ಭಾನುವಾರ, ಆಗಸ್ಟ್ 25, 2019
28 °C
ಚಿಕ್ಕನಹಳ್ಳಿ ಕೆರೆ ಪುನಶ್ಚೇತನಕ್ಕೆ ಚಾಲನೆ: ಪಿಡಿಒ ನಾಗರಾಜ್‌ ಹೇಳಿಕೆ

ಕೆರೆ ಉಳಿದರೆ ಅಂತರ್ಜಲ ವೃದ್ಧಿ

Published:
Updated:
Prajavani

ಕೋಲಾರ: ಟೆಕ್ಸಾಸ್ ಕಂಪನಿ, ಧಾನ್ ಪ್ರತಿಷ್ಠಾನದ ಆರ್ಥಿಕ ನೆರವು ಮತ್ತು ರೈತರ ಸಹಭಾಗಿತ್ವದಲ್ಲಿ ಆರಂಭಿಸಿರುವ ತಾಲ್ಲೂಕಿನ ಮುದುವತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕನಹಳ್ಳಿ ಕೆರೆ ಪುನಶ್ಚೇತನ ಕಾಮಗಾರಿಗೆ ಪಿಡಿಒ ನಾಗರಾಜ್ ಶನಿವಾರ ಚಾಲನೆ ನೀಡಿದರು.

‘ಧಾನ್ ಪ್ರತಿಷ್ಠಾನವು ತಾಲ್ಲೂಕಿನ 4 ಕೆರೆಗಳ ಪುನಶ್ಚೇತನ ಕಾಮಗಾರಿ ಕೈಗೆತ್ತಿಕೊಂಡಿದೆ. ಚಿಕ್ಕನನಹಳ್ಳಿ ಕೆರೆ ಪುನಶ್ಚೇತನಕ್ಕೆ ಗುದ್ದಲಿಪೂಜೆ ನೆರವೇರಿಸಿದ್ದು, ಕಾಮಗಾರಿ ವೇಗವಾಗಿ ನಡೆಯಲಿದೆ’ ಎಂದು ನಾಗರಾಜ್‌ ತಿಳಿಸಿದರು.

‘ನಮ್ಮೂರ ಕೆರೆ ನಮ್ಮೂರ ಜೀವಜಲದ ಜೀವನಾಡಿ ಎಂಬ ಸತ್ಯವನ್ನು ಪ್ರತಿಯೊಬ್ಬರೂ ಅರಿಯಬೇಕು. ಕೆರೆ ಉಳಿದರೆ ಮಾತ್ರ ಗ್ರಾಮದಲ್ಲಿ ಅಂತರ್ಜಲ ವೃದ್ಧಿಯಾಗುತ್ತದೆ. ಆದ ಕಾರಣ ಕೆರೆ ಪುನಶ್ಚೇತನಕ್ಕೆ ಸಹಕಾರ ನೀಡಿ. ಕೆರೆಗಳಲ್ಲಿ ಜಾನುವಾರು ಹಾಗೂ ಪ್ರಾಣಿಗಳಿಗೆ ನೀರು ಕುಡಿಯಲು ತೊಟ್ಟಿ ನಿರ್ಮಾಣ ಮಾಡಲಾಗುತ್ತದೆ’ ಎಂದರು.

‘ಟೆಕ್ಸಾಸ್ ಕಂಪನಿ ನೀಡಿರುವ ಅನುದಾನವನ್ನು ನೀರು ನಿಲುಗಡೆಗೆ ಮತ್ತು ಅಂತರ್ಜಲ ವೃದ್ಧಿಗೆ ಬಳಸಲಾಗುತ್ತದೆ. ಜತೆಗೆ ಕೆರೆಗಳಲ್ಲಿನ ಹೂಳು ತೆಗೆಯಲಾಗುತ್ತದೆ. ರೈತರು ಕೆರೆ ಹೂಳನ್ನು ತಮ್ಮ ಜಮೀನುಗಳಿಗೆ ಸಾಗಿಸಿಕೊಂಡರೆ ಫಲವತ್ತತೆ ಹೆಚ್ಚಿ ಬೆಳೆಗಳಿಗೆ ಅನುಕೂಲವಾಗುತ್ತದೆ’ ಎಂದು ಸಲಹೆ ನೀಡಿದರು.

‘ಕೆರೆ ಕಟ್ಟೆ ಬಲವರ್ಧನೆ, ಪೋಷಕ ಕಾಲುವೆಗಳ ದುರಸ್ತಿ, ಕಳೆ ಗಿಡಗಳ ತೆರವು, ಹೂಳನ್ನು ಹೊರ ಸಾಗಿಸುವುದು, ಗ್ರಾಮದ ದನಕರುಗಳಿಗೆ ನೀರಿನ ತೊಟ್ಟಿ ನಿರ್ಮಾಣ, ಗ್ರಾಮದ ಕುಂಟೆಗಳಲ್ಲಿ ಹೂಳು ತೆಗೆಯುವ ಕೆಲಸವನ್ನು ರೈತರ ಸಹಭಾಗಿತ್ವದಲ್ಲಿ ಮಾಡಲಾಗುತ್ತದೆ’ ಎಂದು ವಿವರಿಸಿದರು.

₹ 20 ಲಕ್ಷ ವೆಚ್ಚ: ‘ಕೆರೆಗಳು ಉಳಿದರೆ ಮಾತ್ರ ಪರಿಸರ ಹಾಗೂ ಜೀವ ಸಂಕುಲ ಉಳಿಯುತ್ತದೆ. ತಾಲ್ಲೂಕಿನ ಶೆಟ್ಟಿಕೊತ್ತನೂರು, ಚಿಕ್ಕನಹಳ್ಳಿ, ಗುಟ್ಟಹಳ್ಳಿ, ಬೆಟ್ಟಬೆಣಜೇನಹಳ್ಳಿ ಕೆರೆಗಳನ್ನು ₹ 20 ಲಕ್ಷ ವೆಚ್ಚದಲ್ಲಿ ಪುನಶ್ಚೇತನ ಮಾಡಲಾಗುತ್ತದೆ’ ಎಂದು ಧಾನ್ ಪ್ರತಿಷ್ಠಾನದ ಸಂಯೋಜಕ ರಮೇಶ್ ಮಾಹಿತಿ ನೀಡಿದರು.

‘ಕೆರೆಗಳ ಪುನಶ್ಚೇತನದಿಂದಾಗಿ ಅಂತರ್ಜಲ ವೃದ್ಧಿಯಾಗುತ್ತದೆ. ನೀರು ನಿಂತರೆ ಸುತ್ತಮುತ್ತ ಕೊಳವೆ ಬಾವಿಗಳು ಅಂತರ್ಜಲ ಮಟ್ಟ ಸುಧಾರಿಸುತ್ತದೆ. ಪ್ರತಿಷ್ಠಾನವು ಗ್ರಾ.ಪಂ ವ್ಯಾಪ್ತಿಯಲ್ಲಿ ಸಾಮಾಜಿಕ ಕಾಳಜಿಯ ಕೆಲಸ ಮಾಡುತ್ತಿದೆ’ ಎಂದು ತಿಳಿಸಿದರು.

ಎಂಜಿನಿಯರ್ ಶಂಕರಯ್ಯ, ಕೆರೆ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು, ಖಜಾಂಚಿ, ಮತ್ತು ಗ್ರಾಮಸ್ಥರು ಹಾಜರಿದ್ದರು.

Post Comments (+)