ಭಾನುವಾರ, ಫೆಬ್ರವರಿ 23, 2020
19 °C
ಕಾರ್ಯಾಗಾರದಲ್ಲಿ ವಿಜ್ಞಾನ ಶಿಕ್ಷಕಕರಿಗೆ ಡಿಡಿಪಿಐ ರತ್ನಯ್ಯ ಕಿವಿಮಾತು

ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ವಿಜ್ಞಾನ ಶಿಕ್ಷಕರು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದರ ಜತೆಗೆ ಅವರ ಕುತೂಹಲ ತಣಿಸುವ ಸಾಮರ್ಥ್ಯ ಪಡೆದುಕೊಳ್ಳಬೇಕು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರತ್ನಯ್ಯ ಹೇಳಿದರು.

ಜಿಲ್ಲೆಯ ಪ್ರೌಢ ಶಾಲಾ ವಿಜ್ಞಾನ ಶಿಕ್ಷಕರಿಗೆ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪುನಶ್ಚೇತನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ‘ಮಕ್ಕಳಲ್ಲಿ ಕುತೂಹಲ ಹೆಚ್ಚಿರುತ್ತದೆ. ಶಿಕ್ಷಕರು ಅವರ ಪ್ರಶ್ನೆಗಳಿಗೆ ಉತ್ತರಿಸುವ ಶಕ್ತಿ ಬೆಳೆಸಿಕೊಳ್ಳಿ. ಶಿಕ್ಷಕರು ಸದಾ ಅಧ್ಯಯನಶೀಲರಾಗಿದ್ದರೆ ಮಾತ್ರ ಬೋಧನಾ ಸಾಮರ್ಥ್ಯ ವೃದ್ಧಿಸಿಕೊಳ್ಳಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

‘ಆಧುನಿಕತೆಗೆ ತಕ್ಕಂತೆ ಮಕ್ಕಳ ಆಲೋಚನಾ ವಿಧಾನ ಬದಲಾಗುತ್ತಿದೆ. ಹಿರಿಯರು ಹೇಳುವಂತೆ ಗರ್ಭಾವಸ್ಥೆಯಿಂದ ಗೋರಿವರೆಗೂ ಕಲಿಕೆ ನಿರಂತರ. ಶಿಕ್ಷಕರು ಅರಿವು ಹೆಚ್ಚಿಸಿಕೊಂಡರೆ ಮಾತ್ರ ತರಗತಿಯಲ್ಲಿ ಮಕ್ಕಳ ಪ್ರಶ್ನೆ, ಅನುಮಾನ, ಗೊಂದಲ ಪರಿಹರಿಸಲು ಸಾಧ್ಯ. ಮಕ್ಕಳಿಗೆ ಶಿಕ್ಷಕರು ಮಾರ್ಗದರ್ಶಕರು. ಆದ್ದರಿಂದ ಅವರಲ್ಲಿ ವಿಶ್ಲೇಷಣೆ ಶಕ್ತಿ ಬೆಳೆಸಬೇಕು. ವೈಜ್ಞಾನಿಕವಾಗಿ ತರ್ಕ ಮಾಡಿ ಆಲೋಚಿಸುವ ಗುಣ ಬೆಳೆಸಬೇಕು’ ಎಂದರು.

‘ಶಿಕ್ಷಕರು ಪ್ರಶ್ನೆಪತ್ರಿಕೆ ವಿನ್ಯಾಸ, ಬದಲಾದ ಪ್ರಶ್ನೆಗಳಿಗೆ ತಕ್ಕಂತೆ ಅರಿವು ಪಡೆದುಕೊಳ್ಳಬೇಕು. 2 ವರ್ಷಗಳಿಂದ ಜಿಲ್ಲೆಯು ಎಸ್ಸೆಸ್ಸೆಲ್ಸಿ ವಿಜ್ಞಾನ ವಿಷಯದಲ್ಲಿ ಶೇ 95ಕ್ಕೂ ಹೆಚ್ಚು ಫಲಿತಾಂಶ ದಾಖಲಿಸುತ್ತಿರುವುದು ಸಂತಸದ ಸಂಗತಿ. ಆದರೆ, ಶೇ 100ರಷ್ಟು ಸಾಧಕ ಮಕ್ಕಳ ಸಂಖ್ಯೆ ಹೆಚ್ಚುತ್ತಿಲ್ಲ’ ಎಂದು ಎಸ್ಸೆಸ್ಸೆಲ್ಸಿ ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ವಿಷಾದಿಸಿದರು.

