ಸೋಮವಾರ, ಜನವರಿ 25, 2021
21 °C
ಸೋಮಯಾಜನಳ್ಳಿ: ಗ್ರಾ.ಪಂ ಸದಸ್ಯರಿಗೆ ಸನ್ಮಾನ

ಅಭಿವೃದ್ಧಿ ಕೆಲಸಕ್ಕೆ ಅಡ್ಡಿ: ಶಾಸಕ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀನಿವಾಸಪುರ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸೋತಿರುವ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ನಿರುತ್ಸಾಹಗೊಳ್ಳಬಾರದು. ಮತದಾರರ ತೀರ್ಪನ್ನು ಗೌರವಿಸಬೇಕು. ಪಕ್ಷ ಸೋತವರು, ಗೆದ್ದವರ ನಡುವೆ ಯಾವುದೇ ಪಕ್ಷಪಾತ ಮಾಡುವುದಿಲ್ಲ. ಇಬ್ಬರ ಹಿತಕಾಯಲು ಬದ್ಧವಾಗಿದೆ ಎಂದು ಶಾಸಕ ಕೆ.ಆರ್. ರಮೇಶ್ ಕುಮಾರ್ ಹೇಳಿದರು.

ತಾಲ್ಲೂಕಿನ ಸೋಮ ಯಾಜಲಹಳ್ಳಿಯಲ್ಲಿ ಗುರುವಾರ ಏರ್ಪಡಿಸಿದ್ದ ನೂತನ ಗ್ರಾಮ ಪಂಚಾಯಿತಿ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

‘ನನ್ನ ರಾಜಕೀಯ ಜೀವನ 28ನೇ ವಯಸ್ಸಿನಲ್ಲಿ ಪ್ರಾರಂಭವಾಯಿತು. ಅಂದಿನಿಂದ ಇಂದಿನವರೆಗೂ ಅನೇಕ ಸಮಸ್ಯೆಗಳನ್ನು ಎದುರಿಸಿದ್ದೇನೆ. ನನ್ನ ಬೆಳವಣಿಗೆಗೆ ಕಾರಣಕರ್ತರಾದ ಎಲ್ಲರಿಗೂ ಕೃತಜ್ಞನಾಗಿದ್ದೇನೆ. ರಾಜಕೀಯದಲ್ಲಿ ಅಸಂಬದ್ಧವಾಗಿ ಮಾತನಾಡುವ ಜನರ ಮಾತಿಗೆ ನಾವು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ’ ಎಂದು ಹೇಳಿದರು.

ಈ ಭಾಗದಲ್ಲಿ ಪ್ರತಿಫಲ ಆಪೇಕ್ಷಿಸದೆ ಗ್ರಾಮದ ಅಭಿವೃದ್ಧಿಗಾಗಿ ಶ್ರಮಿಸಿದ ಜನಪ್ರಿಯ ಮುಖಂಡ ದಿವಂಗತ ಚೆನ್ನಪ್ಪನವರ ರಾಜಕೀಯ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ ಅವರು, ‘ಎಲ್ಲ ಗ್ರಾಮಗಳು ಒಂದೇ ತರಹ ಇರುವುದಿಲ್ಲ. ಆದರೂ ನಾನು ಯಾವುದೆ ತಾರತಮ್ಯ ಮಾಡದೆ ಎಲ್ಲ ಗ್ರಾಮಗಳಿಗೂ ಅಗತ್ಯ ಸೌಲಭ್ಯ ಕಲ್ಪಿಸಿದ್ದೇನೆ’ ಎಂದರು.

ಜನರಿಗೆ ಕೊಟ್ಟ ಮಾತು ಉಳಿಸಿಕೊಳ್ಳುವ ಸಲುವಾಗಿ 2013ನೇ ಸಾಲಿನಲ್ಲಿ ನೀಡಿದ ಪ್ರಣಾಳಿಕೆಯಂತೆ ಪಕ್ಷಾತೀತ, ಜಾತ್ಯತೀತವಾಗಿ ವಸತಿ, ಕುಡಿಯುವ ನೀರು ರಸ್ತೆ ಸೌಲಭ್ಯ ಕಲ್ಪಿಸಿದ್ದೇನೆ. ಆದರೂ ಕೆಲವು ಗ್ರಾಮಗಳಲ್ಲಿ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಪಡಿಸುವ ಮುಖಂಡರ ಬೆಂಬಲಿಗರಿಗೆ ಮತ ನೀಡಿರುವುದು ವಿಪರ್ಯಾಸ ಎಂದು ಹೇಳಿದರು.

ಕೆಲವರು ನಿರಂತರವಾಗಿ ನಮ್ಮ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿ ಉಂಟು ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. 20 ಸಾವಿರ ಮನೆಗಳು ಮಂಜೂರು ಮಾಡಿಸಿದಾಗ, ಶೂನ್ಯ ಬಡ್ಡಿಯಲ್ಲಿ ಸ್ತ್ರೀಶಕ್ತಿ ಸಂಘಗಳಿಗೆ ಸಾಲ ನೀಡಿದಾಗ ಹಾಗೂ ಕೆ.ಸಿ. ವ್ಯಾಲಿ ಯೋಜನೆಯಲ್ಲಿ ಕೆರೆಗಳು ತುಂಬಿಸುವ ಕಾರ್ಯಕ್ಕೂ ಅಡ್ಡಿಪಡಿಸಿರುವುದೇ ಅವರ ಸಾಧನೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಕೋಚಿಮುಲ್ ನಿರ್ದೇಶಕ ಹನುಮೇಶ್, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಎ.ಪಿ.ಎಂ.ಸಿ. ಅಧ್ಯಕ್ಷ ರಮೇಶ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ನಾಗರತ್ನಮ್ಮ ಮಂಜುನಾಥರೆಡ್ಡಿ, ಮುಖಂಡ ವೆಂಕಟೇಶರಾವ್ ಪ್ರಸಾದ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು