ಗುರುವಾರ , ಫೆಬ್ರವರಿ 27, 2020
19 °C

ಸಕಾಲಕ್ಕೆ ಸರ್ಕಾರದ ಸೌಲಭ್ಯ ತಲುಪಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಅಂಚೆ ಇಲಾಖೆ ನೌಕರರು ಸರ್ಕಾರದ ಸೌಲಭ್ಯಗಳನ್ನು ಸಕಾಲಕ್ಕೆ ಸಾರ್ವಜನಿಕರಿಗೆ ತಲುಪಿಸಬೇಕು’ ಎಂದು ಸಂಸದ ಎಸ್‌.ಮುನಿಸ್ವಾಮಿ ಸೂಚಿಸಿದರು.

ಇಲ್ಲಿ ಶುಕ್ರವಾರ ನಡೆದ ಅಂಚೆ ನೌಕರರ ಸಭೆಯಲ್ಲಿ ಮಾತನಾಡಿ, ‘ಕೆಳ ವರ್ಗದ ಜನರ ಅನುಕೂಲಕ್ಕಾಗಿ ಸರ್ಕಾರಗಳು ಸಾಕಷ್ಟು ಯೋಜನೆ ಜಾರಿಗೊಳಿಸಿವೆ. ಅಂಚೆ ಇಲಾಖೆ ಸಿಬ್ಬಂದಿಯು ಜನರಿಗೆ ಈ ಯೋಜನೆಗಳ ಬಗ್ಗೆ ಅರಿವು ಮೂಡಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಕೇಂದ್ರ ಸರ್ಕಾರದ ಆಯುಷ್ಮಾನ್‌ ಭಾರತ್ ಆರೋಗ್ಯ ಕಾರ್ಡ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವಿದೆ ಎಂಬ ಕಾರಣಕ್ಕೆ ಕೆಲ ರಾಜಕಾರಣಿಗಳ ಮಾತು ಕೇಳಿ ಬಡವರಿಗೆ ಕಾರ್ಡ್ ತಲುಪಿಸದೇ ಇರುವುದು ಸರಿಯಲ್ಲ. ಪ್ರಾಮಾಣಿಕವಾಗಿ ಶೀಘ್ರವೇ ಫಲಾನುಭವಿಗಳಿಗೆ ಆರೋಗ್ಯ ಕಾರ್ಡ್‌ ತಲುಪಿಸಿ’ ಎಂದು ತಿಳಿಸಿದರು.

‘ಸರ್ಕಾರದ ಸೌಲಭ್ಯಗಳ ವಿತರಣೆಯಲ್ಲಿ ವಿಳಂಬ ಮಾಡಬಾರದು. ಮನಸಾಕ್ಷಿಗೆ ವಿರುದ್ಧವಾಗಿ ನಡೆದುಕೊಳ್ಳದೆ ಜನರಿಗೆ ಹತ್ತಿರವಾಗುವ ನಿಟ್ಟಿನಲ್ಲಿ ಇಚ್ಛಾಶಕ್ತಿಯಿಂದ ಕೆಲಸ ಮಾಡಬೇಕು. ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ಅವರ ನಂಬಿಕೆ ಉಳಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ತಾರತಮ್ಯ: ‘ದೇಶದಲ್ಲಿ 2.68 ಲಕ್ಷ ಅಂಚೆ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂಚೆ ನೌಕರರು ಮತ್ತು ಗ್ರಾಮೀಣ ಅಂಚೆ ನೌಕರರೆಂದು ತಾರತಮ್ಯ ಮಾಡಲಾಗುತ್ತಿದೆ. ದುಡಿಮೆಗೆ ತಕ್ಕ ಸಂಬಳ ಸಿಗುತ್ತಿಲ್ಲ’ ಎಂದು ಅಂಚೆ ಇಲಾಖೆ ನೌಕರ ಕೃಷ್ಣಪ್ಪ ಅಳಲು ತೋಡಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ‘ಅಂಚೆ ನೌಕರರ ಸಮಸ್ಯೆ ಸಂಬಂಧ ಅಧಿವೇಶನದಲ್ಲಿ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇವೆ. ಗ್ರಾಮಗಳಲ್ಲಿ ಅಂಚೆ ಕಚೇರಿಯಿಲ್ಲದ ಕಡೆ ಸಾಧ್ಯವಾದಷ್ಟು ಬೇಗ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ. ಸಂಸದರ ಅನುದಾನದಲ್ಲಿ ನೌಕರರಿಗೆ ಸಮವಸ್ತ್ರ ಕೊಡಿಸುತ್ತೇವೆ. ಸರ್ಕಾರ ನೌಕರರ ಜತೆಗಿದೆ’ ಎಂದು ಹೇಳಿದರು.

ಅಂಚೆ ಇಲಾಖೆ ಸೂಪರಿಂಟೆಂಡೆಂಟ್‌ ಗಂಗಪ್ಪ, ನೌಕರರಾದ ಮಂಜುನಾಥ್, ಭಾಗ್ಯಲಕ್ಷ್ಮೀ, ನಳಿನಿ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)