ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ| ಜಿಲ್ಲೆಯಲ್ಲಿ ಶೈಕ್ಷಣಿಕ ಕ್ರಾಂತಿಗೆ ಸಂಕಲ್ಪ- ನಿರ್ಮಲಾನಂದನಾಥ ಸ್ವಾಮೀಜಿ

ಬಿಜಿಎಸ್‌ ಪಿಯು ವಿದ್ಯಾರ್ಥಿಗಳಿಗೆ ಬಿಸಿಯೂಟ ವ್ಯವಸ್ಥೆಗೆ ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ
Published : 2 ಸೆಪ್ಟೆಂಬರ್ 2023, 15:31 IST
Last Updated : 2 ಸೆಪ್ಟೆಂಬರ್ 2023, 15:31 IST
ಫಾಲೋ ಮಾಡಿ
Comments

ಕೋಲಾರ: ‘ಜಿಲ್ಲೆಯಲ್ಲಿ ಮುಂಬರುವ ದಿನಗಳಲ್ಲಿ ಶೈಕ್ಷಣಿಕ ಕ್ರಾಂತಿಗಾಗಿ ಆದಿಚುಂಚನಗಿರಿ ಮಠದಿಂದ ಸಂಕಲ್ಪ ಮಾಡಲಾಗುತ್ತಿದೆ’ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ನಗರದ ಬಿಜಿಎಸ್ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಚೈತನ್ಯ ಪ್ರಸಾದ ಹೆಸರಲ್ಲಿ ಮಧ್ಯಾಹ್ನ ಬಿಸಿಯೂಟದ ವ್ಯವಸ್ಥೆಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಸಮಾಜದಲ್ಲಿ ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದ, ನೊಂದ ಸಮುದಾಯ‌ಗಳ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಶ್ರೀಮಠ ಮುಂದಾಗಿದೆ’ ಎಂದರು.

‘ಬಿಜಿಎಸ್ ಪಿಯು ಕಾಲೇಜಿನಲ್ಲಿ ಬಿ.ಎಸ್ಸಿ ಹಾಗೂ ಬಿ.ಕಾಂ ಪದವಿಯ ತರಗತಿ ಪ್ರಾರಂಭಿಸಲು ಚಿಂತಿಸಿದ್ದು, ಅಗತ್ಯ ಕ್ರಮ ವಹಿಸಲಾಗುವುದು’ ಎಂದು ಹೇಳಿದರು.

‘ಅನ್ನವೇ ಪರಬ್ರಹ್ಮ. ಹಸಿವಿನಿಂದ ನೊಂದವರಿಗೆ ಅನ್ನ ನೀಡಿ ಸಾರ್ಥಕತೆ ಮೆರೆಯಿರಿ. ತಿರಸ್ಕಾರ ಮಾಡುವ ಮನೋಭಾವ ಬಿಟ್ಟು ಪೂಜಿಸುವ ಮನೋಭಾವ ಬೆಳೆಸಿಕೊಳ್ಳಿ’ ಎಂದು ಸಲಹೆ ನೀಡಿದರು.

‘ಆದಿಚುಂಚನಗಿರಿ ಮಠವು ಅನ್ನದಾಸೋಹದಿಂದ ಹಿಡಿದು ವಿವಿಧ ದಾಸೋಹಗಳ ಮೂಲಕ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದೆ. ಶ್ರೀಮಠದ ವಿದ್ಯಾರ್ಥಿಗಳು ಕೂಡ ಸೇವಾ ಕ್ಷೇತ್ರಗಳಲ್ಲಿ ತೊಡಗಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕ ಕೊತ್ತೂರು ಮಂಜುನಾಥ್, ವಿಧಾನ ಪರಿಷತ್‌ ಸದಸ್ಯರಾದ ಇಂಚರ ಗೋವಿಂದರಾಜು, ಎಂ.ಎಲ್.ಅನಿಲ್‍ಕುಮಾರ್, ಐಪಿಎಸ್‌ ಅಧಿಕಾರಿ ಡಿ.ದೇವರಾಜ್, ಮುಖಂಡರಾದ ನಂದಿನಿ ಪ್ರವೀಣ್‍ಗೌಡ, ಕೃಷ್ಣಾರೆಡ್ಡಿ, ಕೆ.ವಿ.ಶಂಕರಪ್ಪ, ಡಾ.ಚಂದ್ರಶೇಖರ್ ಇದ್ದರು.

‘ಇಸ್ರೊದಿಂದ ಹೆಮ್ಮೆಯ ಸಾಧನೆ’ ‘ಇಸ್ರೊ ಎಲ್ಲರೂ ಹೆಮ್ಮೆಪಡುವ ಸಾಧನೆ ಮಾಡಿದೆ. ಸೂರ್ಯನ ಅಧ್ಯಯನಕ್ಕೆ ಮುಂದಾಗಿದ್ದು ಶುಭ ಕೋರುತ್ತೇನೆ. ಇದು ಮತ್ತೊಂದು ಮೈಲಿಗಲ್ಲು ಸ್ಥಾಪಿಸಲು ಹೊರಟಿದೆ. ಸೂರ್ಯನು ಭೂಮಿಯಿಂದ ಸುಮಾರು 15 ಕೋಟಿ ಕಿ.ಮೀ ದೂರವಿದೆ. ಆದಿತ್ಯ ಎಲ್‌–1 ಭೂಮಿಯಿಂದ 15 ಲಕ್ಷ ಕಿ.ಮೀ ದೂರಕ್ಕೆ ಹೋಗಿ ಸೂರ್ಯನ ವಿಚಾರಗಳನ್ನು ಅಧ್ಯಯನ ಮಾಡಲಿದೆ. ಈ ಕಾರ್ಯಾಚರಣೆ ಯಶಸ್ಸು ಕಾಣಲಿ. ಈಗಾಗಲೇ ಚಂದ್ರಯಾನ–3 ಯಶಸ್ಸು ಕಂಡಿದೆ’ ಎಂದು ನಿರ್ಮಲಾನಂದನಾಥ ಸ್ವಾಮಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT