ಗುರುವಾರ , ಮಾರ್ಚ್ 23, 2023
30 °C

ಗ್ರಾಹಕರಿಗೆ ರೂಪೇ ಕಾರ್ಡ್‌ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಬ್ಯಾಂಕ್‌ನ ವಹಿವಾಟಿನಲ್ಲಿ ಪಾರದರ್ಶಕತೆ ತರುವ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಪ್ರತಿ ಗ್ರಾಹಕರಿಗೆ ರೂಪೇ ಎಟಿಎಂ ಕಾರ್ಡ್‌ ವಿತರಿಸಲಾಗುತ್ತಿದೆ. ಜತೆಗೆ ರೈತ ಮತ್ತು ಗ್ರಾಹಕಸ್ನೇಹಿ ವಾತಾವರಣ ಸೃಷ್ಟಿಸಲಾಗುತ್ತದೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಹೇಳಿದರು.

ತಾಲ್ಲೂಕಿನ ವಕ್ಕಲೇರಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ವ್ಯಾಪ್ತಿಯ ರೈತರಿಗೆ ಇಲ್ಲಿ ಮಂಗಳವಾರ ರೂಪೇ ಕಾರ್ಡ್ ವಿತರಿಸಿ ಮಾತನಾಡಿ, ‘ಅವಿಭಜಿತ ಕೋಲಾರ ಜಿಲ್ಲೆಯಲ್ಲಿ 5 ಲಕ್ಷ ರೂಪೇ ಕಾರ್ಡ್‌ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ವಿವರಿಸಿದರು.

‘ರೈತರು, ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಸೇರಿದಂತೆ ಎರಡೂ ಜಿಲ್ಲೆಯ ಕಟ್ಟಕಡೆಯ ಗ್ರಾಮದ ಪ್ರತಿ ಕುಟುಂಬಕ್ಕೂ ಗ್ರಾಹಕ ಸೇವೆ ತಲುಪಿಸುವ ಬದ್ಧತೆಯೊಂದಿಗೆ ಆಡಳಿತ ಮಂಡಳಿ ಕಾರ್ಯ ನಿರ್ವಹಿಸುತ್ತಿದೆ. ಬೆಳೆ ಸಾಲದ ಹಣ ಡ್ರಾ ಅಥವಾ ಸಾಲದ ಕಂತು ಪಾವತಿಗೆ ರೈತರು, ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಬ್ಯಾಂಕ್‌ಗೆ ಅಲೆಡಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಮೈಕ್ರೊ ಎಟಿಎಂ ಸೇವೆ ಆರಂಭಿಸಲಾಗುತ್ತಿದೆ’ ಎಂದರು.

‘ಮೈಕ್ರೊ ಎಟಿಎಂ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ ಒದಗಿಸಲಾಗುತ್ತದೆ. ಪ್ರತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಮೈಕ್ರೊ ಎಟಿಎಂ ಒದಗಿಸುವುದರಿಂದ ಸೊಸೈಟಿಗಳಲ್ಲೇ ಹಣ ಡ್ರಾ ಮತ್ತು ಮರುಪಾವತಿಗೆ ಸ್ವೀಕೃತಿ ಸಿಗಲಿದೆ. ಸೊಸೈಟಿ ಸಿಇಒಗಳ ಜವಾಬ್ದಾರಿಯಿಂದ ಕೆಲಸ ಮಾಡಿ ಉಳಿತಾಯ ಹಣ ಸಂಗ್ರಹಕ್ಕೆ ಒತ್ತು ನೀಡಬೇಕು’ ಎಂದು ಕಿವಿಮಾತು ಹೇಳಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸೋಮಣ್ಣ, ಕೆ.ವಿ.ದಯಾನಂದ್, ಪಿಎಲ್‌ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ರಮೇಶ್, ವಕ್ಕಲೇರಿ ಎಸ್‍ಎಫ್‌ಸಿಎಸ್‌ ಉಪಾಧ್ಯಕ್ಷ ಸದಾಶಿವಯ್ಯ, ನಿರ್ದೇಶಕರಾದ ಚಂದ್ರೇಗೌಡ, ಆನಂದಕುಮಾರ್, ವೆಂಕಟಾಚಲಯ್ಯ, ಡಿ.ವಿ.ಮುನಿಯಪ್ಪ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು