ್ಟದ ವಹಿವಾಟನ್ನು ತಾತ್ಕಾಲಿಕವಾಗಿ ಬೇರೆಡೆಗೆ ಸ್ಥಳಾಂತರಿಸುವುದು ಅಸಾಧ್ಯ. ಮಳೆಗಾಲ ಇರುವುದರಿಂದ ಟ್ರಕ್‌ಗಳ ಓಡಾಟಕ್ಕೆ ತೊಂದರೆಯಾಗುತ್ತದೆ. ಆದ್ದರಿಂದ ಮಾರುಕಟ್ಟೆ ಒಳಗಿನ ದಲ್ಲಾಳಿ ಮಂಡಿಗಳವರು ಅವರಿಗೆ ಇರುವ ಸ್ಥಳಾವಕಾಶದಲ್ಲಿ ಮಾತ್ರ ರೈತರಿಂದ ಟೊಮೊಟೊ ತರಿಸಿಕೊಳ್ಳಬೇಕು. ಹೆಚ್ಚುವರಿ ಟೊಮೊಟೊ ಬರುವ ನಿರೀಕ್ಷೆಯಿದ್ದರೆ ಸೂಕ್ತ ಸ್ಥಳಾವಕಾಶದ ವ್ಯವಸ್ಥೆಯನ್ನು ಮಂಡಿಯವರೇ ಮಾಡಿಕೊಳ್ಳಬೇಕು’ ಎಂದು ಸೂಚಿಸಿದರು.

ಏಕಮುಖ ಸಂಚಾರ: ‘ಎಪಿಎಂಸಿ ಮುಂಭಾಗದ ಸರ್ವಿಸ್‌ ರಸ್ತೆಯನ್ನು ಸಂಪೂರ್ಣವಾಗಿ ಏಕಮುಖ ಸಂಚಾರದ ರಸ್ತೆಯಾಗಿ ಮಾಡಿ ಬೆಂಗಳೂರು ಕಡೆಗೆ ಹೋಗುವ ವಾಹನಗಳನ್ನು ಮೇಲ್ಸೇತುವೆ ಮೂಲಕ ಹೋಗುವಂತೆ ಕ್ರಮ ಕೈಗೊಳ್ಳಬೇಕು. ಟೊಮೊಟೊ ಮತ್ತು ತರಕಾರಿ ತ್ಯಾಜ್ಯ ನಿರ್ವಹಣೆ ಘಟಕ ಸ್ಥಾಪನೆಗೆ 2 ಸಂಸ್ಥೆಗಳು ಮುಂದೆ ಬಂದಿದ್ದು, ಕೇಂದ್ರ ಕಚೇರಿಯಿಂದ ಈ ಸಂಸ್ಥೆಗಳೊಂದಿಗೆ ಸಭೆ ನಡೆಸಬೇಕು’ ಎಂದರು.

ಟೊಮೊಟೊ, ತರಕಾರಿ ಮಾರಾಟಕ್ಕೆ ತೊಂದರೆಯಾಗದಂತೆ ಹಮಾಲರು, ವರ್ತಕರಿಗೆ ಪಾಸ್ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಎಪಿಎಂಸಿ ಉಪಾಧ್ಯಕ್ಷ ಎಲ್.ವೆಂಕಟೇಶಪ್ಪ, ನಿರ್ದೇಶಕರಾದ ಸಿ.ಎಂ.ಮಂಜುನಾಥ್‌, ಸಿ.ಎನ್.ರವಿಕುಮಾರ್, ಎ.ಎನ್.ಆರ್.ದೇವರಾಜ್, ನಾರಾಯಣಸ್ವಾಮಿ, ಕೆ.ರವಿಶಂಕರ್, ಭಾಗ್ಯಮ್ಮ, ಆರ್.ಚಂದ್ರೇಗೌಡ, ಎಸ್.ವಿ.ವೆಂಕಟಾಚಲಪತಿ, ಕಾರ್ಯದರ್ಶಿ ಟಿ.ಎಸ್.ರವಿಕುಮಾರ್ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.