ಸೋಮವಾರ, ಸೆಪ್ಟೆಂಬರ್ 26, 2022
22 °C
ನಗರಸಭೆ ಸಾಮಾನ್ಯ ಸಭೆ–ಅಮೃತ ನಗರೋತ್ಥಾನ ಅನುದಾನ ಬಳಕೆ

ಕೋಲಾರ: ಕಾರ್ಯಾದೇಶ ರದ್ದತಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ ಹಂತ-4ರ ಅನುದಾನದಲ್ಲಿ ಕಿಯೋನಿಕ್ಸ್‌ ಸಂಸ್ಥೆಗೆ ನೀಡಿರುವ ಕಾರ್ಯಾದೇಶವನ್ನು ಕೂಡಲೇ ರದ್ದುಪಡಿಸಬೇಕು’ ಎಂದು ನಗರಸಭೆಯ ಕೆಲ ಸದಸ್ಯರು ಆಗ್ರಹಿಸಿದರು.

ನಗರಸಭೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಈ ವಿಚಾರವಾಗಿ ಚರ್ಚಿಸಿ ಕೊನೆಗೆ ರದ್ದತಿಗೆ ಸಮ್ಮತಿ ಸೂಚಿಸಿದರು.

ಸದಸ್ಯ ಎಸ್.ಆರ್‌.ಮುರಳಿಗೌಡ ವಿಷಯ ಪ್ರಸ್ತಾಪಿಸಿ, ‘ನಗರ ವ್ಯಾಪ್ತಿಯಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಖರೀದಿಸಿ ಅಳವಡಿಸುವುದು, ಸ್ಮಾರ್ಟ್ ಕ್ಲಾಸ್‍ಗಳಿಗೆ ಸಂಬಂಧಿಸಿದ ಉಪಕರಣ ಖರೀದಿಸಿ ಅಳವಡಿಸುವುದು, ಲ್ಯಾಪ್‍ಟಾಪ್‍ಗಳನ್ನು ಸರಬರಾಜು ಮಾಡುವುದು ಸೇರಿ ₹ 2 ಕೋಟಿಗೂ ಹೆಚ್ಚಿನ ಅನುದಾನವನ್ನು ಟೆಂಡರ್‌ ಮಾಡದೆ ಕಾನೂನು ಬಾಹಿರವಾಗಿ ಕಿಯೋನಿಕ್ಸ್ ಸಂಸ್ಥೆಗೆ ಕಾರ್ಯಾದೇಶ ನೀಡಿದ್ದು, ಹೆಚ್ಚಿನ ದರಗಳಿಗೆ ವಸ್ತುಗಳನ್ನು ಖರೀದಿಸಲಾಗಿದೆ. ಉಪಕರಣಗಳು ಕಳಪೆಯಾಗಿವೆ’ ಎಂದು ದೂರಿದರು.

ಸದಸ್ಯ ಮುಬಾರಕ್‌ ಮಾತನಾಡಿ, ‘ಹಿಂದಿನ ಪೌರಾಯುಕ್ತರು ಒತ್ತಡಕ್ಕೆ ಮಣಿದು ಕಾರ್ಯಾದೇಶ ನೀಡಿದ್ದು, ಕೂಡಲೇ ಕಾರ್ಯಾದೇಶ ರದ್ದುಪಡಿಸಬೇಕು. ಜಿಲ್ಲಾಧಿಕಾರಿಗಳ ಕಚೇರಿಯಿಂದ ಕಾರ್ಯಾದೇಶ ನೀಡುವಂತೆ ಪತ್ರ ಬರೆಯಬೇಕು’ ಎಂದು ಆಗ್ರಹಿಸಿದರು.

ನಗರಸಭೆ ಅಧ್ಯಕ್ಷೆ ಶ್ವೇತಾ ಶಬರೀಶ್‌, ‘ಈ ಸಂಬಂಧ ಕ್ರಮ ವಹಿಸಲಾಗುವುದು. ಪೂರೈಕೆಯಾಗಿರುವ ವಸ್ತುಗಳನ್ನು ವಾಪಸ್ ನೀಡಲು ಸಾಧ್ಯವೇ ಎಂಬುದನ್ನು ಪರಿಶೀಲಿಸಲಾಗುವುದು’ ಎಂದರು.

ಪ್ರತಿಧ್ವನಿಸಿದ ಖಾತೆ ವಿವಾದ: ಅಕ್ರಮವಾಗಿ ಖಾತೆ ಮಾಡಿಕೊಡಲಾಗುತ್ತಿದೆ ಎಂಬ ಮುರಳಿಗೌಡ ಅವರ ಪ್ರಸ್ತಾವಕ್ಕೆ ಸಂಬಂಧಿಸಿ ದಂತೆ ವಾಗ್ವಾದ ನಡೆಯಿತು. ಮುರಳಿಗೌಡ, ಪ್ರಸಾದ್‍ಬಾಬು ಹಾಗೂ ಮುಬಾರಕ್ ಅವರು ನಕಲಿ ಖಾತೆ ನೀಡಿರುವ ಬಗ್ಗೆ ಪರಿಶೀಲನೆ ನಡೆಸು ವಂತೆ ಆಯುಕ್ತರನ್ನು ಒತ್ತಾಯಿಸಿದರು.

‘ಅಮೃತ್‌ ಯೋಜನೆಯಡಿ ಯುಜಿಡಿ ಕಾಮಗಾರಿ ವಿಚಾರವಾಗಿ ಗುಜರಾತಿನ ಜಯಂತಿ ಸೂಪರ್‌ ಕನ್‌ಸ್ಟ್ರಕ್ಷನ್‌ಗೆ ₹ 72 ಕೋಟಿಗೆ ನೀಡಲಾಗಿತ್ತು. ಕೆಲಸ ಅವೈಜ್ಞಾನಿಕವಾಗಿದೆ. ಅಲ್ಲದೇ, 2016ರಲ್ಲಿ ಕಾರ್ಯಾದೇಶ ನೀಡಿದ್ದು, ಕೆಲ ಮುಗಿದ ಮೇಲೆ 5 ವರ್ಷ ನಿರ್ವಹಣೆ ಮಾಡಬೇಕಿತ್ತು. ಅದನ್ನೂ ಮಾಡಿಲ್ಲ’ ಎಂದು ಮುರಳಿಗೌಡ ಹೇಳಿದ್ದೂ ವಾಗ್ವಾದಕ್ಕೆ
ಕಾರಣವಾಯಿತು.

ಯರಗೋಳ್‌ ಜಲಾಶಯದಲ್ಲಿ ಬಾಗಿನ ಸೇರಿದಂತೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ. ಜಲಾಶಯ ನಿರ್ಮಾಣದಲ್ಲಿ ನಗರಸಭೆಯ ಹಣವೂ ಇದ್ದು, ಅಧ್ಯಕ್ಷರನ್ನೇ ಆಹ್ವಾನಿಸಿಲ್ಲ ಎಂದು ಮುಬಾರಕ್ ತರಾಟೆಗೆ ತೆಗೆದುಕೊಂಡರು.

ಯರಗೋಳ್ ಯೋಜನೆಗೆ ಹಿಂದೆ ಪೈಪ್‍ಲೈನ್ ಹಾಕಿಸಿದ್ದ ಮಾಜಿ ಸಚಿವ ವರ್ತೂರ್‌ ಪ್ರಕಾಶ್‌ ಅವರನ್ನು ಪಕ್ಷಾತೀತವಾಗಿ ಶ್ಲಾಘಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು