ಮಂಗಳವಾರ, ಜನವರಿ 26, 2021
25 °C

‘ರಕ್ತದಾನದಿಂದ ಲವಲವಿಕೆ ಹೆಚ್ಚಲಿದೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಂಗಾರಪೇಟೆ: ‘ರಕ್ತದಾನ ಇತರರ ಜೀವ ಉಳಿಸುವ ಪವಿತ್ರ ದಾನ. 18 ವರ್ಷದಿಂದ 58 ವರ್ಷದ ಆರೋಗ್ಯವಂತ ವ್ಯಕ್ತಿ ಮೂರು ತಿಂಗಳಿಗೊಮ್ಮೆ ನಿರ್ಭಯವಾಗಿ ರಕ್ತದಾನ ಮಾಡಬಹುದು’ ಎಂದು ಸಮಾಜ ಸೇವಕ ಲಯನ್ ನಂದ ತಿಳಿಸಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕನ್ನಡ ಜಾಗೃತಿ ವೇದಿಕೆಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಮನುಷ್ಯನ ದೇಹದಲ್ಲಿ ಮೂರು ತಿಂಗಳಿಗೊಮ್ಮೆ ಹೊಸ ರಕ್ತಕಣಗಳು ಜೀವ ಪಡೆಯುತ್ತವೆ. ಶರೀರದಲ್ಲಿ ನಶಿಸಿಹೋಗುವ ಈ ರಕ್ತಕಣಗಳು ಬೇರೊಬ್ಬರಿಗೆ ಜೀವ ತುಂಬುತ್ತವೆ ಎಂದರೆ ಆ ಪುಣ್ಯ ರಕ್ತದಾನ ಮಾಡಿದವರಿಗೆ ಲಭಿಸುತ್ತದೆ. ದೇಹದ 20ನೇ ಒಂದು ಭಾಗದಷ್ಟು ಮಾತ್ರ ರಕ್ತ ತೆಗೆದುಕೊಳ್ಳಲಾಗುತ್ತದೆ. ರಕ್ತದಾನದಿಂದ ಯಾವುದೇ ತೊಂದರೆ ಆಗುವುದಿಲ್ಲ. ಬದಲಾಗಿ ಲವಲವಿಕೆ, ಯೌವ್ವನ ಹೆಚ್ಚುಕಾಲ ಉಳಿಯುತ್ತದೆ ಎಂದರು.

ಪುರಸಭೆ ಅಧ್ಯಕ್ಷೆ ಗಂಗಮ್ಮ ರಂಗರಾಮಯ್ಯ ಮಾತನಾಡಿ, ‘ಮನುಷ್ಯ ಸಮಾಜಕ್ಕೆ ಏನಾದರೂ ಒಳ್ಳೆಯದು ಮಾಡಿದರೆ ಮಾತ್ರ ಜೀವನ ಸಾರ್ಥಕವಾಗುತ್ತದೆ. ಲಯನ್ ನಂದ ಅವರ ಸಮಾಜ ಸೇವೆ ಇಂದಿನ ಯುವಪೀಳಿಗೆಗೆ ಸ್ಫೂರ್ತಿ. 84ರ  ಇಳಿವಯಸ್ಸಿನಲ್ಲೂ ಸಮಾಜ ಸೇವೆ ಮಾಡುತ್ತಿರುವುದು ಶ್ಲಾಘನೀಯ. ಉಸಿರು ನಿಂತ ಬಳಿಕವೂ ಹೆಸರು ಉಳಿಯಬೇಕಾದರೆ ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕು’ ಎಂದರು.

ಸಾರ್ವಜನಿಕ ಗ್ರಂಥಾಲಯದಲ್ಲಿ 40 ಸಾವಿರಕ್ಕಿಂತ ಅಧಿಕ ಪುಸ್ತಕಗಳಿವೆ. ಜಾಗವಿಲ್ಲದೆ ಪುಸ್ತಕಗಳನ್ನೆಲ್ಲಾ ಮೂಟೆ ಕಟ್ಟಿ ಒಂದೆಡೆ ಇಟ್ಟಿರುವುದು ವಿಷಾದನೀಯ. ಗ್ರಂಥಾಲಯಕ್ಕಾಗಿಯೇ ಉದ್ಯಾನದಲ್ಲಿ ನಿವೇಶನ ನೀಡಲಾಗಿದೆ. ಕೂಡಲೇ ಕಟ್ಟಡ ಆರಂಭಿಸಬೇಕು ಎಂದು ಗ್ರಂಥಪಾಲಕರಿಗೆ ಸೂಚಿಸಿದರು.

ಸಿಂಹಘರ್ಜನೆ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಕಾ.ಶ. ಪ್ರಸನ್ನಕುಮಾರಸ್ವಾಮಿ, ಮಂಜು, ಕನ್ನಡ ಜಾಗೃತಿ ವೇದಿಕೆಯ ತಾಲ್ಲೂಕು ಅಧ್ಯಕ್ಷ ಆರ್. ರಮೇಶ್‌ ಗೌಡ, ಅಯ್ಯಪ್ಪ, ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಬೇಕರಿ ಶ್ರೀನಿವಾಸ್, ಕಾಂತರಾಜ್, ಟೈಗರ್ ಮಂಜುನಾಥ್, ತುಮಟಗೆರೆ ಶಿವರಾಜ್, ಮಲ್ಲಿಕಾರ್ಜುನ ವಿಜಯಪುರ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.