ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ | ಮಾವು ಮಾರುಕಟ್ಟೆಗೆ ಸೌಕರ್ಯ ಕಲ್ಪಿಸುವಂತೆ ರೈತ ಸಂಘದಿಂದ ಆಗ್ರಹ

Published 24 ಮೇ 2023, 5:27 IST
Last Updated 24 ಮೇ 2023, 5:27 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಆರಂಭಿಸಲಾಗಿರುವ ಮಾವು ಮಾರುಕಟ್ಟೆಗೆ ಮೂಲ ಸೌಕರ್ಯ ಕಲ್ಪಿಸಬೇಕು. ಮಂಡಿ ಮಾಲೀಕರು ಮಾವು ಬೆಳೆಗಾರರಿಂದ ಕಾನೂನು ಬಾಹಿರವಾಗಿ ಪಡೆಯುತ್ತಿರುವ ಕಮೀಷನ್ ಹಾವಳಿ ತಡೆಯಬೇಕು ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ನಾರಾಯಣಗೌಡ ಆಗ್ರಹಿಸಿದರು.

ತೋಟಗಾರಿಕಾ ಕಚೇರಿ ಆವರಣದಲ್ಲಿ ಮಂಗಳವಾರ ನಡೆದ ರಾಜ್ಯ ರೈತ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬಿರುಗಾಳಿ ಹಾಗೂ ಆಲಿಕಲ್ಲಿನೊಂದಿಗೆ ಸುರಿದ ಭಾರಿ ಮಳೆಗೆ ಮಾವು ಸೇರಿದಂತೆ ತೋಟದ ಬೆಳೆಗಳಿಗೆ ಅಪಾರ ಹಾನಿ
ಉಂಟಾಗಿದೆ. ಬೆಳೆ ನಷ್ಟ ಅಂದಾಜು ಮಾಡಲು ವಿಶೇಷ ತಂಡ ಕಳಿಸಬೇಕು ಎಂದು
ಒತ್ತಾಯಿಸಿದರು.

ಜಿಲ್ಲೆಯಲ್ಲಿ ಪ್ರತಿ ವರ್ಷ ಪ್ರಕೃತಿ ವಿಕೋಪದಿಂದ ಮುಂಗಾರಿನಲ್ಲಿ ಬೆಳೆ ಹಾನಿ ಸಂಭವಿಸುವುದು ಸಾಮಾನ್ಯವಾಗಿದೆ. ಅದರ ಜತೆಗೆ ನುಸಿ ಹಾಗೂ ಅಂಟುನೊಣದ ಬಾಧೆಗೆ ಬೆಳೆ ನಷ್ಟ ಉಂಟಾಗುತ್ತಿದೆ.
ಕೊಳೆ ರೋಗ ಮಾವಿನ ಫಸಲಿಗೆ ಮಾರಕವಾಗಿ ಪರಿಣಮಿಸಿದೆ. ಇಷ್ಟಾದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಮಸ್ಯೆ ಬಗ್ಗೆ ಅಗತ್ಯ ಪ್ರಮಾಣದಲ್ಲಿ ಗಮನ ನೀಡುತ್ತಿಲ್ಲ. ಬೆಳೆ ವಿಮೆ ಮಾಡಿಸಿಕೊಂಡ ಕಂಪನಿ ಅಧಿಕಾರಿಗಳು ನಷ್ಟ ಸಂಭವಿಸಿದಾಗ ತೋಟಗಳ ಕಡೆ ಸುಳಿಯುವುದಿಲ್ಲ ಎಂದು
ಆರೋಪಿಸಿದರು.

ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ ಮಾತನಾಡಿ, ಬಂಡವಾಳ ಹಾಕಿ ಬೆವರು ಸುರಿಸಿದ ಮಾವು ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ಆದರೆ ಮಂಡಿ ಮಾಲೀಕರು ಅನೈತಿಕವಾಗಿ ಶೇ.10 ಕಮೀಷನ್ ಪಡೆದು ಶ್ರೀಮಂತರಾಗುತ್ತಿದ್ದಾರೆ. ಎಪಿಎಂಸಿ ನಿಯಮ ಜಾರಿಗೊಳಿಸಬೇಕಾದ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಆಪಾದಿಸಿದರು.

ಮಾವು ಮಾರುಕಟ್ಟೆಯಲ್ಲಿ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಬಂದಿರುವ ಸಾವಿರಾರು ಕಾರ್ಮಿಕರು ಅನಾರೋಗ್ಯಕರ ಪರಿಸರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಶುದ್ಧ ಕುಡಿಯುವ ನೀರು, ಶೌಚಾಲಯ ಸೌಲಭ್ಯ ಇಲ್ಲ. ಹಗಲಿರುಳು ಕಾರ್ಯನಿರ್ವಹಿಸುವ ಮಂಡಿ ಕಾರ್ಮಿಕರು ಸೊಳ್ಳೆ ಕಾಟ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು.

ಮಾವು ಮಾರುಕಟ್ಟೆ ಸಮಸ್ಯೆ ಸರಿಪಡಿಸುವಂತೆ ಆಗ್ರಹಿಸಿ ಮೇ 26 ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ರಾಜ್ಯ ಸಂಚಾಲಕ ಬಂಗವಾದಿ ನಾಗರಾಕಜ್‌ ಗೌಡ, ಮುಖಂಡರಾದ ಆಲವಾಟ ಶಿವು, ತೆರ್ನಹಳ್ಳಿ ಲೋಕೇಶ್, ಸಹದೇವಣ್ಣ, ಮುನಿರಾಜು, ಶೇಕ್ ಶಫಿವುಲ್ಲಾ, ಪಾರುಕ್ ಪಾಷ, ಬಂಗಾರಿ ಮಂಜು, ಭಾಸ್ಕರ್, ರಾಜೇಶ್, ವಿಜಯ್ಪಾಲ್, ದೇವರಾಜ್
ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT