ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಂಗಿ ಜ್ವರ: ಜನರು ಎಚ್ಚರ ವಹಿಸಿ

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಕಮಲಾ ಮನವಿ
Last Updated 15 ಮೇ 2021, 14:44 IST
ಅಕ್ಷರ ಗಾತ್ರ

ಕೋಲಾರ: ‘ಡೆಂಗಿ ಜ್ವರವು ಸಾಂಕ್ರಾಮಿಕ ರೋಗವಾಗಿದ್ದು, ಸಾರ್ವಜನಿಕರು ತಮ್ಮ ಮನೆ ಸುತ್ತಮುತ್ತ ಒಳಾಂಗಣದಲ್ಲಿ ಮತ್ತು ಹೊರಾಂಗಣದಲ್ಲಿ ನೀರು ಶೇಖರಣೆಯಾಗದಂತೆ ಎಚ್ಚರ ವಹಿಸಬೇಕು’ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎಂ.ಕಮಲಾ ತಿಳಿಸಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಹಗಲು ಹೊತ್ತಿನಲ್ಲಿ ವಿಶ್ರಾಂತಿ ಪಡೆಯುವ ವಯೋವೃದ್ಧರು, ಗರ್ಭಿಣಿಯರು ಹಾಗೂ ಮಕ್ಕಳು ಡೆಂಗಿ ತಡೆಗೆ ಕಡ್ಡಾಯವಾಗಿ ಸೊಳ್ಳೆ ಪರದೆ ಬಳಸಬೇಕು. ಸೊಳ್ಳೆಗಳು ಕಚ್ಚದಂತೆ ಮೈತುಂಬಾ ಬಟ್ಟೆ ಧರಿಸಬೇಕು. ಸೊಳ್ಳೆ ಬತ್ತಿ ಮತ್ತು ಮುಲಾಮು ದ್ರಾವಣ ಉಪಯೋಗಿಸಬೇಕು’ ಎಂದು ಸಲಹೆ ನೀಡಿದರು.

‘ರಾಷ್ಟ್ರೀಯ ಡೆಂಗಿ ದಿನಾಚರಣೆ ಪ್ರಯುಕ್ತ ‘ಡೆಂಗಿ ತಡೆಗಟ್ಟುವಿಕೆ ಮನೆಯಿಂದಲೇ ಪ್ರಾರಂಭ’ ಘೋಷ ವಾಕ್ಯದೊಂದಿಗೆ ಮೇ 18ರಂದು ಮಧ್ಯಾಹ್ನ 12- ಗಂಟೆಗೆ ನಮ್ಮ ಧ್ವನಿ ಸಮುದಾಯ ರೇಡಿಯೋ ಕೇಂದ್ರ 90.4 ತರಂಗದಲ್ಲಿ ಫೋನ್‌ಇನ್ ಕಾರ್ಯಕ್ರಮ ಪ್ರಸಾರವಾಗಲಿದೆ. ಜನರು ಮನೆಯಲ್ಲೇ ಕಾರ್ಯಕ್ರಮ ಆಲಿಸಬಹುದು. ಮೊಬೈಲ್‌ನಲ್ಲೂ ಕೇಳಬಹುದು. ಜತೆಗೆ 7026220055 ಮೊಬೈಲ್‌ ಸಂಖ್ಯೆಗೆ ಕರೆ ಮಾಡಬಹುದು’ ಎಂದು ವಿವರಿಸಿದರು.

‘ವೈರಸ್‌ ಸೋಂಕು ಹೊಂದಿದ ಈಡೀಸ್ ಈಜಿಪ್ಟೈ ಎಂಬ ಸೊಳ್ಳೆಯ ಕಡಿತದಿಂದ ಒಬ್ಬರಿಂದ ಇನ್ನೊಬ್ಬರಿಗೆ ಡೆಂಗಿ ಜ್ವರ ಹರಡುತ್ತದೆ. ಸ್ವಚ್ಛ ನೀರಿನಲ್ಲಿ ಹುಟ್ಟುವ ಈ ಸೊಳ್ಳೆ ಸಾಧಾರಣವಾಗಿ ಹಗಲಿನಲ್ಲಿ ಕಚ್ಚುತ್ತದೆ. ಈಡೀಸ್ ಈಜಿಪ್ಟೈ ಸೊಳ್ಳೆಯು ತನ್ನ ಜೀವನ ಚಕ್ರ ಪೂರ್ಣಗೊಳಿಸಲು 8ರಿಂದ 10 ದಿನ ತೆಗೆದುಕೊಳ್ಳುತ್ತದೆ. ಮೊದಲ 3 ಹಂತಗಳಾದ ಮೊಟ್ಟೆ, ಲಾರ್ವ ಮತ್ತು ಪ್ಯೂಪ ಪ್ರಕ್ರಿಯೆಯು ನಿಂತ ನೀರಿನಲ್ಲಿ ನಡೆಯುತ್ತದೆ’ ಎಂದರು.

ಲಕ್ಷಣಗಳು: ‘ಇದ್ದಕ್ಕಿದ್ದಂತೆ ಬರುವ ಅಧಿಕ ಜ್ವರ, ತೀವ್ರ ತಲೆ ನೋವು, ಕಣ್ಣುಗಳ ಹಿಂಭಾಗದಲ್ಲಿ ತೀವ್ರತರ ನೋವು, ಮೈಕೈ ನೋವು, ವಾಂತಿಯು ಡೆಂಗಿ ಜ್ವರದ ಲಕ್ಷಣಗಳು. ಈ ಕಾಯಿಲೆ ಬಂದವರು ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು’ ಎಂದು ಕಿವಿಮಾತು ಹೇಳಿದರು.

‘ಒಳಾಂಗಣ ಮತ್ತು ಹೊರಾಂಗಣದ ಸಿಮೆಂಟ್ ತೊಟ್ಟಿಗಳು, ಪ್ಲಾಸ್ಟಿಕ್ ಡ್ರಮ್‌, ಬಕೆಟ್‌, ಬ್ಯಾರಲ್, ಹೂವಿನ ಕುಂಡಗಳು, ಹವಾನಿಯಂತ್ರಿತ ಉಪಕರಣ (ಎ.ಸಿ), ಮಡಿಕೆಗಳು, ಒರಳು ಕಲ್ಲು, ತೆಂಗಿನ ಚಿಪ್ಪುಗಳಲ್ಲಿ ಮಳೆ ನೀರು ಶೇಖರಣೆಯಾಗಿ ಈಡಿಸ್ ಲಾರ್ವಾ ಉತ್ಪತ್ತಿಯಾಗುತ್ತವೆ. ನೀರು ಶೇಖರಣೆ ಮಾಡಿರುವ ತೊಟ್ಟಿ, ಡ್ರಮ್‌ಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಸ್ವಚ್ಛಗೊಳಿಸಬೇಕು’ ಎಂದು ಸೂಚಿಸಿದರು.

‘ನೀರಿನ ಡ್ರಮ್‌ಗಳಿಗೆ ಮುಚ್ಚಳ ಮುಚ್ಚಬೇಕು ಹಾಗೂ ಬಯಲಿನಲ್ಲಿರುವ ತ್ಯಾಜ್ಯ ವಸ್ತುಗಳಾದ ಬಾಟಲಿ, ಪ್ಲಾಸ್ಟಿಕ್ ಲೋಟಗಳು, ಒರಳು ಕಲ್ಲು, ಚಿಪ್ಪಿನಲ್ಲಿ ಮಳೆ ನೀರು ಸಂಗ್ರಹವಾಗದಂತೆ ಎಚ್ಚರ ವಹಿಸಬೇಕು. ಡೆಂಗಿ ಸಂಶಯಾಸ್ಪದ ಪ್ರಕರಣಗಳ ಬಗ್ಗೆ ಸಮುದಾಯಕ್ಕೆ ಅರಿವು ಮೂಡಿಸಲು ಆರೋಗ್ಯ ಇಲಾಖೆಯಿಂದ ಪ್ರತಿನಿತ್ಯ ಈಡಿಸ್ ಲಾರ್ವಾ ಸಮೀಕ್ಷೆ ಮಾಡಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಮಳೆಗಾಲದಲ್ಲಿ ಸಾಮಾನ್ಯವಾಗಿ ನೀರು ಶೇಖರಣೆಯಾಗುತ್ತದೆ. ಹೀಗಾಗಿ ವೈರಾಣು ಜ್ವರ ಪ್ರಕರಣ ಹೆಚ್ಚಾಗುವ ಸಾಧ್ಯತೆಯಿದ್ದು, ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT