ಗುರುವಾರ , ನವೆಂಬರ್ 26, 2020
21 °C

ಡಿಜಿಟಲ್‌ ಗ್ರಂಥಾಲಯ ನೋಂದಣಿ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ತಂತ್ರಜ್ಞಾನದ ಮೂಲಕ ಜ್ಞಾನ ಹಂಚುವ ಡಿಜಿಟಲ್ ಗ್ರಂಥಾಲಯಕ್ಕೆ ಜಿಲ್ಲೆಯಾದ್ಯಂತ ನೋಂದಣಿ ಮಾಡಿಸುವ ಅಭಿಯಾನ ಯಶಸ್ವಿಗೊಳಿಸಲು ಪ್ರತಿಯೊಬ್ಬರು ಕೈಜೋಡಿಸಬೇಕು’ ಎಂದು ಜಿಲ್ಲಾ ಗ್ರಂಥಾಲಯ ಪ್ರಾಧಿಕಾರ ಸಮಿತಿ ಸದಸ್ಯ ಕೆ.ಎಸ್.ಗಣೇಶ್ ಮನವಿ ಮಾಡಿದರು.

ಇಲ್ಲಿ ಶನಿವಾರ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ- ಉದ್ಘಾಟಿಸಿ ಮಾತನಾಡಿ, ‘ಪ್ರತಿ ಪುಸ್ತಕದಿಂದಲೂ ಒಂದಷ್ಟು ಜ್ಞಾನ ಪಡೆದುಕೊಳ್ಳಬಹುದು ಕೆಟ್ಟ ಪುಸ್ತಕ ಎಂಬುದೇ ಇಲ್ಲ. ಆಧುನಿಕ ಕಾಲದಲ್ಲಿ ಪುಸ್ತಕ ಜ್ಞಾನವನ್ನು ತಂತ್ರಜ್ಞಾನದ ಮೂಲಕ ಪಡೆದುಕೊಳ್ಳಲು ಡಿಜಿಟಲ್ ಗ್ರಂಥಾಲಯ ಸೇವೆ ಸಹಕಾರಿ’ ಎಂದರು.

‘ಜಿಲ್ಲೆಯ ಪ್ರತಿ ಮಹಿಳೆ, ವಿದ್ಯಾರ್ಥಿ ಹಾಗೂ ಯುವಕ, ಯುವತಿಯರು ಡಿಜಿಟಲ್ ಗ್ರಂಥಾಲಯಕ್ಕೆ ನೋಂದಣಿಯಾಗುವ ಮೂಲಕ ಕೊರೊನಾ ಕಾಲಘಟ್ಟದಲ್ಲಿ ಗ್ರಂಥಾಲಯಕ್ಕೆ ಬಾರದೆ ಪುಸ್ತಕ ಜ್ಞಾನ ಪಡೆದುಕೊಳ್ಳಬಹುದು’ ಎಂದು ಸಲಹೆ ನೀಡಿದರು.

‘ಗ್ರಂಥಾಲಯ ಪಿತಾಮಹ ಎಸ್.ಆರ್.ರಂಗನಾಥನ್ ಅವರ ಸ್ಮರಣಾರ್ಥ ನ.14ರಿಂದ 20ರವರೆಗೆ ಸಪ್ತಾಹ ಆಚರಿಸಲಾಗುತ್ತಿದೆ. ಮನೆಗೊಬ್ಬ ಸದಸ್ಯ, ಸದಸ್ಯನಿಗೊಂದು ಪುಸ್ತಕ ಎಂಬುದು ಈ ಬಾರಿಯ ಸಪ್ತಾಹದ ಘೋಷ ವಾಕ್ಯ’ ಎಂದು ಗ್ರಂಥಾಲಯ ಇಲಾಖೆ ಉಪ ನಿರ್ದೇಶಕ ದಿವಾಕರ್ ವಿವರಿಸಿದರು.

‘ಸಾರ್ವಜನಿಕ ಗ್ರಂಥಾಲಯಗಳು ಈಗ ಡಿಜಿಟಲ್ ಗ್ರಂಥಾಲಯಗಳಾಗುತ್ತಿವೆ. ಓದುಗರು ಮೊಬೈಲ್, ಟ್ಯಾಬ್, ಲ್ಯಾಪ್‌ಟಾಪ್, ಕಂಪ್ಯೂಟರ್‌ ಮೂಲಕ ಕರ್ನಾಟಕ ಡಿಜಿಟಲ್ ಪಬ್ಲಿಕ್ ಲೈಬ್ರರಿಯನ್ನು ಗೂಗಲ್‌ ಜಾಲತಾಣದಲ್ಲಿ ಜಾಲಾಡಿ ನೋಂದಣಿಯಾಗುವ ಮೂಲಕ ಉಚಿತವಾಗಿ ಸಾವಿರಾರು ಪುಸ್ತಕ ಓದಬಹುದು’ ಎಂದು ಮಾಹಿತಿ ನೀಡಿದರು.

ನೋಂದಣಿ ಗುರಿ: ‘ಈಗಾಗಲೇ ರಾಜ್ಯದೆಲ್ಲೆಡೆ ನೂರಾರು ಮಂದಿ ಡಿಜಿಟಲ್ ಗ್ರಂಥಾಲಯದ ಸದಸ್ಯರಾಗಿ ಸೇವೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಸಪ್ತಾಹದ ಅಭಿಯಾನದಡಿ ನವೆಂಬರ್ ತಿಂಗಳಲ್ಲಿ 10 ಸಾವಿರ ಮಂದಿ ನೋಂದಣಿ ಮಾಡಿಸುವ ಗುರಿಯಿದೆ. ಈ ನಿಟ್ಟಿನಲ್ಲಿ ಕರಪತ್ರ ಮುದ್ರಿಸಿ ಹಂಚಲಾಗುತ್ತಿದೆ. ವಿಶೇಷ ನೋಂದಣಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ’ ಎಂದು ಹೇಳಿದರು.

ಸಪ್ತಾಹದ ಅಂಗವಾಗಿ ಪುಸ್ತಕಗಳ ಪ್ರದರ್ಶನ ಆಯೋಜಿಸಲಾಗಿತ್ತು. ಜಿಲ್ಲಾ ಕೇಂದ್ರ ಗ್ರಂಥಪಾಲಕಿ ಎಂ.ಸಿ.ನೇತ್ರಾವತಿ, ಸಹಾಯಕ ಗ್ರಂಥಪಾಲಕಿ ಆರ್.ನಾಗಮಣಿ, ಸಹ ಗ್ರಂಥಪಾಲಕ ಜವರೇಗೌಡ, ಮಾಲೂರು ತಾಲ್ಲೂಕು ಗ್ರಂಥಪಾಲಕಿ ಕೆ.ಎ.ದಾಕ್ಷಾಯಿಣಿ, ಬಂಗಾರಪೇಟೆ ಗ್ರಂಥಾಲಯ ಸಹಾಯಕಿ ಎಸ್‍ಎಸ್.ಹೇಮಾವತಿ ಪಾಲ್ಗೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.