ಭಾನುವಾರ, ಜನವರಿ 19, 2020
27 °C
ಸಾಕು ನಾಯಿ ಸಾವು: ವೈದ್ಯರ ನಿರ್ಲಕ್ಷ್ಯದ ಆರೋಪ

ಕೋಲಾರ: ನಾಯಿ ಕಳೇಬರವಿಟ್ಟು ಮಾಲೀಕರ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಪಶು ವೈದ್ಯರ ನಿರ್ಲಕ್ಷ್ಯದಿಂದ ಮನೆಯ ಸಾಕು ನಾಯಿ ಮೃತಪಟ್ಟಿದೆ ಎಂದು ಆರೋಪಿಸಿ ಕೋಟೇಶ್ವರ್ ಎಂಬುವರು ಇಲ್ಲಿ ಶುಕ್ರವಾರ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಉಪ ನಿರ್ದೇಶಕರ ಕಚೇರಿ ಎದುರು ಧರಣಿ ನಡೆಸಿದರು.

ನಗರದ ನಿವಾಸಿಯಾದ ಕೋಟೇಶ್ವರ್‌ ಸನ್‌ಬರ್ನ್‌ ತಳಿಯ ನಾಯಿ ಸಾಕಿದ್ದರು. ಅನಾರೋಗ್ಯಕ್ಕೆ ತುತ್ತಾದ ಆ ನಾಯಿಯನ್ನು ಅವರು ಕೆಲ ದಿನಗಳ ಹಿಂದೆ ಜಿಲ್ಲಾ ಪಶು ಆಸ್ಪತ್ರೆಗೆ ಕರೆತಂದು ವೈದ್ಯಕೀಯ ತಪಾಸಣೆ ಮಾಡಿಸಿ ಚುಚ್ಚುಮದ್ದು ಕೊಡಿಸಿದ್ದರು.

ಆದರೆ, ನಾಯಿಯ ಮೂಗಿನಲ್ಲಿ ಗುರುವಾರ ರಾತ್ರಿ ರಕ್ತಸ್ರಾವವಾಗಿ ಮೃತಪಟ್ಟಿತು. ಇದರಿಂದ ಆಕ್ರೋಶಗೊಂಡ ಕೋಟೇಶ್ವರ್‌ ಹಾಗೂ ಅವರ ಸ್ನೇಹಿತರು ಮೃತ ನಾಯಿಯ ಕಳೇಬರವನ್ನು ಶುಕ್ರವಾರ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಆವರಣದಲ್ಲಿನ ಜಿಲ್ಲಾ ಪಶು ಆಸ್ಪತ್ರೆ ಮುಂಭಾಗದಲ್ಲಿಟ್ಟು ಧರಣಿ ಮಾಡಿದರು.

‘ಪಶು ವೈದ್ಯರು ನಾಯಿಗೆ ಸರಿಯಾಗಿ ಚಿಕಿತ್ಸೆ ನೀಡಲಿಲ್ಲ. ನಾಯಿಯನ್ನು 3 ಬಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾಗ ಹೊರಗೆ ಔಷಧ ಮತ್ತು ಚುಚ್ಚುಮದ್ದು ಖರೀದಿಸುವಂತೆ ಚೀಟಿ ಬರೆದುಕೊಟ್ಟಿದ್ದರು. ಪಶು ಆಸ್ಪತ್ರೆಯಲ್ಲಿ ಅಗತ್ಯ ಔಷಧ ಮಾತ್ರ ಸೌಲಭ್ಯವಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚಿಕಿತ್ಸೆಗೆ ಸ್ಪಂದಿಸಲಿಲ್ಲ: ಕೋಟೇಶ್ವರ್‌ರ ಆರೋಪ ನಿರಾಕರಿಸಿದ ಪಶು ವೈದ್ಯ ಅನಂತಕುಮಾರ್, ‘ನಾಯಿಯ ರಕ್ತ ಪರೀಕ್ಷೆ ಮಾಡಿ ಔಷಧ ನೀಡಲಾಗಿದೆ. ನಾಯಿಯನ್ನು ಬದುಕಿಸಲು ಕೈಲಾದ ಪ್ರಯತ್ನ ಮಾಡಿದೆವು. ಆದರೆ, ನಾಯಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರೆ ನಾವೇನು ಮಾಡಲು ಸಾಧ್ಯ? ಆಸ್ಪತ್ರೆಯಲ್ಲಿ ಔಷಧ ದಾಸ್ತಾನು ಮುಗಿದಿದ್ದರಿಂದ ಹೊರಗೆ ಖರೀದಿಸುವಂತೆ ಚೀಟಿ ಬರೆದುಕೊಟ್ಟಿದ್ದೆವು’ ಎಂದು ಸಮಜಾಯಿಷಿ ನೀಡಿದರು.

ಇದೇ ಸಂದರ್ಭದಲ್ಲಿ ಚಿಕಿತ್ಸೆಗಾಗಿ ನಾಯಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ಸಾರ್ವಜನಿಕರು ಹೊರಗೆ ಔಷಧ ಮಾತ್ರ ಖರೀದಿಸುವಂತೆ ತಮಗೂ ಚೀಟಿ ಬರೆದುಕೊಟ್ಟಿದ್ದಾರೆ ಎಂದು ದೂರಿದರು.

‘ಮನೆಯಲ್ಲಿ ಸಾಕಿದ್ದ ನಾಯಿಯು ಸುಮಾರು ₹ 50 ಸಾವಿರ ಬೆಲೆ ಬಾಳುತ್ತಿತ್ತು. ಹಣಕ್ಕಿಂತ ಮುಖ್ಯವಾಗಿ ಮನೆಯ ಸದಸ್ಯನಂತಿದ್ದ ನಾಯಿಯನ್ನು ಕಳೆದುಕೊಂಡಿದ್ದೇನೆ. ನಾಯಿ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ. ಆದ್ದರಿಂದ ಆಸ್ಪತ್ರೆ ವೈದ್ಯರನ್ನು ಬದಲಿಸಿ ಅನುಭವಿ ವೈದ್ಯರನ್ನು ನಿಯೋಜಿಸಬೇಕು’ ಎಂದು ಕೋಟೇಶ್ವರ್‌ ಒತ್ತಾಯಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು