ಮಂಗಳವಾರ, ಜನವರಿ 21, 2020
28 °C
ಕ್ರೀಡಾಕೂಟದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಗೌಡ ಕಿವಿಮಾತು

ಅಂಗವೈಕಲ್ಯ ಸಾಧನೆಗೆ ಅಡ್ಡಿಯಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಅಂಗವೈಕಲ್ಯ ಶಾಪವಲ್ಲ. ಅಂಗವಿಕಲರ ಬಗ್ಗೆ ಕೀಳರಿಮೆ ಬೇಡ. ಕಾರಣಾಂತರದಿಂದ ಅಂಗವಿಕಲರಾಗಿ ಹುಟ್ಟುವವರಿಗೆ ಮೋಸ ಮಾಡಬಾರದು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಕಿವಿಮಾತು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯು ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಂಗವಿಕಲ ಮಕ್ಕಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ‘ಅಂಗವಿಕಲರಿಗೆ ಸಮಾಜದ ಅನುಕಂಪ ಬೇಕಿಲ್ಲ. ಅವರ ಕೌಶಲಕ್ಕೆ ತಕ್ಕಂತೆ ವ್ಯವಸ್ಥೆ ಮಾಡಬೇಕು. ಅಂಗವೈಕಲ್ಯವು ಭವಿಷ್ಯದ ಸಾಧನೆಗೆ ಅಡ್ಡಿಯಲ್ಲ’ ಎಂದು ತಿಳಿಸಿದರು.

‘ಅಂಗವಿಕಲರಿಗೆ ಅವಕಾಶ ನೀಡಿದರೆ ಎಲ್ಲಾ ಸ್ಪರ್ಧೆಗಳಲ್ಲೂ ಸ್ಪರ್ಧಿಸಿ ತಮ್ಮ ಪ್ರತಿಭೆ ಪ್ರದರ್ಶಿಸಬಲ್ಲರು. ಅಂಗವಿಕಲರು ಅಂಗವೈಕಲ್ಯ ಹೊಂದಿದ್ದರೂ ಬುದ್ಧಿಶಕ್ತಿಯಲ್ಲಿ ಮೇಧಾವಿಗಳಾಗಿರುತ್ತಾರೆ. ಅಂಗವಿಕಲರಲ್ಲೂ ಸಾಧನೆಯ ಛಲವಿದೆ ಎಂಬುದನ್ನು ಹಲವರು ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ. ಅಂಗವಿಕಲರು ಸರ್ಕಾರದ ಸವಲತ್ತು ಸದ್ಬಳಕೆ ಮಾಡಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಅಂಗವಿಕಲರು ಸಾಮಾನ್ಯ ವ್ಯಕ್ತಿಗಿಂತ ಪ್ರತಿಭಾವಂತರಾಗಿರುತ್ತಾರೆ. ಅನೇಕರು ತಮ್ಮ ಪ್ರತಿಭೆ ಪ್ರದರ್ಶಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿದ್ದಾರೆ. ಶಾಲೆಗಳಲ್ಲಿ ಅಂಗವಿಕಲ ಮಕ್ಕಳ ಬಗ್ಗೆ ಶಿಕ್ಷಕರು ಹೆಚ್ಚಿನ ಗಮನ ಹರಿಸಬೇಕು. ಅವರಲ್ಲಿ ಕೀಳರಿಮೆ ಬಾರದಂತೆ ಮುನ್ನಡೆಸಬೇಕು. ಇತರೆ ಮಕ್ಕಳು ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿ ಮನಸ್ಸಿಗೆ ನೋವುಂಟು ಮಾಡಬಾರದು’ ಎಂದು ಮನವಿ ಮಾಡಿದರು.

ಮಾಹಿತಿ ನೀಡಬೇಕು: ‘ಸರ್ಕಾರ ಅಂಗವಿಕಲರಿಗೆ ಹೆಚ್ಚಿನ ಸೌಲಭ್ಯ ನೀಡುತ್ತಿದೆ. ಉಚಿತ ಶಿಕ್ಷಣದ ಜತೆಗೆ ಅಗತ್ಯ ಸಲಕರಣೆ ಒದಗಿಸುತ್ತಿದೆ. ಸರ್ಕಾರದ ಸೌಲಭ್ಯಗಳ ಬಗ್ಗೆ ಶಿಕ್ಷಕರು ಅವರಿಗೆ ಮಾಹಿತಿ ನೀಡಬೇಕು. ಅವರಿಗೆ ಇಲಾಖೆಗಳಿಂದ ಸಿಗಬೇಕಾದ ವಿದ್ಯಾರ್ಥಿವೇತನವನ್ನು ಕಾಲಕಾಲಕ್ಕೆ ಕೊಡಿಸಬೇಕು’ ಎಂದು ಸೂಚಿಸಿದರು.

‘ಸರ್ಕಾರದ ವಿವಿಧ ಇಲಾಖೆಗಳಲ್ಲಿ ಅಂಗವಿಕಲರಿಗೆ ಶೇ 3ರಷ್ಟು ಅನುದಾನ ಮೀಸಲಾಗಿದ್ದರೂ ಅದು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಅಧಿಕಾರಿಗಳು ಹಾಗೂ ಸಿಬ್ಬಂದಿಯು ಅಂಗವಿಕಲ ಮಕ್ಕಳನ್ನು ಕಡೆಗಣಿಸದೆ ಅವರ ಕೆಲಸ ಮಾಡಿಕೊಡಬೇಕು. ಅರ್ಹರಿಗೆ ಸೌಕರ್ಯ ಕಲ್ಪಿಸಲು ಅಸಡ್ಡೆ ತೋರಬಾರದು’ ಎಂದರು.

‘ಅಂಗವೈಕಲ್ಯ ಸಮಸ್ಯೆ ತಡೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆರೋಗ್ಯ ಇಲಾಖೆ ಸಹಯೋಗದಲ್ಲಿ ಹಲವು ಕಾರ್ಯಕ್ರಮ ರೂಪಿಸಿರುವುದರಿಂದ ದೇಶದಲ್ಲಿ ಅಂಗವಿಕಲರ ಸಂಖ್ಯೆ ಕಡಿಮೆಯಾಗುತ್ತಿದೆ. ಸರ್ಕಾರದ ಸವಲತ್ತುಗಳನ್ನು ಅಂಗವಿಕಲರಿಗೆ ತಲುಪಿಸುವುದು ಅಧಿಕಾರಿಗಳ ಜವಾಬ್ದಾರಿ. ಅಂಗವಿಕಲರು ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಮುಖ್ಯವಾಹಿನಿಗೆ ಬರಬೇಕು’ ಎಂದು ಹೇಳಿದರು.

ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ಕಾರ್ಯದರ್ಶಿ ಕೆ.ಗೋಪಾಲರೆಡ್ಡಿ, ರಾಜ್ಯ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಇ.ಶ್ರೀನಿವಾಸಗೌಡ, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿಗಳಾದ ಎಸ್.ಚೌಡಪ್ಪ, ಮದಿಅಳಗನ್, ನಾರಾಯಣಸ್ವಾಮಿ, ತಾಲ್ಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ನಾಗರಾಜ್ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು