ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ-ಶಕ್ತಿ ಅನುಷ್ಠಾನಕ್ಕೆ ನಿರಾಸಕ್ತಿ ತೋರಿದರೆ ಸಾಲ ಸೌಲಭ್ಯವಿಲ್ಲ: ಗೋವಿಂದಗೌಡ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಸೊಸೈಟಿಗಳಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ
Last Updated 10 ಜುಲೈ 2021, 12:23 IST
ಅಕ್ಷರ ಗಾತ್ರ

ಕೋಲಾರ: ‘ನಬಾರ್ಡ್ ಯೋಜನೆಯಾದ ಇ-ಶಕ್ತಿ ಅನುಷ್ಠಾನಕ್ಕೆ ಸ್ಪಂದಿಸದ ಸೊಸೈಟಿಗೆ ಬ್ಯಾಂಕ್‌ನಿಂದ ಸಾಲ ಸೌಲಭ್ಯ ನೀಡುವುದಿಲ್ಲ’ ಎಂದುಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಎಚ್ಚರಿಕೆ ನೀಡಿದರು.

ಇ-ಶಕ್ತಿ ಯೋಜನೆ ಹಾಗೂ ವಿವಿಧೋದ್ದೇಶ ಸೇವಾ ಕೇಂದ್ರ ಚಟುವಟಿಕೆಗಳ ಸಂಬಂಧ ಇಲ್ಲಿ ಶನಿವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಮಹಿಳಾ ಸ್ವಸಹಾಯ ಸಂಘಗಳಲ್ಲಿ ಭ್ರಷ್ಟಾಚಾರರಹಿತ ಪಾರದರ್ಶಕ ವಹಿವಾಟಿಗೆ ಅನುಕೂಲವಾಗುವಂತೆ ಇ-ಶಕ್ತಿ ಯೋಜನೆ ರೂಪಿಸಲಾಗಿದೆ’ ಎಂದರು.

‘ಕ್ರಿಯಾಶೀಲರಾಗಿ ಕೆಲಸ ಮಾಡಿ. ನಿಮಗೆ ಆಧಾರಸ್ತಂಭವಾದ ಬ್ಯಾಂಕ್ ಶಿಥಿಲವಾದರೆ ಕುಟುಂಬವೇ ಅಲುಗಾಡುತ್ತದೆ. ಕಳೆದ ಏಳೂವರೆ ವರ್ಷದ ನಮ್ಮ ಆಡಳಿತದಲ್ಲಿ ನಬಾರ್ಡ್ ಡಿಸಿಸಿ ಬ್ಯಾಂಕ್‌ಗೆ ಗೌರವ ನೀಡಿದೆ. ಬೇರೆಲ್ಲಾ ವಿಷಯಗಳಲ್ಲೂ ನಾವು ದೇಶದಲ್ಲಿ ಮೊದಲ ಸ್ಥಾನದಲ್ಲಿದ್ದೇವೆ. ಆದರೆ, ಇ-ಶಕ್ತಿ ಅನುಷ್ಠಾನದಲ್ಲಿ ಹಿನ್ನಡೆ ಏಕೆ?’ ಎಂದು ಪ್ರಶ್ನಿಸಿದರು.

‘ಮಹಿಳಾ ಸಂಘಗಳ ಬಲವರ್ಧನೆ ದೃಷ್ಟಿಯಿಂದ ನಬಾರ್ಡ್ ಇ–ಶಕ್ತಿ ಅನುಷ್ಠಾನಕ್ಕೆ ಪ್ರಾಯೋಗಿಕವಾಗಿ ಕೋಲಾರ ಡಿಸಿಸಿ ಬ್ಯಾಂಕ್‌ ಅನ್ನು ಆಯ್ಕೆ ಮಾಡಿಕೊಂಡಿದೆ. ಬ್ಯಾಂಕ್ ವ್ಯಾಪ್ತಿಯ ಎರಡೂ ಜಿಲ್ಲೆಯಲ್ಲಿ ಸುಮಾರು 26 ಸಾವಿರ ಮಹಿಳಾ ಸ್ವಸಹಾಯ ಸಂಘಗಳಿದ್ದು, ಮೊದಲ ಹಂತದಲ್ಲಿ 7,300 ಸಂಘಗಳನ್ನು ಮಾತ್ರ ಯೋಜನೆಗೆ ಆಯ್ಕೆ ಮಾಡಲಾಗಿದೆ. ಈ ಕಾರ್ಯಕ್ಕೆ ಕೆಲಸ ಮಾಡುತ್ತಿರುವ 243 ಪ್ರೇರಕರು ಬ್ಯಾಂಕ್‌ನ ಶಕ್ತಿಯಾಗಬೇಕು’ ಎಂದು ತಿಳಿಸಿದರು.

‘ಇ-ಶಕ್ತಿ ಅನುಷ್ಠಾನದಿಂದ ಸ್ವಸಹಾಯ ಸಂಘಗಳ ಸಾಲ ಮರುಪಾವತಿ, ಉಳಿತಾಯ ಸಂಗ್ರಹ ಪ್ರಕ್ರಿಯೆ ಪಾರದರ್ಶಕವಾಗುತ್ತದೆ. ಎಲ್ಲಾ ಪ್ರತಿನಿಧಿಗಳ ಮೊಬೈಲ್‌ಗೆ ಮಾಹಿತಿ ಹೋಗುವುದರಿಂದ ಭ್ರಷ್ಟಾಚಾರ ಕೊನೆಗೊಳ್ಳಲಿದೆ. ಲೆಕ್ಕ ಪರಿಶೋಧನೆಗಾಗಿ ಪ್ರತಿ ವರ್ಷ ನಾಲ್ಕೈದು ಸಾವಿರ ನೀಡುವುದು ತಪ್ಪುತ್ತದೆ. ಆದ್ದರಿಂದ ಶೀಘ್ರವಾಗಿ ಈ ಯೋಜನೆ ಜಾರಿ ಮಾಡಿ’ ಎಂದು ಕಿವಿಮಾತು ಹೇಳಿದರು.

‘ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಪಡಿತರ ವ್ಯವಸ್ಥೆಗೆ ಸೀಮಿತವಾಗಬಾರದು. ನಬಾರ್ಡ್ ವಿವಿಧೋದ್ದೇಶ ಸೇವಾ ಕೇಂದ್ರ ಸ್ಥಾಪನೆ, ಕೃಷಿ ಸಲಕರಣೆಗಳ ಬಾಡಿಗೆ ಕೇಂದ್ರ, ಗೋದಾಮು ನಿರ್ಮಾಣಕ್ಕೆ ₹ 2 ಕೋಟಿವರೆಗೆ ಶೇ 6ರ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ. ಇದರ ಸದುಪಯೋಗ ಪಡೆದು ರೈತರು, ಸಮಾಜಕ್ಕೆ ಕೆಲಸ ಮಾಡಿ. ಗೋದಾಮು ನಿರ್ಮಾಣಕ್ಕೆ ಬ್ಯಾಂಕ್‌ನ ಕೇಂದ್ರ ಕಚೇರಿಗೆ ಶೀಘ್ರವೇ ಪ್ರಸ್ತಾವ ಸಲ್ಲಿಸಿ’ ಎಂದು ಸೂಚಿಸಿದರು.

ಪ್ರಾಯೋಗಿಕ ಪ್ರಯತ್ನ: ‘ಇ-ಶಕ್ತಿ ಹೊಸ ಕಾರ್ಯಕ್ರಮ. ಸೊಸೈಟಿಗಳ ಗಣಕೀಕರಣದ ಜತೆ ಸ್ವಸಹಾಯ ಸಂಘಗಳ ವಹಿವಾಟು ಗಣಕೀಕರಣಗೊಳ್ಳಲಿದ್ದು, ಶಕ್ತಿ ತುಂಬಿದಂತಾಗುತ್ತದೆ. ಇದರ ಅನುಷ್ಟಾನದಲ್ಲಿ ಗೊಂದಲವಿದ್ದರೆ ಪರಿಹರಿಸಿಕೊಳ್ಳಿ’ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮಣ್ಣ ತಿಳಿಸಿದರು.

‘ಇ-ಶಕ್ತಿ ದೇಶದಲ್ಲೇ ಮೊದಲ ಪ್ರಾಯೋಗಿಕ ಪ್ರಯತ್ನ. ನೋಡಲ್ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಿ. ಮಹಿಳೆಯರಿಗೆ ಸಾಲ ನೀಡಿಕೆ ಮತ್ತು ಸಾಲ ವಸೂಲಾತಿಯಲ್ಲಿ ಬ್ಯಾಂಕ್‌ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಇದೇ ಗೌರವ ಇ-ಶಕ್ತಿ ಅನುಷ್ಠಾನದಲ್ಲಿ ಸಿಗಬೇಕು’ ಎಂದು ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್‌ಕುಮಾರ್‌ ಆಶಿಸಿದರು.

ಇ-ಶಕ್ತಿ ಯೋಜನೆ ಅನುಷ್ಠಾನದ ಹೊಣೆ ಹೊತ್ತ ಪ್ರೇರಕರು, ನೋಡಲ್ ಅಧಿಕಾರಿಗಳು, ಸೊಸೈಟಿಗಳ ಸಿಇಒಗಳು, ಬ್ಯಾಂಕ್‌ ನಿರ್ದೇಶಕ ಕೆ.ವಿ.ದಯಾನಂದ್, ಸಹಾಯಕ ಪ್ರಧಾನ ವ್ಯವಸ್ಥಾಪಕ ಖಲೀಮ್‌ ಉಲ್ಲಾ, ವ್ಯವಸ್ಥಾಪಕ ಹುಸೇನ್ದೊಡ್ಡಮನಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT