ಕೋಲಾರ: ಮನೆ ಮನೆಗೆ ಕುಡಿಯುವ ನೀರು

ಕೋಲಾರ: ‘ಗ್ರಾಮೀಣ ಪ್ರದೇಶದ ಪ್ರತಿ ಮನೆಗೂ 2024ರ ಅಂತ್ಯದೊಳಗೆ ನಲ್ಲಿ ಮೂಲಕ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಜಲಜೀವನ್ ಮಿಷನ್ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಕ್ರಿಯಾಯೋಜನೆ ಸಿದ್ಧಪಡಿಸಿ’ ಎಂದು ರಾಜ್ಯ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಆಯುಕ್ತ ಎಚ್.ಪಿ.ಪ್ರಕಾಶ್ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ವತಿಯಿಂದ ಜಲಜೀವನ್ ಮಿಷನ್, ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗ್ರಾಮ ಕ್ರಿಯಾಯೋಜನೆ ತಯಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಜಲಜೀವನ್ ಮಿಷನ್ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಪ್ರತಿಯೊಬ್ಬರಿಗೂ 55 ಲೀಟರ್ ನೀರನ್ನು ಮನೆ ಬಾಗಿಲಿಗೆ ಒದಗಿಸಲಾಗುತ್ತದೆ. ಅದಕ್ಕೂ ಮುನ್ನ ಹಳ್ಳಿಯ ಪರಿಸ್ಥಿತಿ, ಹೀಗಿರುವ ನೀರಿನ ವ್ಯವಸ್ಥೆ ಗಮನಿಸಿ ಸಮರ್ಪಕ ಕಾರ್ಯಾತ್ಮಕವಾದ ಯೋಜನೆ ಸಿದ್ಧಪಡಿಸುವ ಮೂಲಕ ನೀರಿನ ಸಮಾನ ಹಂಚಿಕೆಗೆ ಕ್ರಮ ವಹಿಸಬೇಕು’ ಎಂದು ತಿಳಿಸಿದರು.
‘2019ರಲ್ಲೇ ಜಲಜೀವನ್ ಮಿಷನ್ ಆರಂಭವಾಗಿತ್ತು. ಆಗ ಪ್ರತಿ ಗ್ರಾಮಕ್ಕೆ ನೀರು ಒದಗಿಸುವ ಉದ್ದೇಶವಿತ್ತು. ಈಗ ಪ್ರತಿ ಮನೆಗೂ ನಲ್ಲಿ ನೀರು ಒದಗಿಸುವ ಗುರಿ ಹೊಂದಲಾಗಿದೆ. ವರ್ಷದ 365 ದಿನವೂ ನಲ್ಲಿ ನೀರು ಸರಬರಾಜು ಆಗಬೇಕು. ಗ್ರಾಮೀಣ ಭಾಗದಲ್ಲಿ ಜನರ ನೀರಿನ ಬೇಡಿಕೆಗೆ ಅನುಗುಣವಾಗಿ ಕ್ರಿಯಾಯೋಜನೆ ರೂಪಿಸಬೇಕು’ ಎಂದರು.
ಮೀಟರ್‌ಗೆ ವಿರೋಧ: ಪ್ರತಿ ಮನೆಗೂ ನಲ್ಲಿ ನೀರು ಪೂರೈಸಿ ಮೀಟರ್ ಅಳವಡಿಸುವ ಬಗ್ಗೆ ಆಯುಕ್ತರು ಪ್ರಸ್ತಾಪಿಸಿದಾಗ ಗ್ರಾ.ಪಂ ಸದಸ್ಯ ಎ.ಎಸ್.ನಂಜುಂಡಗೌಡ ವಿರೋಧ ವ್ಯಕ್ತಪಡಿಸಿದರು.
