ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರೋಧಿಗಳ ಕುತಂತ್ರಕ್ಕೆ ತಲೆಕೆಡಿಸಿಕೊಳ್ಳಬೇಡಿ: ರ‍್ಯಾಲಿಯಲ್ಲಿ ಮುನಿಯಪ್ಪ

Last Updated 26 ಮಾರ್ಚ್ 2019, 10:58 IST
ಅಕ್ಷರ ಗಾತ್ರ

ಕೋಲಾರ: ‘ಪ್ರತಿ ಚುನಾವಣೆಯಲ್ಲೂ ನನಗೆ ತೊಂದರೆ ಮಾಡುವ ಸ್ನೇಹಿತರು ದೆಹಲಿಗೆ ಹೋಗಿ ಟಿಕೆಟ್ ತಪ್ಪಿಸುವ ಪ್ರಯತ್ನ ಮಾಡುತ್ತಾರೆ. ಆದರೆ, ವರಿಷ್ಠರು ಅವರಿಗೆ ಮಣೆ ಹಾಕದೆ ಟಿಕೆಟ್ ನೀಡುತ್ತಾ ಬಂದಿದ್ದಾರೆ. ಹೀಗಾಗಿ ವಿರೋಧಿಗಳ ಕುತಂತ್ರಕ್ಕೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ’ ಎಂದು ಸಂಸದ ಕೆ.ಎಚ್.ಮುನಿಯಪ್ಪ ಹೇಳಿದರು.

ನಾಮಪತ್ರ ಸಲ್ಲಿಕೆಗೂ ಇಲ್ಲಿ ಸೋಮವಾರ ಕಾಂಗ್ರೆಸ್‌ ಕಾರ್ಯಕರ್ತರ ರ‍್ಯಾಲಿಯಲ್ಲಿ ಮಾತನಾಡಿ, ‘ಲೋಕಸಭೆ ಚುನಾವಣೆ ನನಗೆ ಅಗ್ನಿಪರೀಕ್ಷೆ ಹಾಗೂ ಧರ್ಮ ಯುದ್ಧವಿದ್ದಂತೆ. ರಾಜಕೀಯ ವಿರೋಧಿಗಳು ಟಿಕೆಟ್‌ ತಪ್ಪಿಸಲು ದೆಹಲಿಗೆ ಹೋಗಿ ನಂತರ ಬರಿಗೈಲಿ ವಾಪಸ್‌ ಬರುತ್ತಾರೆ’ ಎಂದು ವ್ಯಂಗ್ಯವಾಡಿದರು.

‘ಕೋಮುವಾದಿ ಶಕ್ತಿಗಳನ್ನು ರಾಷ್ಟ್ರ ಮಟ್ಟದಲ್ಲಿ ಅಧಿಕಾರದಿಂದ ದೂರವಿಡುವ ಉದ್ದೇಶಕ್ಕ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ಗಾಂಧಿ ನೇತೃತ್ವದಲ್ಲಿ ಜಾತ್ಯಾತೀತ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲಾಗಿದೆ. ರಾಜ್ಯದಲ್ಲೂ ಮೈತ್ರಿ ಸರ್ಕಾರ ಇರುವುದರಿಂದ ಕಾಂಗ್ರೆಸ್‌ ಮತ್ತು ಜೆಡಿಎಸ್ ವರಿಷ್ಠರು ನನ್ನ ಸ್ಪರ್ಧೆಗೆ ಸಹಮತ ವ್ಯಕ್ತಪಡಿಸಿದ್ದಾರೆ’ ಎಂದರು.

‘ಹಿಂದಿನ ಚುನಾವಣೆಗಳಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಹೋರಾಟವಿತ್ತು. ಇದೀಗ ಈ ಪಕ್ಷಗಳೆರಡೂ ಒಂದಾಗಿದ್ದು, ಕೋಮುವಾದಿ ಬಿಜೆಪಿಯನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಅಧಿಕಾರದಿಂದ ದೂರವಿಡಲು ಪಣ ತೊಟ್ಟಿವೆ. ಇದಕ್ಕೆ ಕಾಂಗ್ರೆಸ್‌, ಜೆಡಿಎಸ್‌ ಮುಖಂಡರು ಮತ್ತು ಕಾರ್ಯಕರ್ತರು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ಮನವರಿಕೆ ಮಾಡಿಕೊಡಿ: ‘ಕೇಂದ್ರದಲ್ಲಿ ಬಿಜೆಪಿ ಸರ್ಕಾರ 5 ವರ್ಷಗಳ ಕಾಲ ಅಚ್ಛೇ ದಿನ್‌ ಹೆಸರಿನಲ್ಲಿ ಜನರನ್ನು ವಂಚಿಸುತ್ತಾ ಬಂದಿರುವುದನ್ನು, ಸುಳ್ಳು ಭರವಸೆ ನೀಡಿರುವುದನ್ನು ಸೇರಿದಂತೆ ಎಲ್ಲವನ್ನೂ ಜನರಿಗೆ ಮನವರಿಕೆ ಮಾಡಿಕೊಡಿ’ ಎಂದು ವಿಧಾನಸಭೆ ಉಪ ಸಭಾಧ್ಯಕ್ಷ ಜೆ.ಕೆ.ಕೃಷ್ಣಾರೆಡ್ಡಿ ಹೇಳಿದರು.

‘ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬರದಿದ್ದರಿಂದ ಅನಿವಾರ್ಯವಾಗಿ ಮೈತ್ರಿ ಸರ್ಕಾರ ರಚನೆ ಮಾಡಿಕೊಳ್ಳಲಾಗಿದೆ. ಮೈತ್ರಿ ಸರ್ಕಾರವಿದ್ದರೂ ಮುಖ್ಯಮಂತ್ರಿ ಕುಮಾರಸ್ವಾಮಿ ಒಳ್ಳೆಯ ಕಾರ್ಯಕ್ರಮ ರೂಪಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 20 ಮತ್ತು ಜೆಡಿಎಸ್‌ಗೆ 8 ಸ್ಥಾನ ಹಂಚಿಕೆ ಮಾಡಲಾಗಿದೆ. ಎರಡೂ ಪಕ್ಷಗಳ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ’ ಎಂದು ತಿಳಿಸಿದರು.

ಬಳಿಗೆ ಬರುತ್ತಾರೆ: ‘ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರ ಸಭೆಗೆ ಹೋಗದಂತೆ ಅನೇಕರು ಅಡ್ಡಿಯುಂಟು ಮಾಡಿದ್ದಾರೆ. ಚುನಾವಣೆ ಬಳಿಕ ಅವರೂ ನಮ್ಮ ಬಳಿಗೆ ಬರುತ್ತಾರೆ’ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಪರೋಕ್ಷವಾಗಿ ಮುನಿಯಪ್ಪ ವಿರೋಧಿ ಬಣದ ವಿರುದ್ಧ ವಾಗ್ದಾಳಿ ನಡೆಸಿದರು.

‘ಬಂಗಾರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಮುನಿಯಪ್ಪ ಅವರಿಗೆ ಲೋಕಸಭೆ ಚುನಾವಣೆಗೆ ಟಿಕೆಟ್ ಕೊಡಿಸಿ, ಗೆಲುವಿಗೆ ಶ್ರಮಿಸಿದ್ದೆ. ಮುನಿಯಪ್ಪರು ಈ ಬಾರಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುವಂತೆ ಮಾಡಲು ಮುಖ್ಯಮಂತ್ರಿಯವರ ಆದೇಶದಂತೆ ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

ಭದ್ರಕೋಟೆ: ಕೋಲಾರ ಲೋಕಸಭಾ ಕ್ಷೇತ್ರವು ಕಾಂಗ್ರೆಸ್ ಪಕ್ಷದ ಭದ್ರಕೋಟೆ. ಮುನಿಯಪ್ಪರಿಗೆ ದೆಹಲಿಯ ಲೋಕಸಭೆಯ ಮೊದಲ ಸಾಲಿನಲ್ಲಿ ಆಸನ ನೀಡಿದ್ದು, ಅದನ್ನು ಮುಂದುವರಿಸಬೇಕೇ ಹೊರತು ಕೊನೆಯ ಸಾಲಿಗೆ ಕಳುಹಿಸುವುದಲ್ಲ’ ಎಂದು ಮಾಲೂರು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

‘ಪ್ರಧಾನಿ ಮೋದಿ ಹಿಂದಿನ ಚುನಾವಣೆಯಲ್ಲಿ ಮತದಾರರಿಗೆ ಸುಳ್ಳು ಭರವಸೆ ನೀಡಿ ಅಧಿಕಾರ ಹಿಡಿದಿದ್ದರು. ಈ ಬಾರಿ ಜನ ತಕ್ಕ ಪಾಠ ಕಲಿಸುತ್ತಾರೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ ಮೋದಿ ನಿರುದ್ಯೋಗ ಸಮಸ್ಯೆ ಹೆಚ್ಚಿಸಿದ್ದಾರೆ. ಬಿಜೆಪಿಯನ್ನು ಚುನಾವಣೆಯಲ್ಲಿ ಸೋಲಿಸಿ ಮನೆಗೆ ಕಳುಹಿಸಲು ಇದು ಸೂಕ್ತ ಸಮಯ’ ಎಂದು ಕೆಜಿಎಫ್‌ ಶಾಸಕ ಎಂ.ರೂಪಕಲಾ ಅಭಿಪ್ರಾಯಪಟ್ಟರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಮಾಜಿ ಸಚಿವ ನಿಸಾರ್‌ ಅಹಮ್ಮದ್‌, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟಮುನಿಯಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅತಾವುಲ್ಲಾ ಖಾನ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT