ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಸಚಿವ ನಾಗೇಶ್‌ ಅತಿಥಿ ಉಪನ್ಯಾಸಕರ ಮೇಲೆ ದರ್ಪ ಖಂಡನೀಯ'

ಅತಿಥಿ ಉಪನ್ಯಾಸಕರ ಮೇಲೆ ದರ್ಪ: ಉದ್ಧಟತನ ಖಂಡನೀಯ
Last Updated 1 ಜನವರಿ 2022, 13:13 IST
ಅಕ್ಷರ ಗಾತ್ರ

ಕೋಲಾರ: ‘ಅತಿಥಿ ಉಪನ್ಯಾಸಕರ ಮೇಲೆ ದರ್ಪ ತೋರಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ರಾಜೀನಾಮೆ ನೀಡಬೇಕು’ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಸಮಿತಿ ಸದಸ್ಯ ಝುಬೈರ್ ಒತ್ತಾಯಿಸಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸೇವಾ ಭದ್ರತೆ ಸೇರಿದಂತೆ ತಮ್ಮ ಭೇಡಿಕೆ ಈಡೇರಿಕೆಗೆ ಮನವಿ ಸಲ್ಲಿಸಲು ಹೋಗಿದ್ದ ಅತಿಥಿ ಉಪನ್ಯಾಸಕರ ವಿರುದ್ಧ ಸಚಿವ ನಾಗೇಶ್‌ ಅವರು ಹರಿಹಾಯ್ದು ಉದ್ಧಟತನ ತೋರಿರುವುದು ಖಂಡನೀಯ. ಅವರು ಸಚಿವ ಸ್ಥಾನದ ಘನತೆ ಮರೆತು ಬೇಜವಾಬ್ದಾರಿಯಾಗಿ ನಡೆದುಕೊಂಡಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸರ್ಕಾರ ಅತಿಥಿ ಉಪನ್ಯಾಸಕರ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸದಿರುವುದು ದುರಂತ. ಬೇಡಿಕೆ ಸಂಬಂಧ ಮನವಿ ಸಲ್ಲಿಸಲು ಹೋಗಿದ್ದ ಅತಿಥಿ ಉಪನ್ಯಾಸಕರನ್ನು ಸಚಿವರು ಅವಮಾನಿಸಿರುವುದು ಸರಿಯಲ್ಲ. ಉಪನ್ಯಾಸಕರನ್ನು ಹೀಯಾಳಿಸಿ ನೀಚ ಸಂಸ್ಕೃತಿ ಪ್ರದರ್ಶಿಸಿರುವ ಸಚಿವರನ್ನು ಮುಖ್ಯಮಂತ್ರಿಗಳು ಸಂಪುಟದಿಂದ ವಜಾಗೊಳಿಸಬೇಕು’ ಎಂದು ಹೇಳಿದರು.

‘ರಾಜ್ಯದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ಹೆಚ್ಚು ಸಂಕಷ್ಟ ಎದುರಿಸುತ್ತಿದ್ದು, ಸರ್ಕಾರ ಅವರ ಬೇಡಿಕೆ ಈಡೇರಿಸದೆ ಚೆಲ್ಲಾಟವಾಡುತ್ತಿದೆ. ಸರ್ಕಾರಕ್ಕೆ ಅವರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಸರ್ಕಾರ ಒಣ ಪ್ರತಿಷ್ಠೆ ಬಿಟ್ಟು ಶೀಘ್ರವೇ ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಬೇಕು’ ಎಂದು ಆಗ್ರಹಿಸಿದರು.

ಜೀವನಕ್ಕೆ ಸಮಸ್ಯೆ: ‘ರಾಜ್ಯದಲ್ಲಿ ಸುಮಾರು 14,447 ಮಂದಿ ಅತಿಥಿ ಉಪನ್ಯಾಸಕರು ಅರೆಕಾಲಿಕವಾಗಿ ಅಲ್ಪ ವೇತನಕ್ಕೆ ಕೆಲಸ ಮಾಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿ ತರಗತಿಗಳಿಗೆ ಪಠ್ಯ ಬೋಧನೆ ಮಾಡುತ್ತಿರುವ ಉಪನ್ಯಾಸಕರಿಗೆ ತಿಂಗಳಿಗೆ ₹ 13 ಸಾವಿರ ವೇತನ ನೀಡಲಾಗುತ್ತಿದ್ದು, ಜೀವನ ನಿರ್ವಹಣೆಗೆ ಸಮಸ್ಯೆಯಾಗಿದೆ’ ಎಂದು ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಗೌರವಾಧ್ಯಕ್ಷ ಆರ್.ಲಕ್ಷ್ಮೀನಾರಾಯಣ ಹೇಳಿದರು.

‘ವರ್ಷದಲ್ಲಿ 8 ತಿಂಗಳು ಮಾತ್ರ ವೇತನ ಕೊಡುತ್ತಿದ್ದು, ಅದು ಸಹ ತಡವಾಗುತ್ತಿದೆ. ಉಪನ್ಯಾಸಕರಿಗೆ ಸೇವಾ ಭದ್ರತೆಯಿಲ್ಲ, ಭವಿಷ್ಯ ನಿಧಿ, ಇಎಸ್ಐ ಸೇರಿದಂತೆ ಯಾವುದೇ ಸವಲತ್ತುಗಳಿಲ್ಲ. ಹಿಂದಿನ ಲಾಕ್‌ಡೌನ್‌ ವೇಳೆ ಕಾಲೇಜುಗಳನ್ನು ಮುಚ್ಚಿದ್ದರಿಂದ ದುಡಿಮೆ ಇಲ್ಲದೆ 163 ಅತಿಥಿ ಉಪನ್ಯಾಸಕರು ಆರ್ಥಿಕ ಸಂಕಷ್ಟದಿಂದ ಕಂಗೆಟ್ಟು ಆತ್ಮಹತ್ಯೆ ಮಾಡಿಕೊಂಡರು. ಇವರ ಕುಟುಂಬಕ್ಕೆ ಸರ್ಕಾರ ಪರಿಹಾರ ಕೊಟ್ಟಿಲ್ಲ. ಕನಿಷ್ಠ ಸಾಂತ್ವನ ಸಹ ಹೇಳಿಲ್ಲ’ ಎಂದು ದೂರಿದರು.

‘ಶೈಕ್ಷಣಿಕವಾಗಿ ಸಮಾಜವನ್ನು ಕಟ್ಟಿ ಬೆಳೆಸುವಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸುವ ಅತಿಥಿ ಉಪನ್ಯಾಸಕರ ಸೇವೆ ಕಾಯಂಗೊಳಿಸಬೇಕು. ಸೇವಾ ಭದ್ರತೆಯೊಂದಿಗೆ ಭವಿಷ್ಯ ನಿಧಿ, ಇಎಸ್ಐ ನೀಡಬೇಕು. ಗೌರವಧನ ಹೆಚ್ಚಿಸಬೇಕು. ಬಾಕಿ ಗೌರವಧನ ಬಿಡುಗಡೆ ಮಾಡಬೇಕು. ಮೃತ ಅತಿಥಿ ಉಪನ್ಯಾಸಕರ ಕುಟುಂಬಕ್ಕೆ ಪರಿಹಾರ ಕೊಡಬೇಕು’ ಎಂದು ಮನವಿ ಮಾಡಿದರು.

ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ನೂರ್ ಅಹಮ್ಮದ್, ಉಪಾಧ್ಯಕ್ಷ ಶರಣಪ್ಪ ಗಬ್ಬೂರ್ , ಕಾರ್ಯದರ್ಶಿ ಗೋಪಿನಾಥ್, ಸದಸ್ಯೆ ಚೇತನಾ, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾ ಘಟಕದ ಅಧ್ಯಕ್ಷ ಸೌದ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT