ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ-ಶಕ್ತಿ ಅನುಷ್ಠಾನ: ನಿರ್ಲಕ್ಷ್ಯ ಬೇಡ

ಸಭೆಯಲ್ಲಿ ಪ್ರೇರಕರಿಗೆ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂಡಗೌಡ ಎಚ್ಚರಿಕೆ
Last Updated 18 ಡಿಸೆಂಬರ್ 2020, 14:05 IST
ಅಕ್ಷರ ಗಾತ್ರ

ಕೋಲಾರ: ‘ಸ್ತ್ರೀಶಕ್ತಿ ಸಂಘಗಳ ಸಬಲೀಕರಣದ ಜತೆ ಬ್ಯಾಂಕ್‌ನ ಬಗ್ಗೆ ಮಹಿಳೆಯರಲ್ಲಿ ನಂಬಿಕೆ ಬಲಗೊಳಿಸುವ ಇ-ಶಕ್ತಿ ಯೋಜನೆ ಅನುಷ್ಠಾನದಲ್ಲಿ ನಿರ್ಲಕ್ಷ್ಯ ತೋರಿದರೆ ಕಠಿಣ ಕ್ರಮ ಜರುಗಿಸುತ್ತೇವೆ’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ಯೋಜನೆಯ ಪ್ರೇರಕರಿಗೆ ಎಚ್ಚರಿಕೆ ನೀಡಿದರು.

ಇಲ್ಲಿ ಶುಕ್ರವಾರ ನಡೆದ ಇ-ಶಕ್ತಿ ಯೋಜನೆಯ ಪ್ರೇರಕರ ಸಭೆಯಲ್ಲಿ ಮಾತನಾಡಿ, ‘ಪ್ರೇರಕರು ಸೇವಾ ಮನೋಭಾವದಿಂದ ಕೆಲಸ ಮಾಡಬೇಕು. ಯೋಜನೆ ಜಾರಿಯಲ್ಲಿ ಲೋಪವಾಗದಂತೆ ಎಚ್ಚರ ವಹಿಸಬೇಕು’ ಎಂದು ಸೂಚಿಸಿದರು.

‘ಡಿಸಿಸಿ ಬ್ಯಾಂಕ್‌ ದೇಶದಲ್ಲೇ ಅತಿ ಹೆಚ್ಚು ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ನೀಡಿದೆ. ಈ ಹಿನ್ನೆಲೆಯಲ್ಲಿ ಇ-ಶಕ್ತಿ ಯೋಜನೆ ವ್ಯಾಪ್ತಿಗೆ ಸಂಘಗಳ ಕಾರ್ಯಚಟುವಟಿಕೆ ತರುವ ಪ್ರಾಯೋಗಿಕ ಪ್ರಯತ್ನಕ್ಕೆ ನಬಾರ್ಡ್‌ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಆಯ್ಕೆ ಮಾಡಿದೆ’ ಎಂದು ವಿವರಿಸಿದರು.

‘ಡಿಸಿಸಿ ಬ್ಯಾಂಕ್‌ನ ಸಾಧನೆ ಸಹಿಸದವರು ಟೀಕೆ ಮಾಡುತ್ತಿದ್ದಾರೆ. ಪ್ರೇರಕರು ಈ ಟೀಕಾಕಾರರಿಗೆ ತಕ್ಕ ಪಾಠ ಕಲಿಸಬೇಕು. ಬ್ಯಾಂಕ್ ಅವಳಿ ಜಿಲ್ಲೆಯಲ್ಲಿ 4.40 ಲಕ್ಷಕ್ಕೂ ಎಚ್ಚು ಮಹಿಳೆಯರಿಗೆ ಸಾಲ ನೀಡಿ ಆರ್ಥಿಕವಾಗಿ ಸಬಲರಾಗಲು ಸಹಕಾರಿಯಾಗಿದೆ. ಬಡ ಮಹಿಳೆಯರನ್ನು ಬಡ್ಡಿ ಮಾಫಿಯಾದಿಂದ ಮುಕ್ತವಾಗಿಸುವುದು ಬ್ಯಾಂಕ್‌ನ ಗುರಿ’ ಎಂದು ಹೇಳಿದರು.

ಆನ್‌ಲೈನ್‌ನಲ್ಲಿ ದಾಖಲು: ‘ಮೊದಲ ಹಂತದಲ್ಲಿ 7,300 ಮಹಿಳಾ ಸ್ವಸಹಾಯ ಸಂಘಗಳನ್ನು ಇ-ಶಕ್ತಿ ಯೋಜನೆ ವ್ಯಾಪ್ತಿಗೆ ತರಲಿದ್ದು, 73 ಸಾವಿರ ಮಹಿಳೆಯರು ಈ ಸಂಘಗಳ ಸದಸ್ಯರಾಗಿದ್ದಾರೆ. ಮಹಿಳಾ ಸ್ವಸಹಾಯ ಸಂಘಗಳ ಸಭೆ, ಸಾಲ ವಿತರಣೆ, ಸಾಲ ಮರುಪಾವತಿ, ಉಳಿತಾಯ ಸೇರಿದಂತೆ ಎಲ್ಲಾ ಚಟುವಟಿಕೆಗಳು ಆನ್‌ಲೈನ್‌ನಲ್ಲಿ ದಾಖಲಾಗಬೇಕು’ ಎಂದು ತಿಳಿಸಿದರು.

‘ಮಹಿಳಾ ಸಂಘಗಳಿಗೆ ಪ್ರತ್ಯೇಕ ಬಳಕೆದಾರರ ಐ.ಡಿ ಹಾಗೂ ಪಾಸ್‌ವರ್ಡ್‌ ನೀಡಲಾಗುತ್ತದೆ. 30 ಸಂಘಗಳಿಗೆ ಒಬ್ಬರಂತೆ ನೇಮಕಗೊಂಡಿರುವ ಪ್ರೇರಕರು ಆನ್‌ಲೈನ್‌ನಲ್ಲಿ ಮಾಹಿತಿ ದಾಖಲು ಮಾಡಬೇಕು. ಈ ಕೆಲಸ ಡಿ.31ರೊಳಗೆ ಪೂರ್ಣಗೊಳ್ಳಬೇಕು’ ಎಂದು ಸೂಚಿಸಿದರು.

ಸಂಭಾವನೆ: ‘ಹೆಚ್ಚು ಶಿಕ್ಷಣ ಪಡೆದ ಬುದ್ಧಿವಂತ ಹೆಣ್ಣು ಮಕ್ಕಳನ್ನೇ ಪ್ರೇರಕರಾಗಿ ಆಯ್ಕೆ ಮಾಡಲಾಗಿದೆ. ಇವರಿಗೆ ತಿಂಗಳಿಗೆ ₹ 4,200 ಸಂಭಾವನೆ ಸಿಗಲಿದೆ. ಜತೆಗೆ ಮೊಬೈಲ್‌ ಸೇವೆಗಾಗಿ ₹ 250 ನೀಡಲಾಗುತ್ತದೆ. ಪ್ರೇರಕರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು’ ಎಂದು ತಾಕೀತು ಮಾಡಿದರು.

‘ಮಹಿಳೆಯರು ಸಾಲ ಹೇಗೆ ಉಪಯೋಗಿಸಿಕೊಳ್ಳಬೇಕು, ಮರು ಪಾವತಿ, ಸಭೆ ನಡೆಸುವುದು, ಚಟುವಟಿಕೆ ಮಾಡುವುದನ್ನು ಗಮನಿಸಲಾಗುತ್ತದೆ. ಈ ಚಟುವಟಿಕೆ ನಡೆಯದಿದ್ದರೆ ಸಂಘದಲ್ಲಿ ಲೋಪವಿದೆ ಎಂದು ಗಮನಕ್ಕೆ ಬರುತ್ತದೆ. ಇದರಿಂದ ಸಮಸ್ಯೆ ತಕ್ಷಣ ಬಗೆಹರಿಸಲು ಸಹಕಾರಿಯಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಬ್ಯಾಂಕ್‌ನ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಖಲೀಂ ಉಲ್ಲಾ, ಹುಸೇನ್ ದೊಡ್ಡಮುನಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT