ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಕ್ಲಿನಿಕ್‌ಗಳಲ್ಲಿ ಸರ್ಕಾರಿ ಆಸ್ಪತ್ರೆ ಔಷಧಿ: ಸಚಿವ ಗರಂ

Last Updated 16 ಅಕ್ಟೋಬರ್ 2019, 19:00 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಿಗೆ ಸರಬರಾಜಾಗುವ ಔಷಧ ಮಾತ್ರೆಗಳನ್ನು ಅಲ್ಲಿನ ವೈದ್ಯರು ಕಾಳಸಂತೆಯಲ್ಲಿ ಮಾರುತ್ತಿರುವ ಬಗ್ಗೆ ದೂರು ಬಂದಿವೆ. ಈ ಅಕ್ರಮ ಮುಂದುವರಿದರೆ ಶಿಸ್ತುಕ್ರಮ ಜರುಗಿಸಿ ಕಳುಹಿಸುತ್ತೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ನಾಗೇಶ್‌ ಎಚ್ಚರಿಕೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಇದೇ ಮೊದಲ ಬಾರಿಗೆ ಇಲ್ಲಿ ಬುಧವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ‘ಸರ್ಕಾರಿ ಆಸ್ಪತ್ರೆ ವೈದ್ಯರು ನಿಯಮಬಾಹಿರವಾಗಿ ನಡೆಸುತ್ತಿರುವ ತಮ್ಮ ನರ್ಸಿಂಗ್ ಹೋಂ ಮತ್ತು ಕ್ಲಿನಿಕ್‌ಗಳಿಗೆ ಕದ್ದುಮುಚ್ಚಿ ಔಷಧ ಮಾತ್ರೆ ಸಾಗಿಸುತ್ತಿರುವುದು ಗೊತ್ತಾಗಿದೆ’ ಎಂದು ಗುಡುಗಿದರು.

‘ಬಡ ರೋಗಿಗಳಿಗೆ ಉಚಿತವಾಗಿ ವಿತರಿಸಲು ಸರ್ಕಾರಿ ಆಸ್ಪತ್ರೆಗಳಿಗೆ ಔಷಧ ಮಾತ್ರೆ ಪೂರೈಸಲಾಗುತ್ತಿದೆ. ಆದರೆ, ಸರ್ಕಾರಿ ಆಸ್ಪತ್ರೆ ವೈದ್ಯರು ಬಡ ರೋಗಿಗಳನ್ನು ವಂಚಿಸಿ ತಮ್ಮ ಖಾಸಗಿ ಆಸ್ಪತ್ರೆಗಳಿಗೆ ಔಷಧ ಮಾತ್ರೆ ಸಾಗಿಸುತ್ತಿದ್ದಾರೆ. ಈ ವಿಚಾರದಲ್ಲಿ ಕೆಲ ವೈದ್ಯರಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಆ ವೈದ್ಯರು ಎಚ್ಚೆತ್ತುಕೊಳ್ಳದಿದ್ದರೆ ತಕ್ಕ ಶಾಸ್ತಿ ಮಾಡುತ್ತೇವೆ’ ಎಂದರು.

‘ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆ ವಿದ್ಯಾರ್ಥಿನಿಲಯಗಳಲ್ಲಿ ಖಾಲಿಯಿರುವ ವಾರ್ಡನ್ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಲಾಗುವುದು. ತಾತ್ಕಾಲಿಕವಾಗಿ ಅಡುಗೆ ಸಿಬ್ಬಂದಿಯೇ ವಾರ್ಡನ್‌ ಹುದ್ದೆಯ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಇದರಿಂದ ಆಹಾರದಲ್ಲಿ ಗುಣಮಟ್ಟದಲ್ಲಿ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ದೂರು ಬಂದಿವೆ. ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ ಖಾಲಿ ಹುದ್ದೆ ಭರ್ತಿ ಮಾಡುತ್ತೇವೆ’ ಎಂದು ಭರವಸೆ ನೀಡಿದರು.

ಸಿಬ್ಬಂದಿ ಕೊರತೆ: ‘ಜಿಲ್ಲೆಯಲ್ಲಿ ಇಲಾಖೆಯ 77 ವಿದ್ಯಾರ್ಥಿನಿಲಯಗಳಿದ್ದು, ಈ ಪೈಕಿ 13 ಹಾಸ್ಟೆಲ್‌ಗಳಲ್ಲಿ ಮಾತ್ರ ವಾರ್ಡನ್‌ಗಳಿದ್ದಾರೆ. 64 ಹಾಸ್ಟೆಲ್‌ಗಳಲ್ಲಿ ಅಡುಗೆ ಸಿಬ್ಬಂದಿಯೇ ವಾರ್ಡನ್‌ಗಳಾಗಿದ್ದಾರೆ. ಸಿಬ್ಬಂದಿ ಕೊರತೆಯಿಂದಾಗಿ ಹಾಸ್ಟೆಲ್‌ಗಳಲ್ಲಿ ದೈನಂದಿನ ಕಾರ್ಯ ಚಟುವಟಿಕೆಗಳು ಸರಿಯಾಗಿ ನಡೆಯುತ್ತಿಲ್ಲ’ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಹಾಸ್ಟೆಲ್‌ಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಆಹಾರ ನೀಡಬೇಕು. ಸರ್ಕಾರದ ಸವಲತ್ತುಗಳು ಮಕ್ಕಳಿಗೆ ತಲುಪಬೇಕು. ಸಕಾಲಕ್ಕೆ ವಿದ್ಯಾರ್ಥಿವೇತನ ನೀಡಬೇಕು. ವಿದ್ಯಾರ್ಥಿವೇತನ ನೀಡಿಕೆಯಲ್ಲಿ ವಿಳಂಬವಾದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಹೇಳಿದರು.

ನಿರುದ್ಯೋಗ ಹೆಚ್ಚಿದೆ: ‘ಜಿಲ್ಲೆಯಲ್ಲಿ ನಿರುದ್ಯೋಗ ಹೆಚ್ಚಿದೆ. ಆದ ಕಾರಣ ಸ್ತ್ರೀಶಕ್ತಿ ಸಂಘಟನೆಗಳ ಸದಸ್ಯರಿಗೆ ಕೌಶಲ ತರಬೇತಿ ನೀಡಬೇಕು. ಕೂಲಿ ಮಾಡಿ ಬದುಕುತ್ತಿರುವ ಬಡ ಮಹಿಳೆಯರಿಗೆ ಹೊಲಿಗೆ, ಗುಡಿ ಕೈಗಾರಿಕೆಗಳ ಬಗ್ಗೆ ತರಬೇತಿ ನೀಡಿ ಸಿದ್ಧ ಉಡುಪು ಕಾರ್ಖಾನೆಗಳಲ್ಲಿ ಉದ್ಯೋಗಾವಕಾಶ ಕಲ್ಪಿಸಬೇಕು. ಗುಡಿ ಕೈಗಾರಿಕೆ ನಡೆಸುವವರಿಗೆ ಬ್ಯಾಂಕ್‌ಗಳಿಂದ ಸಾಲ ಕೊಡಿಸಬೇಕು’ ಎಂದು ಸೂಚಿಸಿದರು.

‘ಅಧಿಕಾರಿಗಳು ಮುಕ್ತ ಮನಸ್ಸಿನಿಂದ ಮಾತನಾಡಿ. ಕಚೇರಿಗಳಲ್ಲಿ 4 ಗೋಡೆ ಮಧ್ಯೆ ಕುಳಿತು ಕೆಲಸ ಮಾಡುವುದನ್ನು ಬಿಟ್ಟು ಇಲಾಖೆಯ ಸಮಸ್ಯೆ ಹಂಚಿಕೊಳ್ಳಿ. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಜನರಿಗೆ ಅನುಕೂಲವಾಗುವ ಯೋಜನೆಗಳ ಬಗ್ಗೆ ಮುಕ್ತವಾಗಿ ಚರ್ಚಿಸಿ’ ಎಂದು ಕಿವಿಮಾತು ಹೇಳಿದರು.

‘ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ದಿನಕ್ಕೆ 11 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ ಅವಳಿ ಜಿಲ್ಲೆಯ ರೈತರಿಗೆ ಹೈನೋದ್ಯಮವೇ ಜೀವಾಳ. ಜಾನುವಾರುಗಳ ರಕ್ಷಣೆ ಪಶು ಸಂಗೋಪನಾ ಇಲಾಖೆಯ ಆದ್ಯ ಕರ್ತವ್ಯ. ರಾಸುಗಳಿಗೆ ಕಾಲು ಬಾಯಿ ಜ್ವರ ಬಾರದಂತೆ ಎಚ್ಚರ ವಹಿಸಿ’ ಎಂದು ಸೂಚನೆ ನೀಡಿದರು.

ಎಪಿಎಂಸಿಗೆ ಜಮೀನು: ‘ಕೋಲಾರ ಎಪಿಎಂಸಿಯಲ್ಲಿ ಜಾಗದ ಸಮಸ್ಯೆಯಿದೆ. ಮಾರುಕಟ್ಟೆ ವಿಸ್ತರಣೆಗೆ ಈಗಾಗಲೇ 2 ಕಡೆ ಜಾಗ ಗುರುತಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಟೊಮೆಟೊ ಮಾರುಕಟ್ಟೆಗೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಜಾಗ ಇರಬೇಕು. ಮಡೇರಹಳ್ಳಿ ಸಮೀಪವೇ ಎಪಿಎಂಸಿಗೆ ಜಮೀನು ನೀಡಲು ಸಂಬಂಧಪಟ್ಟ ಸಚಿವರೊಂದಿಗೆ ಮಾತನಾಡುತ್ತೇನೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆ ಆಗಿರುವುದರಿಂದ ಮೇವಿನ ಸಮಸ್ಯೆಯ ಚಿಂತೆಯಿಲ್ಲ. ಜತೆಗೆ ಒಳ್ಳೆ ಬೆಳೆ ಬರಲಿದೆ. ಜನವರಿಯಿಂದ ಈವರೆಗೆ 600 ಮಿಲಿ ಮೀಟರ್‌ ಮಳೆಯಾಗಿದೆ. ರಾಗಿ ಬೆಳೆ ಚೆನ್ನಾಗಿ ಬೆಳೆದಿದ್ದು, 2 ಬಾರಿ ಮಳೆ ಬಿದ್ದರೆ ಉತ್ತಮ ಫಸಲು ಬರುತ್ತದೆ’ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್‌.ವಿ.ದರ್ಶನ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT