ಮಂಗಳವಾರ, ಅಕ್ಟೋಬರ್ 27, 2020
26 °C

ಗಸ್ತಿ ಪತ್ನಿಗೆ ರಾಜ್ಯಸಭೆ ಸದಸ್ಯ ಸ್ಥಾನ: ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ರಾಜ್ಯಸಭಾ ಸದಸ್ಯ ಅಶೋಕ್‌ ಗಸ್ತಿ ನಿಧನದಿಂದ ತೆರವಾಗಿರುವ ಸ್ಥಾನವನ್ನು ಅವರ ಪತ್ನಿ ಸುಮಾ ಅವರಿಗೆ ನೀಡಬೇಕು’ ಎಂದು ಜಿಲ್ಲಾ ಸವಿತ ಸಮಾಜದ ಗೌರವಾಧ್ಯಕ್ಷ ಎಸ್.ಮಂಜುನಾಥ್ ಮನವಿ ಮಾಡಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಗಸ್ತಿಯವರ ಪ್ರಾಮಾಣಿಕತೆ ಮತ್ತು ಪಕ್ಷ ನಿಷ್ಠೆ ಗುರುತಿಸಿ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಲಾಗಿತ್ತು. ಇದರಿಂದ ಸಮುದಾಯ ಬಹಳ ಸಂತಸಪಟ್ಟು ಬಿಜೆಪಿಗೆ ಕೃತಜ್ಞತೆ ಸಲ್ಲಿಸಿತ್ತು. ಸಮುದಾಯವು ಗಸ್ತಿಯವರ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ, ದುರಾದೃಷ್ಟವಶಾತ್‌ ಅವರು ಕೊರೊನಾ ಸೋಂಕಿನಿಂದ ಮೃತಪಟ್ಟರು’ ಎಂದರು.

‘ಸವಿತಾ ಸಮುದಾಯದ ಗಸ್ತಿಯವರು ಅಪ್ರತಿಮ ವಾಗ್ಮಿಯಾಗಿದ್ದರು. ಅವರ ಸಾವಿನಿಂದ ಸಮುದಾಯಕ್ಕೆ ತುಂಬಾ ನೋವಾಗಿದೆ. ಗಸ್ತಿಯವರ ಪತ್ನಿ ಸುಮಾ ಅವರು ಪದವೀಧರರಾಗಿದ್ದಾರೆ. ಹೀಗಾಗಿ ಅವರಿಗೆ ರಾಜ್ಯಸಭಾ ಸ್ಥಾನ ನೀಡಿದರೆ ಗಸ್ತಿಯವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಮತ್ತು ಸಮುದಾಯದ ಜನರಿಗೆ ಸಮಾಧಾನವಾಗುತ್ತದೆ’ ಎಂದು ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಶಂಕರ್‌ ಅಭಿಪ್ರಾಯಪಟ್ಟರು.

‘ಗಸ್ತಿಯವರ ಧ್ವನಿಯು ಸವಿತಾ ಸಮುದಾಯದ ಪರವಾಗಿ ಪ್ರತಿಧ್ವನಿಸುತ್ತದೆ ಎಂಬ ನಿರೀಕ್ಷೆಗೆ ವಿಧಿಯು ತಣ್ಣೀರೆರಚಿತು. ಸುಮಾ ಅವರಿಂದ ಮಾತ್ರ ಗಸ್ತಿಯವರ ಸ್ಥಾನ ತುಂಬಲು ಸಾಧ್ಯ. ಗಸ್ತಿಯವರ ಆಸೆ ಆಕಾಂಕ್ಷೆ, ಕನಸು, ಗುರಿ ಎಲ್ಲವನ್ನೂ 25 ವರ್ಷಗಳ ಕಾಲ ಅವರೊಂದಿಗೆ ಬದುಕು ಸಾಗಿಸಿರುವ ಸುಮಾ ಅರಿತಿದ್ದಾರೆ. ಅವರಿಗೆ ರಾಜ್ಯಸಭಾ ಸದಸ್ಯತ್ವ ಸ್ಥಾನ ನೀಡುವ ಮೂಲಕ ಸವಿತಾ ಸಮಾಜವನ್ನು ಮುನ್ನಡೆಸಲು ಅವಕಾಶ ಕಲ್ಪಿಸಬೇಕು’ ಎಂದು ತಾಲ್ಲೂಕು ಸವಿತಾ ಸಮಾಜದ ಅಧ್ಯಕ್ಷ ಪ್ರದೀಪ್‌ ಮನವಿ ಮಾಡಿದರು.

ಜಿಲ್ಲಾ ಸವಿತಾ ಸಮಾಜದ ಉಪಾಧ್ಯಕ್ಷ ಟಿ.ಜಿ.ದುರ್ಗಾಪ್ರಸಾದ್, ಸದಸ್ಯರಾದ ಎನ್.ಎಂ.ರಮೇಶ್, ರಾಮಣ್ಣ ಎಸ್.ಜಿ.ನಾಗರಾಜ್ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.