‘ಈ ಬಾರಿ ಫಲಿತಾಂಶದ ಗುಣಾತ್ಮಕತೆಗೆ ಒತ್ತು ನೀಡಿ. ಪಠ್ಯ, ಪ್ರಶ್ನೆಪತ್ರಿಕೆ ತಯಾರಿಗೆ ಸಂಬಂಧಿಸಿದಂತೆ ಗೊಂದಲವಿದ್ದರೆ ಪರಿಹರಿಸಿಕೊಳ್ಳಿ. ಅನ್ವಯಿಕ ಪ್ರಶ್ನೆಗಳಿಗೆ ಉತ್ತರಿಸುವ ಶಕ್ತಿ ಬೆಳೆಸಿ. ಶಿಕ್ಷಕರು ಪರಿಪಕ್ವತೆ ಹೊಂದಿದರೆ ಮಾತ್ರ ಉತ್ತಮ ಬೋಧಕರಾಗಲು ಸಾಧ್ಯ. ವಿಜ್ಞಾನವು ವಿಶಿಷ್ಟ ಜ್ಞಾನವಾಗಿರುವುದರಿಂದ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳಿಂದ ಗೊಂದಲ ಪರಿಹರಿಸಿಕೊಳ್ಳಿ’ ಎಂದು ಸಲಹೆ ನೀಡಿದರು.

ಭಾರತದ ಕೊಡುಗೆ: ‘ಜಾಗತಿಕವಾಗಿ ಗಣಿತ ಮತ್ತು ವಿಜ್ಞಾನ ಕ್ಷೇತ್ರಕ್ಕೆ ಭಾರತದ ಕೊಡುಗೆ ಅಪಾರ. ಈ ವಿಷಯಗಳನ್ನು ಸುಲಭವಾಗಿ ಅರಿಯುವುದನ್ನು ಕಲಿಸದಿದ್ದರೆ ಮುಂದೆ ದೇಶದಲ್ಲಿ ವಿಜ್ಞಾನಿಗಳು, ಗಣಿತಜ್ಞರ ಕೊರತೆ ಎದುರಾಗುತ್ತದೆ’ ಎಂದು ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ಹೇಳಿದರು.

‘ಮಕ್ಕಳಲ್ಲಿ ವೈಜ್ಞಾನಿಕತೆ ಹೆಚ್ಚಿಸುವುದು ವಿಜ್ಞಾನ ಹಬ್ಬದ ಮೂಲ ಉದ್ದೇಶ. ಕೆಜಿಎಫ್ ಶೈಕ್ಷಣಿಕ ವಲಯದ ದೊಡ್ಡಬೊಮ್ಮಪಲ್ಲಿ ಸರ್ಕಾರಿ ಶಾಲೆ ವಿದ್ಯಾರ್ಥಿನಿಯು ಫಿಲಿಫೈನ್ಸ್‌್ ದೇಶದಲ್ಲಿನ ವಸ್ತು ಪ್ರದರ್ಶನಕ್ಕೆ ಆಯ್ಕೆಯಾಗಿದ್ದಾಳೆ’ ಎಂದು ವಿವರಿಸಿದರು.

ಎಸ್‌ಡಿಸಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶಿವರಾಮ್ ಎನ್.ಪಾಟೀಲ್, ಎಸ್‌ಡಿಸಿ ಪ್ರೌಢ ಶಾಲೆ ಮುಖ್ಯ ಶಿಕ್ಷಕಿ ಕೆ.ಆರ್.ನಾಗಲಕ್ಷ್ಮಿ, ವಿಷಯ ಪರಿವೀಕ್ಷಕರಾದ ವಿ.ಕೃಷ್ಣಪ್ಪ, ಕೆ.ಎಸ್.ಶಶಿವಧನ, ಪಿ.ವಿ.ಗಾಯಿತ್ರಿ, ವಿಜ್ಞಾನ ಸಂಪನ್ಮೂಲ ವ್ಯಕ್ತಿಗಳಾದ ರವಿಕುಮಾರ್, ಶ್ರೀಧರಯ್ಯ, ವಿಶ್ವನಾಥಯ್ಯ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)