‘ಅರಾಭಿಕೊತ್ತನೂರು ಗ್ರಾಮದ 2 ಬಾವಿಗಳಲ್ಲಿ ಬೇಸಿಗೆಯಲ್ಲೂ 5 ಅಡಿ ಆಳದಲ್ಲೇ ಶುದ್ಧ ಕುಡಿಯುವ ನೀರು ಲಭ್ಯವಿದೆ. ಇಂತಹ ಸಂದರ್ಭದಲ್ಲಿ ಮೀಟರ್ ಅಳವಡಿಸಿದರೆ ತೆರಿಗೆಗೆ ಅಂಜಿ ಅನೇಕರು ಈ ಯೋಜನೆಯ ಪ್ರಯೋಜನ ಪಡೆಯಲು ಮುಂದಾಗುವುದಿಲ್ಲ. ಗ್ರಾಮದಲ್ಲಿ ಶೇ 60 ಪರಿಶಿಷ್ಟರು ಮತ್ತು ಬಡವರಿದ್ದಾರೆ’ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ‘ಎಷ್ಟು ನೀರು ಬಳಸಲಾಗುತ್ತಿದೆ ಎಂಬುದನ್ನು ಅರಿಯಲು ಮೀಟರ್ ಅಳವಡಿಸಲಾಗುತ್ತದೆ. ತೆರಿಗೆ ನಿರ್ಧಾರ ಆಯಾ ಗ್ರಾಮ ಪಂಚಾಯಿತಿಗೆ ಸೇರಿದ್ದು. ಮೀಟರ್ ಅಳವಡಿಕೆ ಬಗ್ಗೆ ಸ್ಥಳೀಯರೇ ನಿರ್ಧರಿಸಿ’ ಎಂದು ಸೂಚಿಸಿದರು.
‘ಕುಡಿಯುವ ನೀರಿನ ಉದ್ದೇಶದ ಕೊಳವೆ ಬಾವಿಗಳ ಮರುಪೂರಣಕ್ಕೆ ಕ್ರಮ ಕೈಗೊಳ್ಳಿ. ಕೆ.ಸಿ ವ್ಯಾಲಿ ಯೋಜನೆ ನೀರು ನೇರವಾಗಿ ಕೊಳವೆ ಬಾವಿಗೆ ಹೋಗುವಂತಿದ್ದರೆ ಅಂತಹ ನೀರನ್ನು ಬಳಸದಿರಿ. ಜಲಜೀವನ್ ಮಿಷನ್ ಯೋಜನೆಯಡಿ ಯಾವುದೇ ಗ್ರಾಮಕ್ಕೆ ನೀರು ಒದಗಿಸಿದರೆ ಅಲ್ಲಿ ಕ್ಲೋರಿನೇಷನ್ ಘಟಕ ನಿರ್ಮಿಸಬೇಕು. ನೀರಿನ ಶುದ್ಧತೆ ಕುರಿತು ಕಾಲಕಾಲಕ್ಕೆ ಗಮನ ಹರಿಸಬೇಕು’ ಎಂದು ಸಲಹೆ ನೀಡಿದರು.
1,980 ಹಳ್ಳಿ: ‘ಜಿಲ್ಲೆಯಲ್ಲಿ 1,980 ಹಳ್ಳಿಗಳಿದ್ದು, ಈ ಪೈಕಿ 1,680 ಕಂದಾಯ ಗ್ರಾಮಗಳಾಗಿವೆ. ಇದರಲ್ಲಿ ಈಗಾಗಲೇ 1 ಸಾವಿರ ಗ್ರಾಮಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿದೆ’ ಎಂದು ಜಿ.ಪಂ ಉಪ ಕಾರ್ಯದರ್ಶಿ ಸಂಜೀವಪ್ಪ ವಿವರಿಸಿದರು.
ಜಿ.ಪಂ ಸಿಇಒ ಉಕೇಶ್‌ಕುಮಾರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಂಜಿನಿಯರ್ ನಾಗರಾಜ್, ಗ್ರಾ.ಪಂ ಅಧ್ಯಕ್ಷ ರಾಜಣ್ಣ, ಉಪಾಧ್ಯಕ್ಷೆ ಶಾಂತಮ್ಮ ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.